*ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಮೂಕಪ್ರೇಕ್ಷಕರಾಗಿದ್ದ ಜನರಿಂದ ದಂಡ ಸಂಗ್ರಹಿಸಿ ಸಂತ್ರಸೆಗೆ ನೀಡಿ; ಹೈಕೋರ್ಟ್ ಆದೇಶ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿರುವ ಹೈಕೋರ್ಟ್, ಘಟನೆ ವೇಳೆ ನಿಂತು ನೋಡುತ್ತಿದ್ದ ಜನರಿಂದ ದಂಡ ವಸೂಲಿ ಮಾಡಿ ಸಂತ್ರಸ್ತೆಗೆ ಕೊಡುವಂತೆ ಸೂಚನೆ ನೀಡಿದೆ.
ಪ್ರಕರಣದ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಪ್ರಸನ್ನ ರವಾಳೆ ಮತ್ತು ನ್ಯಾ.ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಮಹಿಳೆಯ ಮೇಲೆ ಹಲ್ಲೆಯಾಗುತ್ತಿದ್ದರೂ ಜನರು ಸುಮ್ಮನೆ ನಿಂತು ನೋಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದೆ.
ಘಟನೆಗೆ ಮೂಕಪ್ರೇಕ್ಷಕರಾಗಿದ್ದ ಗ್ರಾಮದ ಜನರಿಂದ ದಂಡ ಸಂಗ್ರಹಿಸಿ ಸಂತ್ರಸ್ತೆಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಬ್ರಿಟೀಷರ ಕಾಲದಲ್ಲೇ ಇಂತಹ ವರ್ತನೆಗೆ ಪುಂಡಕಂದಾಯ ಎಂಬ ತೆರಿಗೆ ವಿಧಿಸಲಾಗುತ್ತಿತ್ತು ಎಂದು ಹೈಕೋರ್ಟ್ ತಿಳಿಸಿದೆ.
ಈ ಹಿಂದೆ ನಡೆದ ವಿಚಾರಣೆ ವೇಳೆ ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಪಹರಣ ವೇಳೆ ದ್ರೌಪದಿ ರಕ್ಷಣೆಗೆ ಪರಮಾತ್ಮ ಶ್ರೀಕೃಷ್ಣ ಧಾವಿಸಿದಂತೆ ಈಗಿನ ಕಾಲದಲ್ಲಿ ಯಾರೂ ಕೂಡ ಬರುತ್ತಿಲ್ಲ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಇಂದಿನ ಜಗತ್ತಿನಲ್ಲಿ ದುರ್ಯೋಧನರು ಬಂದರೆ ಯಾವ ಕೃಷ್ಣನೂ ಸಹಾಯಕ್ಕೆ ಬರುವುದಿಲ್ಲ ಎಂದು ಹೇಳಿ ತನಿಖೆ ಸ್ಥಿತಿ ಬಗ್ಗೆ ವರದಿ ನೀಡಲು ತಿಳಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ