ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಆವರಣದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ದೆಹಲಿಯಲ್ಲಿ ಕಳೆದ ನಾಲ್ಕು ದಿನದಲ್ಲಿ ಸಿಎಎ ವಿರೋಧಿ ಹೋರಾಟಗಾರರ ಮೇಲೆ ನಡೆಯುತ್ತಿರುವ ಮೂರನೇ ದಾಳಿ ಇದಾಗಿದೆ. ಈ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಈ ಕುರಿತು ಜಾಮಿಯಾ ಸಮನ್ವಯ ಸಮಿತಿ (ಜೆಸಿಸಿ) ಹೊರಡಿಸಿದ ಹೇಳಿಕೆಯಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಕಳೆದ ಹಲವು ದಿನಗಳಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ನಿನ್ನೆ ರಾತ್ರಿ ಕೆಂಪು ಬಣ್ಣದ ಮೋಟಾರ್ ಸೈಕಲ್ನಲ್ಲಿ ಆಗಮಿಸಿದ ಇಬ್ಬರು ವ್ಯಕ್ತಿಗಳು ಪ್ರತಿಭಟನಾನಿರತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳಲ್ಲೊಬ್ಬ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ವಿವಿಧ ಕಲಂ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದುಎಂದು ತಿಳಿಸಿದ್ದಾರೆ.
ಗುರುವಾರ ಜಾಮಿಯಾದಿಂದ ರಾಜ್ಘಾಟ್ ಕಡೆಗೆ ಮೆರವಣಿಗೆ ನಡೆಸಲು ಸಿಎಎ ವಿರೋಧಿ ಪ್ರತಿಭಟನಾಕಾರರು ಸಿದ್ದತೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕ ಬಾಲಕನೊಬ್ಬ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯಕ್ಕೊಳಗಾಗಿದ್ದ. ಬಳಿಕ ಕಳೆದ ಶನಿವಾರ 25 ವರ್ಷದ ಯುವಕ ದೆಹಲಿಯ ಶಾಹಿನ್ ಬಾಗ್ನಲ್ಲಿ ಸಿಎಎ ಪ್ರತಿಭಟನಾಕಾರರ ಎದುರು ಗಾಳಿಯಲ್ಲಿ ಎರಡು ಸುತ್ತಿನ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ