Belagavi NewsBelgaum News

*ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮರಾಠಿ ಪುಂಡರನ್ನು ಗಡಿಪಾರು ಮಾಡಬೇಕು. ಎಂಇಎಸ್ ನಿಷೇಧಿಸಬೇಕು. ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ಸೇರಿ‌ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಬೆಳಗಾವಿಯಲ್ಲಿ ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು.

ಬೆಳಗಾವಿ ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ವಿವಿಧ ಕನ್ನಡ ಸಂಘಟನೆಗಳ ಮುಖಂಡರು, ರಸ್ತೆ ತಡೆ ನಡೆಸಿ ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿದರು. ಯಾರಪ್ಪಂದ ಏನೈತಿ, ಬೆಳಗಾವಿ ನಮ್ಮದೈತಿ ಘೋಷಣೆ ಮೊಳಗಿಸಿದರು.

ಬಳಿಕ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ, ಎಲ್.ಆರ್. ಶಿವರಾಮೇಗೌಡ, ರೂಪೇಶ ರಾಜಣ್ಣ ಸೇರಿ ಮತ್ತಿತರ ಮುಖಂಡರು ಕಿತ್ತೂರು ರಾಣಿ ಚನ್ನಮ್ಮ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು

ಗಡಿ, ಭಾಷೆ ವಿಚಾರದಲ್ಲಿ ಬೆಳಗಾವಿಯಲ್ಲಿ ಪದೇ ಪದೇ ಎಂಇಎಸ್ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಕನ್ನಡ ಭಾಷೆಗೆ ಧಕ್ಕೆ ತರುತ್ತಿದೆ. ಮುಗ್ದ ಮರಾಠಿಗರನ್ನು ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ಇದನ್ನು ಕನ್ನಡಿಗರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಕ್ಷಣವೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕು. ಬೆಳಗಾವಿಯಲ್ಲಿ ಶಾಂತಿ ಕದಡಲು ಯತ್ನಿಸುವ ನಾಡದ್ರೋಹಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕನ್ನಡ ಹೋರಾಟಗಾರರು ಒತ್ತಾಯಿಸಿದರು. 

Home add -Advt

ಮಾಧ್ಯಮಗಳ ಜೊತೆಗೆ ಮಾತನಾಡಿದ ವಾಟಾಳ್ ನಾಗರಾಜ್  ಬೆಳಗಾವಿಯಲ್ಲಿ ಏನು ಆಗುತ್ತಿದೆ ಎಂಬುದು ಕರ್ನಾಟಕ ಸರ್ಕಾರಕ್ಕೆ ಗೊತ್ತಿಲ್ಲ. ಹಿಂದೆ ಬೊಮ್ಮಾಯಿ ಸರ್ಕಾರ ಎಂಇಎಸ್ ನಿಷೇಧಿಸುವ ಭರವಸೆ ನೀಡಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಹಾಗಾಗಿ, ಸಿದ್ದರಾಮಯ್ಯ ಸರ್ಕಾರ ಕೂಡಲೇ ಎಂಇಎಸ್ ನಿಷೇಧಿಸಬೇಕು. ಇಲ್ಲದಿದ್ದರೆ ಮುಂದಿನ ಬಾರಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು‌.

ಸುವರ್ಣ ವಿಧಾನಸೌಧದಲ್ಲಿ ತಿಂಗಳಿಗೆ ಮೂವರು ಸಚಿವರು ಕುಳಿತುಕೊಂಡು ಇಲ್ಲಿನ ಪರಿಸ್ಥಿತಿ ಅವಲೋಕಿಸಬೇಕು. ಇಲ್ಲಿನ ಎಲ್ಲಾ ಪಕ್ಷಗಳ ರಾಜಕಾರಣಿಗಳು ಎಂಇಎಸ್ ಎಜೆಂಟ್ ಗಳಾಗಿದ್ದಾರೆ. ಅವರ ಮತಕ್ಕಾಗಿ ತಮ್ಮ ಅಸ್ತಿತ್ವವನ್ನೆ ಮಾರಿಕೊಂಡಿದ್ದಾರೆ. ಇದು ಅತ್ಯಂತ ಭಯಾನಕ ವಿಚಾರ. ಹಾಗಾಗಿ, ಬೆಳಗಾವಿಗೆ ಎಂಇಎಸ್ ಬೇಡ. ಇನ್ನು ಮಹದಾಯಿ, ಮೇಕೆದಾಟು ಯೋಜನೆ ಸೇರಿ‌ ವಿವಿಧ ಬೇಡಿಕೆ ಈಡೇರಿಸುವಂತೆ ಮಾರ್ಚ್ 22ರಂದು‌ ಕರ್ನಾಟಕ‌ ಬಂದ್ ಗೆ ಕರೆ ನೀಡಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಮತ್ತೋರ್ವ ಹಿರಿಯ ಕನ್ನಡ ಹೋರಾಟಗಾರ ಸಾ.ರಾ.ಗೋವಿಂದ ಮಾತನಾಡಿ, ಮಹಾರಾಷ್ಟ್ರ ರಾಜಕಾರಣಿಗಳು ಎಂಇಎಸ್ ಗೂಂಡಾಗಳಿ‌ ಕುಮ್ಮಕ್ಕು ನೀಡುತ್ತಿದ್ದಾರೆ. ಕಳೆದ 40 ವರ್ಷಗಳಿಂದ ಕನ್ನಡ ನೆಲದಲ್ಲಿ ಇಲ್ಲಿನ ಕಂಡಕ್ಟರ್ ಮತ್ತು ಚಾಲಕರ ಮೇಲೆ ಹಲ್ಲೆ ಮಾಡುತ್ತಾ ಬಂದಿದ್ದಾರೆ. ಕರ್ನಾಟಕ ರಾಜಕಾರಣಿಗಳು ಕೂಡ ಇಂಥ ಪುಂಡರನ್ನು ಬೆಳೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಎಂಇಎಸ್ ರಾಜ್ಯದಲ್ಲಿ ಮುಂದುವರಿಯಬಾರದು. ಅದನ್ನು ನಿಷೇಧಿಸಬೇಕು. ಬೆಳಗಾವಿಯಲ್ಲಿ ಕನ್ನಡಿಗರಿಗೆ ರಕ್ಷಣೆ ಕೊಡಲೇಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button