Latest

ಎಡನೀರು ಶ್ರೀಗಳ ನಿಧನಕ್ಕೆ ವೀರೇಂದ್ರ ಹೆಗ್ಗಡೆ ಶೋಕ

ಪ್ರಗತಿವಾಹಿನಿ ಸುದ್ದಿ, ಧರ್ಮಸ್ಥಳ –  ಎಡನೀರು ಮಠದ ಪೂಜ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಪರಂಧಾಮ ಹೊಂದಿದ ಸುದ್ದಿ ತಿಳಿದು ವಿಷಾದವಾಯಿತು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಪೂಜ್ಯರು ಉತ್ತಮ ವಾಗ್ಮಿ ಹಾಗೂ ಭಾಷಾ ಪ್ರಭುತ್ವವನ್ನು ಹೊಂದಿದ ವಿದ್ವಾಂಸರೂ ಆಗಿದ್ದು ಸಂಗೀತ, ಕಲೆ, ಶಿಕ್ಷಣ ಹಾಗೂ ಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದಾರೆ. ಯಕ್ಷಗಾನ ಕಲೆಯಲ್ಲಿ ಅವರು ವಿಶೇಷ ಆಸಕ್ತಿ ಹಾಗೂ ಪರಿಣತಿ ಹೊಂದಿದ್ದು ತಮ್ಮ ಸುಮಧುರ ಕಂಠಸಿರಿಯ ಭಾಗವತಿಕೆಯಿಂದ ಅಪಾರ ಅಭಿಮಾನಿಗಳ ಗೌರವಕ್ಕೆ ಪಾತ್ರರಾಗಿದ್ದರು ಎಂದು ಸ್ಮರಿಸಿದ್ದಾರೆ.

ಮೂಲಭೂತ ಹಕ್ಕಿನ ವಿಚಾರವಾಗಿ ಖ್ಯಾತ ಸಂವಿಧಾನ ವಕೀಲರಾದ  ಪಾಲ್ಕಿವಾಲರ ಮೂಲಕ ಹೋರಾಟ ನಡೆಸಿ ಕೇಶವಾನಂದ ಭಾರತೀ ಎಂಬ ಹೆಸರಿನಲ್ಲಿ ಪ್ರಖ್ಯಾತ ತೀರ್ಪನ್ನು ಪಡೆದುಕೊಂಡವರು. ನನ್ನ ದೃಷ್ಟಿಯಲ್ಲಿ ಮಹಾಭಾರತ ಸಾಹಿತ್ಯದಲ್ಲಿ ನಡೆದ ಧರ್ಮದ ಹೋರಾಟದಿಂದ ಪ್ರೇರಣೆಯಾಗಿ ಸನ್ಯಾಸಿಯಾಗಿಯೂ ಹೋರಾಟ ನಡೆಸಿದವರು.
ಅನೇಕ ಸಭೆ-ಸಮಾರಂಭಗಳಲ್ಲಿ ಅವರ ವಿದ್ವತ್ಪೂರ್ಣವಾದ ಪ್ರವಚನಗಳಿಂದ ಸಮಾಜಕ್ಕೆ ಉತ್ತಮ ಮೌಲಿಕ ಸಂದೇಶ ನೀಡಿದ್ದಾರೆ ಎಂದು ಹೆಗ್ಗಡೆ ಸ್ಮಿರಿಸಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಗೌರವ ನಮನವನ್ನು ಸಲ್ಲಿಸುತ್ತೇನೆ ಎಂದು ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ವಿಧಿವಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button