*Shocking News* *KLE ಚೇರಮನ್ ಹುದ್ದೆಯಿಂದ ಪ್ರಭಾಕರ ಕೋರೆ ನಿರ್ಗಮನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರತಿಷ್ಠಿತ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ (KLE)ಯನ್ನು 40 ವರ್ಷಗಳ ಕಾಲ ಆಳುವ ಮೂಲಕ ಸಂಸ್ಥೆಗೆ ಜಾಗತಿಕ ಮನ್ನಣೆ ತಂದುಕೊಟ್ಟು ಸುವರ್ಣಯುಗವನ್ನಾಗಿಸಿದ್ದ ಡಾ.ಪ್ರಭಾಕರ ಕೋರೆ ಚೇರಮನ್ ಹುದ್ದೆಯಿಂದ ಹಠಾತ್ ಹಿಂದಕ್ಕೆ ಸರಿದಿದ್ದಾರೆ.
ಗುರುವಾರ ರಾತ್ರಿ ನಡೆದ ಬೆಳವಣಿಗೆಯಲ್ಲಿ ತಮ್ಮ ನಾಮಪತ್ರ ಹಿಂದಕ್ಕೆ ಪಡೆಯುವ ಮೂಲಕ 1985ರಿಂದ ಅಲಂಕರಿಸಿದ್ದ ಪ್ರತಿಷ್ಠಿತ ಹುದ್ದೆಯನ್ನು ಬಿಟ್ಟುಕೊಟ್ಟಿದ್ದಾರೆ. ಕೋರೆಯವರು ತಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದಾಗಿ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊರೆಯವರ ಪುತ್ರಿ ಡಾ.ಪ್ರೀತಿ ದೊಡವಾಡ ನೂತನ ನಿರ್ದೇಶಕ ಮಂಡಳಿಯಲ್ಲಿದ್ದು, ಪುತ್ರ ಅಮಿತ್ ಕೋರೆ ಸಹ ಮುಂದುವರಿದಿದ್ದಾರೆ.
ಮಹಾಂತೇಶ ಕೌಜಲಗಿ ಅಧ್ಯಕ್ಷರಾಗಿ, ಬಸವರಾಜ ತಟವಟಿ ಉಪಾಧ್ಯಕ್ಷರಾಗಿ, ಅಮಿತ್ ಕೋರೆ, ಪ್ರವೀಣ ಬಾಗೇವಾಡಿ, ಪ್ರೀತಿ ದೊಡವಾಡ, ಮಹಾಂತೇಶ ಕವಟಗಿಮಠ, ಮಲ್ಲಿಕಾರ್ಜುನ ಕೊಳ್ಳಿ, ವಿಜಯ ಮೆಟಗುಡ್, ಜಯಾನಂದ ಮುನವಳ್ಳಿ, ಮಂಜುನಾಥ ಮುನವಳ್ಳಿ, ಬಸವರಾಜ ಪಾಟೀಲ, ವಿಶ್ವನಾಥ ಪಾಟೀಲ, ಯಲ್ಲನಗೌಡ ಪಾಟೀಲ, ಅನಿಲ ಪಟ್ಟೇದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುವರ್ಣಯುಗ ತಂದ ಕೋರೆ

36 ಅಂಗ ಸಂಸ್ಥೆಗಳಿಂದ 316 ಅಂಗಸಂಸ್ಥೆಗಳಿಗೆ ಏರಿಸುವ ಮೂಲಕ ಕೆಎಲ್ಇ ಸಂಸ್ಥೆಗೆ ಅಕ್ಷರಶಃ ಸುವರ್ಣ ಯುಗವನ್ನು ತಂದುಕೊಟ್ಟಿದ್ದ ಪ್ರಭಾಕರ ಕೋರೆ ನಿರ್ಗಮನ ಸಂಸ್ಥೆಗಷ್ಟೇ ಅಲ್ಲ, ಇಡೀ ರಾಜ್ಯಕ್ಕೇ ದೊಡ್ಡ ಶಾಕ್ ಆಗಿದೆ.
ತಮ್ಮ 36ನೇ ವಯಸ್ಸಿನಲ್ಲಿ ಕೆಎಲ್ಇ ಚುಕ್ಕಾಣಿ ಹಿಡಿದು ಮಿಂಚಿನ ವೇಗದಲ್ಲಿ ಸಂಸ್ಥೆಯನ್ನು ಬೆಳೆಸಿದವರು ಕೋರೆಯವರು. ಇಷ್ಟು ಬೇಗ ಅವರು ಹಿಂದಕ್ಕೆ ಸರಿಯುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ.
ಕಳೆದ 40 ವರ್ಷಗಳಲ್ಲಿ ಆಡಳಿತ ನಡೆಸಿದ ಬಹುತೇಕ ಎಲ್ಲ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳನ್ನು ಕೆಎಲ್ಇ ಸಂಸ್ಥೆಗೆ ಕರೆಸುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದು, ಪ್ರಭಾಕರ ಕೋರೆ. ಸಾಗರದಾಚೆಗೂ ಕೆಎಲ್ಇ ಸಂಸ್ಥೆಯನ್ನು ದಾಟಿಸಿ, ವಿಶ್ವ ಮಾನ್ಯತೆ ಕೊಡಿಸಿದವರು ಅವರು.
ನಿರ್ದೇಶಕ ಸ್ಥಾನದಿಂದ ಬೇರೆ ಯಾರೂ ಹಿಂದಕ್ಕೆ ಸರಿಯಲು ಒಪ್ಪದ ಕಾರಣ ಚುನಾವಣೆ ನಡೆಯುವುದನ್ನು ತಪ್ಪಿಸಲೆಂದು ಕೋರೆಯವರು ತಾವೇ ಹಿಂದಕ್ಕೆ ಸರಿದರಾ ಎನ್ನುವ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ನಮ್ಮ ಮನೆಯಲ್ಲೇ ಮೂವರು ಆಡಳಿತ ಮಂಡಳಿಯಲ್ಲಿ ಇರುವುದು ಸರಿಯಲ್ಲ ಎಂದು ಹೇಳಿ ತಾವು ನಾಮಪತ್ರ ಹಿಂದಕ್ಕೆ ಪಡೆದರು ಎಂದು ಸುದ್ದಿಮೂಲಗಳು ತಿಳಿಸಿವೆ. ಇನ್ನೊಂದು ಮೂಲಗಳ ಪ್ರಕಾರ ಯುವಕರಿಗೆ ಅವಕಾಶ ಮಾಡಿಕೊಡಬೇಕೆನ್ನುವ ದೃಷ್ಟಿಯಿಂದ ಹಿಂದೆ ಸರಿದಿದ್ದಾರೆ.
ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಬೀಳಲು ಕೊಡದೆ ಮಾರ್ಗದರ್ಶಕರಾಗಿದ್ದು, ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಫೆಬ್ರವರಿ 8ರಂದು ಕೆಎಲ್ಇ ಸಂಸ್ಥೆಗೆ ನೂತನ ಚೇರಮನ್ ಆಯ್ಕೆ ನಡೆಯಲಿದ್ದು, ಕೊರೆಯವರು ನಿರ್ಮಿಸಿದ ದಾಖಲೆ ಮಾತ್ರ ಕೆಎಲ್ಇ ಇತಿಹಾಸದಲ್ಲಿ ಎಂದೂ ಅಳಿಸಲಾಗದ ದಾಖಲೆಯಾಗಿಯೇ ಇರಲಿದೆ. ಕೆಎಲ್ಇ ಸಂಸ್ಥೆಯನ್ನು ಸ್ಥಾಪಿಸಿದ ಸಪ್ತ ಋಷಿಗಳ ಸಾಲಿನಲ್ಲಿ ಸ್ಥಾನಪಡೆದು ಅಷ್ಟಮ ಋುಷಿ ಎನ್ನುವುದಕ್ಕೆ ಅವರು ಅರ್ಹರಾಗಿದ್ದಾರೆ.





