Kannada NewsKarnataka NewsLatest

*ಸಿಎಂ ಏಕವಚನ ಮಾತಿಗೆ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಅಹಿಂದ, ನಾರಿ ಶಕ್ತಿ ಎನ್ನುತ್ತ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯನವರೇ ಬುಡಕಟ್ಟು ಸಮುದಾಯದಿಂದ ಬಂದಂತಹ ಮಹಿಳಾ ರಾಷ್ಟ್ರಪತಿಗೆ ಕೊಡುವ ಗೌರವ ಇದೇನಾ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರೇ ನಿಮಗೂ ನಿಮ್ಮ ಪಕ್ಷಕ್ಕೂ ಅದೇನು ಮಂಕು ಬಡಿದಿದೆ! ಸಂವಿಧಾನದ ಪರಮೋಚ್ಛ ಸ್ಥಾನದಲ್ಲಿ ಇರುವ, ಅದರಲ್ಲೂ ದೇಶದ ಓರ್ವ ಮಹಿಳಾ ಪ್ರಥಮ ಪ್ರಜೆ ಬಗ್ಗೆ ಏಕವಚನದಲ್ಲಿ ಮಾತನಾಡುವುದೇ ನಿಮ್ಮ ಸಂಸ್ಕೃತಿ ಆಗಿದೆಯೇ? ಎಂದು ಟ್ವೀಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಕವಚನದ ಶೋಕಿ:
ದೇಶದ ಪ್ರಧಾನಿಯನ್ನು, ರಾಷ್ಟ್ರಪತಿಯನ್ನು ಏಕವಚನದಲ್ಲಿ ಕರೆಯೋ ಶೋಕಿ ಮಾಡುತ್ತೀರಿ. ಮಹಿಳಾ ರಾಷ್ಟ್ರಪತಿ ಬಗ್ಗೆ ಬಹಿರಂಗ ಸಭೆಯಲ್ಲೇ ಏಕವಚನದಲ್ಲೇ ಮಾತನಾಡುವ ನಿಮ್ಮ ಸಂಸ್ಕೃತಿ- ಸಭ್ಯತೆ ಇದೇನಾ? ಎಂದು ಪ್ರಹ್ಲಾದ ಜೋಶಿ ಹರಿ ಹಾಯ್ದಿದ್ದಾರೆ.

ಇದು, ರಾಷ್ಟ್ರಪತಿಗೆ ಅದರಲ್ಲೂ ಓರ್ವ ಮಹಿಳಾ ರಾಷ್ಟ್ರಪತಿಗೆ ನೀವು ಅಗೌರವ ತೋರಿದಂತೆ ಎಂದು ಹೇಳಿದ್ದಾರೆ.

ದುರಹಂಕಾರ ನಿಮ್ಮ ಮತ್ತು ಪಕ್ಷದ ಅವನತಿಗೆ ಬುನಾದಿ ಆಗಲಿದೆ ಎಚ್ಚರ:
ಸಿದ್ದರಾಮಯ್ಯ ಅವರೇ, ನಿಮ್ಮ ಎಲುಬಿಲ್ಲದ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಈ ದುರಹಂಕಾರ ನಿಮ್ಮ ಹಾಗೂ ನಿಮ್ಮ ಪಕ್ಷದ ಅವನತಿಗೆ ಬುನಾದಿಯಾಗಲಿದೆ ಎಂದು ಸಚಿವ ಜೋಶಿ ಎಚ್ಚರಿಸಿದ್ದಾರೆ.

ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್ ಗೆ ಗೌರವವಿಲ್ಲ ಎಂಬುದು ಪದೇಪದೆ ಸಾಬೀತಾಗುತ್ತಿದೆ. ದೇಶದ ಪ್ರಥಮ ಪ್ರಜೆ ಬಗ್ಗೆ ಅಪಮಾನಕಾರಿ ಮಾತುಗಳನ್ನಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆಯೇ ಇದ್ದಂತಿದೆ ಎಂದು ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧೀರ ರಂಜನ್ ಚೌಧರಿ ನಂತರ ಈಗ ಸಿದ್ದರಾಮಯ್ಯ ಸರದಿ… ಕೆಲವೇ ದಿನಗಳ ಹಿಂದೆ ಕಾಂಗ್ರೆಸ್ ಮೈತ್ರಿಯ ಪಟಾಲಂ ಕೂಡ ಉಪರಾಷ್ಟ್ರಪತಿಗಳನ್ನು ಸಂಸತ್ ಆವರಣದಲ್ಲೇ ಅಪಹಾಸ್ಯ ಮಾಡಿತ್ತು. ಪರಿಣಾಮ ಕಲಾಪದಿಂದ ಬಹಿಷ್ಕರಿಸಲಾಗಿತ್ತು ಎಂಬುದನ್ನು ಮರೆಯಬೇಡಿ ಎಂದು ಸಚಿವ ಜೋಶಿ ಎಚ್ಚರಿಸಿದ್ದಾರೆ.

ತಪ್ಪೊಪ್ಪಿಕೊಳ್ಳಲಿ ಸಿಎಂ: ಇಂತಹ ಬೇಜವಾಬ್ದಾರಿ ನಡವಳಿಕೆ ಅತ್ಯಂತ ಪ್ರಜಾಪ್ರಭುತ್ವಕ್ಕೆ ಮಾರಕ. ಮಾತೆತ್ತಿದರೆ ಸಂವಿಧಾನ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ತಪ್ಪೊಪ್ಪಿಕೊಳ್ಳಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button