ಪ್ರವಾಹ-ಪುನರ್ವಸತಿ : ಕೇಂದ್ರ ಸಚಿವರ ಸಭೆ
- ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸಲು ಕೇಂದ್ರ ಸಚಿವ ಸುರೇಶ್ ಅಂಗಡಿ ಸೂಚನೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಪ್ರವಾಹ ಮತ್ತು ಮಳೆಯಿಂದಾಗಿ ಬಡವರು ಮನೆ ಕಳೆದುಕೊಂಡಿರುವುದರಿಂದ
ಬರೀ ನಿಯಮಾವಳಿ ಪಾಲನೆಗೆ ಒತ್ತು ನೀಡದೇ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಬೇಕು ಎಂದು ರೈಲ್ವೆ ಖಾತೆ ರಾಜ್ಯ
ಸಚಿವರಾದ ಸುರೇಶ್ ಅಂಗಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಹ ಸಂತ್ರಸ್ತರ ಪುನರ್ವಸತಿ ಹಾಗೂ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ
ಸೋಮವಾರ(ಆ.19) ನಡೆದ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಹಾಗೂ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ತಕ್ಷಣಕ್ಕೆ
ನೀಡಲಾಗುವ ಹತ್ತು ಸಾವಿರ ರೂಪಾಯಿಯ ಚೆಕ್ ಗಳನ್ನು ಕಡ್ಡಾಯವಾಗಿ ಕುಟುಂಬದ ಮಹಿಳೆಯರ ಹೆಸರಿಗೆ ನೀಡಬೇಕು.
ಪರಿಹಾರ ಕೇಂದ್ರಗಳಲ್ಲಿ ಇರುವ ಸಂತ್ರಸ್ತರು ತಮ್ಮ ತಮ್ಮ ಮನೆಗೆ ಹಿಂದಿರುಗುವ ಮುಂಚೆ ಅವರಿಗೆ ನೀಡಬೇಕಾದ
ಪರಿಹಾರದ ಚೆಕ್ ಗಳನ್ನು ಕೂಡಲೇ ತಲುಪಿಸುವಂತೆ ಸೂಚನೆ ನೀಡಿದರು. ಮನೆ ಕಳೆದುಕೊಂಡಿರುವ ಜನರಿಗೆ ಪರಿಹಾರ ನೀಡಲು ಸತಾಯಿಸಿದರೇ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜನರು ಮನೆಗಳನ್ನು ಕಳೆದುಕೊಂಡು ಹದಿನೈದು ದಿನಗಳಾದರೂ ಕೆಲವು ಕುಟುಂಬಗಳಿಗೆ ಇದುವರೆಗೆ ಪರಿಹಾರ ನೀಡದಿರುವ
ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರಲ್ಲದೇ ಕೂಡಲೇ ಚೆಕ್ ಗಳನ್ನು ವಿತರಿಸಿ ವರದಿ ನೀಡುವಂತೆ ತಿಳಿಸಿದರು.
ತುಮ್ಮರಗುದ್ದಿ ಗ್ರಾಮದಲ್ಲಿ 22 ಮನೆಗಳು ಸಂಪೂರ್ಣ ಕುಸಿದಿವೆ. ಆದಾಗ್ಯೂ ಇದುವರೆಗೆ ಒಬ್ಬರಿಗೂ ಚೆಕ್ ನೀಡದಿರುವ
ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ವಿಳಂಬವಾಗಿರುವುದರಿಂದ ಸಂಸದರು, ಶಾಸಕರು ಅಥವಾ ಅಧಿಕಾರಿಗಳನ್ನು ಕಾಯದೇ ಅರ್ಹ ಸಂತ್ರಸ್ತರಿಗೆ
ಪರಿಹಾರ ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾಡಳಿತದ ಕೆಲಸ-ಮೆಚ್ಚುಗೆ :
ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆ, ಸ್ಥಳಾಂತರ ಹಾಗೂ ಪುನರ್ವಸತಿ ನಿಟ್ಟಿನಲ್ಲಿ ಜಿಲ್ಲಾಡಳಿತ ಉತ್ತಮ ಕೆಲಸ
ಮಾಡಿದೆ.
ಮುಖ್ಯಮಂತ್ರಿಗಳು ಇತ್ತೀಚೆಗೆ ಪ್ರಧಾನಮಂತ್ರಿಗಳ ಭೇಟಿ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಮೂಲಕ ತಮ್ಮ
ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಸುರೇಶ್ ಅಂಗಡಿ ತಿಳಿಸಿದರು.
ಪ್ರವಾಹ ಹಾಗೂ ಮಳೆಯಿಂದ ಮನೆ ಕುಸಿದಿರುವ ಬಗ್ಗೆ ಬರುವ ಶುಕ್ರವಾರದೊಳಗೆ ಸಮೀಕ್ಷೆ ನಡೆಸಿ, ಸಮಗ್ರ ಪಟ್ಟಿಯನ್ನು
ತಯಾರಿಸಿದ ಬಳಿಕ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಡಾ.ಕವಿತಾ
ಯೋಗಪ್ಪನವರ ತಿಳಿಸಿದರು.
ತಹಶೀಲ್ದಾರ ಮಂಜುಳಾ ನಾಯಕ ಮಾತನಾಡಿ, ಸಂತ್ರಸ್ತರಿಗೆ ನೀಡಬೇಕಾಗಿರುವ ತಕ್ಷಣದ ಹತ್ತು ಸಾವಿರ ರೂಪಾಯಿ
ಪರಿಹಾರದ ಮೊದಲ ಕಂತು 3800 ರೂಪಾಯಿ ಚೆಕ್ ಅನ್ನು ಅನೇಕ ಜನರಿಗೆ ನೀಡಲಾಗಿದೆ. ಉಳಿದ 6200 ಮೊತ್ತದ ಚೆಕ್
ನೀಡುವ ಕೆಲಸ ಭರದಿಂದ ನಡೆದಿದೆ ಎಂದು ವಿವರಣೆ ನೀಡಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮದಲ್ಲಿ ಮನೆ ಕಳೆದುಕೊಂಡಿರುವ
ಕುಟುಂಬಗಳ ಮಾಹಿತಿ ಇಂದು ಸಂಜೆಯೇ ನೀಡಿದರೆ ತಕ್ಷಣವೇ ಪರಿಹಾರ ಚೆಕ್ ನೀಡಲಾಗುವುದು ಎಂದು ತಿಳಿಸಿದರು.
ಯಮಕನಮರಡಿ ಹಾಗೂ ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆ ಕುಸಿದಿರುವ ಬಗ್ಗೆ
ಹಾಗೂ ಪರಿಹಾರ ವಿತರಣೆ ಕುರಿತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತರು (ಕಂದಾಯ) ಎಸ್.ಬಿ ದೊಡಗೌಡರ, ಬೆಳಗಾವಿ ಗ್ರೆಡ್ 2
ತಹಶಿಲ್ದಾರರಾದ ವಿ.ಎಮ್ ಗೊಟೇಕರ ಸೇರಿದಂತೆ ಇತರರು ಉಪಸ್ಥಿತರಿದ್ದರು./////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ