*ವಂಡ್ಸೆ ಗ್ರಾಮ ಪಂಚಾಯತ್ ಕಾರ್ಯ ಇಡೀ ರಾಜ್ಯಕ್ಕೆ ಮಾದರಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ನಿರಾಮಯ ಸೊಸೈಟಿಯ ಸಮುದಾಯ ಉಪಶಮನ ಆರೈಕೆ ಕೇಂದ್ರಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿ: ಸಾಮಾಜಿಕ ಬದ್ದತೆ ಹೊಂದಿರುವ ವಂಡ್ಸೆ ಗ್ರಾಮದ ನಿರಾಮಯ ಸೊಸೈಟಿಯ ಸೇವೆ ರಾಜ್ಯದ ಇತರ ಪಂಚಾಯತಿಗಳಿಗೂ ಮಾದರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಂಡ್ಸೆ ಕ್ಲಸ್ಟರ್ ವ್ಯಾಪ್ತಿಯ ವಂಡ್ಸೆ, ಚಿತ್ತೂರು, ಇಡೂರು-ಕುಂಜ್ಞಾಡಿ, ಆಲೂರು, ಹಕ್ಲಾಡಿ, ಹೆಮ್ಮಾಡಿ ಮತ್ತು ಕೆರಾಡಿ ಗ್ರಾಮ ಪಂಚಾಯತ್ ಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ “ನಿರಾಮಯ ಸೊಸೈಟಿ” ಮೂಲಕ ಅನುಷ್ಠಾನಗೊಳ್ಳುತ್ತಿರುವ ” ಸಮುದಾಯ ಉಪ ಶಮನ ಆರೈಕೆ ಕೇಂದ್ರ” ವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಪ್ರತಿಯೊಬ್ಬರು ಸಮಾಜ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸಮಾಜ ಸೇವಕರು ಸಮಾಜಕ್ಕೆ ರಾಜ್ಯಕ್ಕೆ ದೇಶಕ್ಕೆ ಆದರ್ಶ ಆಗುತ್ತಾರೆ. ಆರೈಕೆ ಕೇಂದ್ರದ ಮೂಲಕ ವಂಡ್ಸೆ ಗ್ರಾಮ ಪಂಚಾಯತಿ ಸಮಾಜ ಸೇವೆ ಮಾಡುತ್ತಿದೆ. ಜೊತೆಗೆ ಘನತಾಜ್ಯ ಘಟಕ ಲಾಭ ವನ್ನು ಮಾಡುತ್ತಿದ್ದು, ಇದರಿಂದ ಕಸದಿಂದ ರಸ ಮಾಡುತ್ತಿದೆ ಎಂದು ಹೇಳಿದರು.

ನಿರಾಮಯ ಸೊಸೈಟಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಅವರು ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆರ್ಹರು, ಮುಂದಿನ ವರ್ಷಕ್ಕೆ ಅವರಿಗೆ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂಬುದೇ ನನ್ನ ಆಶಯ. ಈ ಸೇವೆ ನಿರಂತರವಾಗಿ ನಡೆಯಲಿ, ಅಧಿಕಾರ ಶಾಶ್ವತ ಅಲ್ಲ, ನಾವು ಮಾಡುವ ಕೆಲಸ ಕಾರ್ಯಗಳು ಶಾಶ್ವತ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. 
ವಂಡ್ಸೆ ಗ್ರಾಮ ಪಂಚಾಯತಿ ಕಾರ್ಯವನ್ನು ಬೇರೆ ಗ್ರಾಮ ಪಂಚಾಯತಿಗಳು ಬಂದು ನೋಡಬೇಕು. ನಮ್ಮ ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯತಿ ಸದಸ್ಯರನ್ನು ಇಲ್ಲಿಗೆ ಕಳುಹಿಸುವೆ. ಈ ಮಾದರಿ ನಮ್ಮೂರಲ್ಲೂ ಆಗಬೇಕು ಎಂಬುದೆ ನನ್ನ ಆಶಯವಾಗಿದೆ ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ನಿರಾಮಯ ಸೊಸೈಟಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಅವಿನಾಶ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
 
					 
				 
					 
					 
					 
					
 
					 
					 
					


