ಪ್ರವಾಹ ಸಂಕಷ್ಟಕ್ಕಿಲ್ಲದ ಸ್ಪಂದನೆ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ತಿಂಗಳ ಮೇಲಾಯಿತು. ಜನ ತತ್ತರಿಸಿಹೋಗಿದ್ದಾರೆ. ಶಾಕ್ ನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಪರಿಹಾರ ಕೇಂದ್ರಗಳಲ್ಲಿ ಆಶ್ರಯಪಡೆದವರು ಇನ್ನೂ ಮನೆಗಳಿಗೆ ಮರಳುವ ಸ್ಥಿತಿಯಲ್ಲಿಲ್ಲ. ಹಲವರು ಮನೆಗಳನ್ನು ಕಳೆದುಕೊಂಡಿದ್ದಾರೆ. ಕೆಲವೆಡೆ ಗ್ರಾಮಕ್ಕೆ ಗ್ರಾಮವೇ ನಾಶವಾಗಿದೆ. ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಸಂದತ್ರಸ್ತರಿದ್ದಾರೆ.
ಕೇಂದ್ರದ ನಾಲ್ವರು ಸಚಿವರು ಸೇರಿದಂತೆ, ಮುಖ್ಯಮಂತ್ರಿಗಳು, ರಾಜ್ಯದ ಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಣ್ಣೀರು ಸುರಿಸಿದ್ದಾರೆ. ಯಡಿಯೂರಪ್ಪ ನಾಲ್ಕು ಬಾರಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಆದರೆ ಆಗಿದ್ದೇನು?
ಈಗಿನ ಅಂದಾಜಿನಂತೆ ರಾಜ್ಯದಲ್ಲಿ ಪ್ರವಾಹಕ್ಕೆ 50 ಸಾವಿರ ಕೋಟಿ ರೂ.ಗಳಷ್ಟು ಹಾನಿಯಾಗಿದೆ. ಮುಖ್ಯಮಂತ್ರಿಗಳೂ ಇದನ್ನು ಹೇಳಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ತರಾತುರಿಯಲ್ಲಿ ಬಂದು ಹೋಗಿದ್ದನ್ನು ನೋಡಿದವರು ಕೇಂದ್ರದಿಂದ ದೊಡ್ಡ ಪ್ರಮಾಣದಲ್ಲಿ ಪರಿಹಾರ ಹರಿದು ಬರಲಿದೆ ಎಂದೇ ಭಾವಿಸಿದ್ದರು.
ಕೇಂದ್ರದ ಇನ್ನಿಬ್ಬರು ಸಚಿವರಾದ ಪ್ರಹಲ್ಲಾದ ಜೋಶಿ ಹಾಗೂ ಸುರೇಶ ಅಂಗಡಿ, ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವದಿ ಸಹ ಪ್ರವಾಹ ಪೀಡಿತ ಪ್ರದೇಶವನ್ನೇ ಪ್ರತಿನಿಧಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಸರಕಾರವೇ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಪರಿಹಾರ ಹಣ ಬರಲಿದೆ ಎಂದೇ ಭಾವಿಸಲಾಗಿತ್ತು.
ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ
ಇಷ್ಟೆಲ್ಲ ಆದರೂ ಕೇಂದ್ರ ಸರಕಾರ ಈವರೆಗೂ ಒಂದು ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ತುರ್ತು ಪರಿಹಾರವನ್ನೂ ಕೊಟ್ಟಿಲ್ಲ. ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಕೇಂದ್ರದ ನಿಯೋಗವೂ ಬಂದು ಪರಿಶೀಲನೆ ಮಾಡಿ ಹೋಗಿದೆ.
ರಾಜ್ಯದಲ್ಲಿ 25 ಜನ ಬಿಜಪಿಯ ಸಂಸದರಿದ್ದಾರೆ. ಬಿಜೆಪಿಯ ರಾಜ್ಯದಲ್ಲಿ ಸರಕಾರವೇ ಇದೆ. ಇಷ್ಟಾದರೂ ಕೇಂದ್ರ ಸ್ಪಂದಿಸದಿರುವುದು ಜನಸಾಮಾನ್ಯರಿಗಿರಲಿ, ಸ್ವತಃ ಬಿಜೆಪಿ ನಾಯಕರಿಗೂ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯ ಯಾವ ನಾಯಕರೂ ಸಂತ್ರಸ್ತರಿಗೆ ಮುಖ ತೋರಿಸುವ ಸ್ಥಿತಿಯಲ್ಲಿ ಇಲ್ಲ. ಅವರ ಗೋಳನ್ನು ನೋಡುವ ಧೈರ್ಯ ಹೊಂದಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಂಕೇತಿಕವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಶೃದ್ಧಾಂಜಲಿ ಸಲ್ಲಿಸುವ ಚಿತ್ರಗಳು ವೈರಲ್ ಆಗಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಫೋಟೋಗಳಿಗೆ ಹಾರ ಹಾಕಿ, ಕನ್ನಡಿಗರ ಕಷ್ಟಕ್ಕೆ ಸ್ಪಂದಿಸದ ಕೇಂದ್ರ ಹಾಗೂ ರಾಜ್ಯ ಸಕಾರಕ್ಕೆ ಭಾವಪೂರ್ಣ ಶೃದ್ಧಾಂಜಲಿ ಎಂದು ಬರೆಯಲಾಗಿದೆ.
ಯಡಿಯೂರಪ್ಪನವರ ಮೇಲೆ ಸಿಟ್ಟು?
ಕೇಂದ್ರ ಸರಕಾರಕ್ಕೆ ಯಡಿಯೂರಪ್ಪನವರ ಮೇಲೆ ಸಿಟ್ಟಿದೆ ಆ ಕಾರಣಕ್ಕಾಗಿಯೇ ಪ್ರವಾಹ ಪರಿಹಾರ ನೀಡುತ್ತಿಲ್ಲ. ರಾಜ್ಯದ ಯಾವುದೇ ಬೇಡಿಕೆಗೆ ಕೇಂದ್ರ ಸ್ಪಂದಿಸುತ್ತಿಲ್ಲ ಎನ್ನುವ ವದಂತಿ ಎಲ್ಲೆಡೆ ಹರಡಿದೆ. ಯಡಿಯೂರಪ್ಪನವರ ಮೇಲಿನ ಸಿಟ್ಟನ್ನು ನೆೆರೆ ಸಂತ್ರಸ್ತರ ಮೇಲೆ ಕೇಂದ್ರ ಸರಕಾರ ನಿಜವಾಗಿಯೂ ತೀರಿಸಿಕೊಳ್ಳುತ್ತಿದೆಯೇ? ಇಂತಹ ಕೀಳುಮಟ್ಟದ ರಾಜಕಾರಣ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಸಿಗದೆ ಜನರು ಕಂಗಾಲಾಗಿದ್ದಾರೆ.
ಇನ್ನಾದರೂ ಕೇಂದ್ರ ಸರಕಾರ ಪ್ರವಾಹ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಅವರಿಗೆ ಹೊಸಬದುಕನ್ನು ಕಟ್ಟಿಕೊಳ್ಳಲು ನೆರವಾಗಬೇಕಿದೆ.
ಸಂಬಂಧಿಸಿದ ಸುದ್ದಿಗಳು –
ಮುಖ್ಯಮಂತ್ರಿಗೆ ಮುಗ್ದ ಕಂದಮ್ಮನ ಶವದ ಸ್ವಾಗತ
ಪ್ರವಾಹ ಸಂತ್ರಸ್ತರಿಗೆ ದಂಡದಿಂದ ವಿನಾಯಿತಿ ಕೊಡಿ -ಲಕ್ಷ್ಮಿ ಹೆಬ್ಬಾಳಕರ್
ನೆರೆ ಪರಿಹಾರ ಕೊಡಿ -ಕೇಂದ್ರಕ್ಕೆ ಮೊರೆಹೋದ ಬಾಲಚಂದ್ರ ಜಾರಕಿಹೊಳಿ
ಮೋದಿ ಭೇಟಿಯಾದ ಯಡಿಯೂರಪ್ಪ ನಿಯೋಗಕ್ಕೆ ನಿರಾಸೆ: ಕೇಂದ್ರದಿಂದ ಸಧ್ಯ ಪರಿಹಾರ ಸಾಧ್ಯತೆ ಇಲ್ಲ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ