ಮೈಸೂರು ಜಿಲ್ಲಾ ಉಸ್ತುವಾರಿ ಕೈತಪ್ಪಿದ್ದಕ್ಕೆ ವಿ ಸೋಮಣ್ಣ ಅಸಮಾಧಾನ

ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ್ದಾರೆ. ಆದರೆ ಸಚಿವ ವಿ.ಸೋಮಣ್ಣ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಬದಲಾಗಿ ಕೊಡಗು ಜಿಲ್ಲೆಯೊಂದನ್ನು ಮಾತ್ರ ನೀಡಿದ್ದಕ್ಕೆ ಸಚಿವರು ಅಸಮಾಧಾನಗೊಂಡಿದ್ದಾರೆ.

ಸಚಿವ ಸೋಮಣ್ಣ ಮೈಸೂರು ಮತ್ತು ಕೊಡುಗೆ ಜಿಲ್ಲೆ ಉಸ್ತುವಾರಿಯಾಗಿದ್ದರು. ಆದರೆ ಸಚಿವ ಎಸ್.ಟಿ.ಸೋಮಶೇಖರ್‌ಗೆ ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ. ಈ ಮೂಲಕ ಸಚಿವ ಸೋಮಣ್ಣಗೆ ಕೊಡಗು ಉಸ್ತುವಾರಿ ಮಾತ್ರ ನೀಡಲಾಗಿದೆ. ಇದರಿಂದ ಮೈಸೂರು ಉಸ್ತುವಾರಿ ಬದಲಾಗಿದ್ದಕ್ಕೆ ಸೋಮಣ್ಣ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿ.ಸೋಮಣ್ಣ ರಾತ್ರೋರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ವಾಪಸ್ ಆಗಿದ್ದು, ಸಚಿವ ಸೋಮಣ್ಣ ಮೂರು ದಿನದ ಮೈಸೂರು – ಕೊಡಗು ಪ್ರವಾಸದಲ್ಲಿದ್ದರು. ಆದರೆ ಉಸ್ತುವಾರಿ ಬದಲಾವಣೆ ಪಟ್ಟಿ ನೋಡಿ ಬೇಸರದಿಂದ ರಾತ್ರೋರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟದ ಸಭೆಯಲ್ಲೂ ಮೈಸೂರು ಉಸ್ತುವಾರಿ ಬದಲಾವಣೆ ಸೂಚನೆ ಕೊಡದೆ ದಿಢೀರ್ ಬದಲಾವಣೆ ಹಿಂದೆ ರಾಜಕೀಯ ಲೆಕ್ಕಚಾರ ಇದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಉಸ್ತುವಾರಿಯನ್ನು ಸಿಎಂ ಯಡಿಯೂರಪ್ಪ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಶ್ರೀಮಂತ ಪಾಟೀಲ್‍ಗೆ ಯಾವ ಜಿಲ್ಲೆಯ ಉಸ್ತುವಾರಿಯನ್ನು ನೀಡಿಲ್ಲ. ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮುಂದುವರಿದಿದ್ದಾರೆ. ಅಶ್ವಥ್ ನಾರಾಯಣ್‍ಗೆ ರಾಮನಗರ, ಅಶೋಕ್‍ಗೆ ಬೆಂಗಳೂರು ಗ್ರಾಮಾಂತರ, ಶ್ರೀರಾಮುಲುಗೆ ಚಿತ್ರದುರ್ಗ, ಬಿ.ಸಿ.ಪಾಟೀಲ್‍ಗೆ ಕೊಪ್ಪಳ, ಆನಂದ್ ಸಿಂಗ್‍ಗೆ ಬಳ್ಳಾರಿ, ಉತ್ತರ ಕನ್ನಡಕ್ಕೆ ಶಿವರಾಂ ಹೆಬ್ಬಾರ್, ಮಾಧುಸ್ವಾಮಿಗೆ ತುಮಕೂರು, ಹಾಸನ, ಬಸವರಾಜ ಬೊಮ್ಮಾಯಿಗೆ ಹಾವೇರಿ, ಉಡುಪಿ, ಗೋವಿಂದ ಕಾರಜೋಳಗೆ ಬಾಗಲಕೋಟೆ, ಕಲಬುರಗಿ, ಪ್ರಭು ಚವ್ಹಾಣ್‍ಗೆ ಬೀದರ್, ಯಾದಗಿರಿ ಜಿಲ್ಲಾ ಉಸ್ತುವಾರಿ ನೀಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button