
ಪ್ರಗತಿವಾಹಿನಿ ಸುದ್ದಿ: ಅದ್ದೂರಿಯಾಗಿ ಮದುವೆಯಾಗಿದ್ದ ವರ ಮದುವೆಯಾದ ಒಂದೇ ದಿನದಲ್ಲಿ ಭೀಕರ ರಸ್ತೆಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ವಿವಾಹದ ಸಂಭ್ರದಲ್ಲಿದ್ದ ವಧು ಬಾಳಲ್ಲಿ ಪತಿ ಕಳೆದುಕೊಂಡು ಕತ್ತಲು ಆವರಿಸಿದೆ.
ಸತೀಶ್ ಹಾಗೂ ಸ್ವಾತಿ ವಿವಾಹವಾಗಿ ಕಲ್ಯಾಣ ಮಂಟಪದಿಂದ ಮನೆಗೆ ಬಂದಿದ್ದರು. ರಾತ್ರಿ ಊಟದ ಬಳಿಕ ಸಂಬಂಧಿಕರಿಗೆಸಿಹಿ ತಿನಿಸು ತರಲೆಂದು ಸತೀಶ್ ಹಾಗೂ ಮೂವರು ಸ್ನೇಹಿತರು ಕಾರಿನಲ್ಲಿ ಹೊರ ಬಂದಿದ್ದರು. ಈ ವೇಳೆ ಕಾರು ರಸ್ತೆ ಬದಿ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಸತೀಶ್ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವರ ಸತೀಶ್ ಕಾರು ಚಲಾಯಿಸುತ್ತಿದರು. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ಸಾವಿನ ಸುದ್ದಿ ಕೇಳಿ ಆಘಾತಗೊಂಡ ವಧು ಪ್ರಜ್ಞೆ ತಪ್ಪಿದ್ದು, ಆಕೆಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.