ಕಬ್ಬು ಸಾಗಾಟಕ್ಕೆ ಚಕ್ಕಡಿ ಗಾಡಿ ಬಳಕೆ: ಎತ್ತುಗಳ ಹಿಂಸೆ ತಪ್ಪಿಸಿ – ಡಾ.ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಿತಿ ಮೀರಿದ ಪ್ರಮಾಣದಲ್ಲಿ ಕಬ್ಬನ್ನು ಸಾಗಿಸಲು ಎತ್ತಿನ ಗಾಡಿಗಳನ್ನು ಬಳಸುವ ಮೂಲಕ ಪ್ರಾಣಿಗಳಿಗೆ ಚಿತ್ರಹಿಂಸೆ ನೀಡುವ ಪದ್ಧತಿಗೆ ಕಡಿವಾಣ ಹಾಕಬೇಕೆಂದು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ, ನಿಯತಿ ಫೌಂಡೇಶನ್ ಚೆರಮನ್, ಭಾರತೀಯ ಜನತಾಪಾರ್ಟಿಯ ಬೆಳಗಾವಿ ಗ್ರಾಮೀಣ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಒತ್ತಾಯಿಸಿದ್ದಾರೆ.
ಈ ಕುರಿತು ರಾಜ್ಯ ಪಶುಸಂಗೋಪನೆ ಸಚಿವ ಪ್ರಭು ಚೌಹ್ವಾಣ್, ಬೆಳಗಾವಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮತ್ತು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಗಮನ ಸೆಳೆದಿರುವ ಸರ್ನೋಬತ್, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಬೆಳಗಾವಿ ಜಿಲ್ಲೆ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಎತ್ತಿನ ಗಾಡಿಗಳಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ಕಬ್ಬನ್ನು ಸಾಗಿಸಲಾಗುತ್ತಿದೆ. 3 ರಿಂದ 4 ಟನ್ ಕಬ್ಬು ಹೇರಲಾಗುತ್ತಿದೆ. ಕೆಲವೊಮ್ಮೆ ಈ ವಿಷಯದಲ್ಲಿ ಸ್ಪರ್ಧೆಯೂ ನಡೆಯುತ್ತದೆ. ಇಂತಹ ಸ್ಪರ್ಧೆಗೆ ಕೆಲವು ಸಕ್ಕರೆ ಕಾರ್ಖಾನೆಗಳು ಕೂಡ ಬೆಂಬಲ ನೀಡುತ್ತವೆ. ಇದರಿಂದ ಎತ್ತುಗಳು ನಡೆಯಲಾಗದೆ ಪರದಾಡುವುದನ್ನು ಗಮನಿಸಬಹುದು. ಎತ್ತುಗಳ ಮೊಣಕಾಲು, ಕುತ್ತಿಗೆ ಮತ್ತು ಭುಜಗಳ ನೋವಿನಿಂದ ಬಳಲುತ್ತವೆ. ಹಾಗಾಗಿ ಇಂತಹ ಅಮಾನವೀಯ ಪದ್ಧತಿಗೆ ಕಡಿವಾಣ ಹಾಕಿ ಕಾರ್ಖಾನೆಗಳು ಪರ್ಯಾಯ ಮಾರ್ಗಗಳ ಮೂಲಕ ಕಬ್ಬು ಸಾಗಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸರ್ನೋಬತ್ ಒತ್ತಾಯಿಸಿದ್ದಾರೆ.
ಅತಿ ಭಾರವಾಗಿ ಕಬ್ಬು ಹೇರುವ ಜೊತೆಗೆ ಬಂಡಿಯ ಮೇಲೆ ಇನ್ನೂ 2 -3 ಜನರು ಕುಳಿತುಕೊಳ್ಳುತ್ತಾರೆ. ಎತ್ತುಗಳು ಗಾಡಿ ಎಳೆಯಲು ಹೆಣಗಾಡುತ್ತವೆ. ಅವುಗಳಿಗೆ ಕೆಲವೊಮ್ಮೆ ಹನಿ ನೀರನ್ನು ಸಹ ನೀಡಲಾಗುವುದಿಲ್ಲ. ಪುಣೆಯಲ್ಲಿ ಪೇಟಾ ಸಂಘಟನೆ ಈ ಕುರಿತು ನ್ಯಾಯಾಂಗ ಹೋರಾಟ ನಡೆಸುತ್ತಿದೆ. ನ್ಯಾಯಾಲಯ ಎತ್ತಿನ ಗಾಡಿಯಲ್ಲಿ ಭಾರ ಹೇರುವ ಪ್ರಮಾಣವನ್ನು ನಿಗದಿಪಡಿಸಿದೆ. ಆದರೆ ಇದು ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಚಿವ ಪ್ರಭು ಚವ್ಹಾಣ, ಜಿಲ್ಲಾಧಿಕಾರಿ ಹಿರೇಮಠ ಮತ್ತು ಎಸ್ಪಿ ನಿಂಬರಗಿ ಜೊತೆ ಚರ್ಚಿಸಲಾಗಿದೆ. ಅವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗಳು ಈ ವಿಷಯದಲ್ಲಿ ರೈತರ ಸಹಾಯಕ್ಕೆ ಬರಬೇಕು. ಪ್ರಾಣಿ ಹಿಂಸೆ ನಿಲ್ಲಿಸಲು ಮುಂದಾಗಬೇಕು ಎಂದು ಸೋನಾಲಿ ಸರ್ನೋಬತ್ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ