*ತೈಲ ಬೆಲೆ ಏರಿಸಿ ಕೈಗೆ ಗ್ಯಾರೆಂಟಿ ಚೊಂಬು ಕೊಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕೆ*
ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದೆ
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಗ್ಯಾರೆಂಟಿ.. ಗ್ಯಾರೆಂಟಿ ಎಂದು ಬಾಯಿ ಬಡಿದುಕೊಳ್ಳೋ ಕಾಂಗ್ರೆಸ್ ಸರ್ಕಾರ ಈಗ ತೈಲ ಬೆಲೆ ಏರಿಸುವ ಮೂಲಕ ಜನರ ಕೈಗೆ ಅಕ್ಷರಶಃ ಚೊಂಬು ಕೊಟ್ಟಿದೆ ನೋಡಿ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.
‘ರಾಜ್ಯದಲ್ಲಿ ಅಭಿವೃದ್ಧಿ ಮಾತ್ರ ಕೇಳ್ಬೇಡಿ, ತಗೊಳ್ರಪ್ಪ ಕೊಟ್ರು ಚೊಂಬು…” ಎಂದು ತಮ್ಮ ನೈಜ ವರಸೆಯಲ್ಲೇ ರಾಜ್ಯ ಸರ್ಕಾರದ ವಿರುದ್ಧ ಹರಿ ಹಾಯ್ದಿದ್ದಾರೆ.
ಬೆಲೆ ಏರಿಕೆ ಬಗ್ಗೆ ಉದ್ದುದ್ದ ಭಾಷಣ ಬಿಗಿದು, ಕೇಂದ್ರ ಸರ್ಕಾರದತ್ತ ಬೊಟ್ಟು ತೋರಿಸಿ ಜನರ ದಿಕ್ಕು ತಪ್ಪಿಸುತ್ತ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ರಾಜ್ಯದ ಜನಸಾಮಾನ್ಯರಿಗೆ ತಾನೇ ಬೆಲೆ ಏರಿಕೆ ಬಿಸಿ ತಟ್ಟಿಸಿದೆ ಎಂದು ಜೋಶಿ ಕಿಡಿ ಕಾರಿದರು.
ಕೇಂದ್ರ ಸರ್ಕಾರ ಇಂಧನ ಬೆಲೆ ಕಡಿಮೆ ಮಾಡಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿ ಜನರಿಗೆ ಹೊರೆ ಮಾಡಿದೆ ಎಂದು ಖಂಡಿಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಭ್ರಷ್ಟಾಚಾರ, ದುರಾಡಳಿತ, ರೈತರ ಆತ್ಮಹತ್ಯೆ, ಹಗರಣಗಳ ಭಾಗ್ಯಗಳನ್ನು ನೀಡಿದೆಯೇ ಹೊರತು ಜನರ ಪಾಲಿಗೆ ಭಾಗ್ಯಶಾಲಿಯಾಗಿ ಉಳಿದಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ 1.5 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನೇ ಕೈಗೊಂಡಿಲ್ಲ. ಈಗ ನೇರವಾಗಿ ಜನರ ಜೇಬಿಗೇ ಕತ್ತರಿ ಹಾಕುವ ಕೆಲಸಕ್ಕೆ ಕೈ ಹಾಕಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ