Belagavi NewsBelgaum NewsKannada NewsKarnataka News

ಎಲ್ಲವನ್ನೂ ತ್ಯಾಗ ಮಾಡಿ ಸಮಾಜಕ್ಕೆ ಸಂದೇಶ ಕೊಟ್ಟವರು ವೇಮನರು – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಜೀವನದಲ್ಲಿ ಎಲ್ಲ ಇದ್ದರೂ ಎಲ್ಲವನ್ನೂ ತ್ಯಾಗ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟವರು ದಾರ್ಶನಿಕ, ಕವಿ, ಮಹಾಯೋಗಿ ವೇಮನರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಮೂಡಲಗಿಯ ಬಸವ ರಂಗ ಮಂಟಪದಲ್ಲಿ ಶನಿವಾರ ಸಂಜೆ ನಡೆದ ದಾರ್ಶನಿಕ ಕವಿ, ಮಹಾಯೋಗಿ ಶ್ರೀ ವೇಮನರ 612ನೇ ಜಯಂತೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾವೆಲ್ಲ ಹೇಮರಡ್ಡಿ ಮಲ್ಲಮ್ಮಳ ಜೀವನಗಾಥೆ ಓದಿ ಬೆಳೆದವರು. ಮಹಿಳೆಯರು ಮನೆಯಲ್ಲೇ ಕುಳಿತುಕೊಳ್ಳುವ ಮನೋಭಾವ ಬಿಟ್ಟು ತಮಗೆ ಸಾಧ್ಯವಿರುವ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಮಹಿಳೆಯ ಖುಷಿಯ ಹೆಜ್ಜೆ ಹಾಕಿದಲ್ಲಿ ಫಸಲು ಚೆನ್ನಾಗಿ ಬರುತ್ತದೆ, ಕೀರ್ತಿ ಪತಾಕೆ ಹಾರುತ್ತದೆ ಎನ್ನುವ ಮಾತಿದೆ ಎಂದು ಹೆಬ್ಬಾಳಕರ್ ಹೇಳಿದರು.

ವೇಮನರು ಎಲ್ಲವನ್ನೂ ತ್ಯಾಗ ಮಾಡಿ ವೈರಾಗ್ಯರಾದವರು. ಕುಲ ಕುಲವೆಂದು ಬಡಿದಾಡಬೇಡಿ, ಮಾನವ ಧರ್ಮ ಒಂದೇ ಎನ್ನುವ ಬಸವಣ್ಣನವರ ಹಾದಿಯಲ್ಲೇ ನಡೆದವರು. ಅವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ, ವಿಶ್ವಮಾನವ ತತ್ವ ಅಳವಡಿಸಿಕೊಂಡಾಗ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.

ರಡ್ಡಿ ಸಮಾಜದವರು ಬಹಳ ಶಿಸ್ತಿಗೆ ಹೆಸರಾದವರು, ಶಿಕ್ಷಣವಂತರು, ಶ್ರಮ ಜೀವಿಗಳು, ಬೇರೆಯವರಿಗೆ ಸಹಾಯ ಮಾಡುವವರು, ಡಾ.ಗಿರೀಶ್ ಸೋನವಾಲ್ಕರ್ ಅವರು ಕೊರೋನಾ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿ ನೂರಾರು ರೋಗಿಗಳ ಜೀವ ಉಳಿಸಿದ್ದಾರೆ. ಸಮಾಜಕ್ಕೆ ಕೀರ್ತಿ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಹೆಬ್ಬಾಳಕರ್ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ವೇಮನರು ಮೌಢ್ಯತೆಯ ವಿರುದ್ಧ ಹೋರಾಡಿದವರು, ಆದರೆ ಇಂದು ನಾವೆಲ್ಲ ಜಾತಿಗೆ ಸೀಮಿತವಾಗಿದ್ದರಿಂದ ವೇಮನರ ಸಂದೇಶ ಹೆಚ್ಚು ಪ್ರಚಾರವಾಗಲಿಲ್ಲ. ಅವರ ವಿಚಾರಗಳು ನಾಶವಾಗದಂತೆ ನೋಡಿಕೊಳ್ಳಬೇಕು. ಇಡೀ ಮಾನವ ಜನಾಂಗಕ್ಕೆ ನೀಡಿರುವ ಅವರ ಸಂದೇಶ ಮುಂದಿನ ಪೀಳಿಗೆಗೆ ತಲುಪುವಂತಾಗಬೇಕು ಎಂದು ಹೇಳಿದರು. 

ಸಮಾರಂಭದಲ್ಲಿ ಮೂಡಲಗಿಯ ಶಿವಬೋಧರಂಗ ಸಿದ್ಧ ಸಂಸ್ಥಾನಮಠದ ಪೂಜ್ಯ ಶ್ರೀ ದತ್ತಾತ್ರಯಬೋಧ ಮಹಾಸ್ವಾಮಿಗಳು, ಮುನ್ಯಾಳದ ಮಹಾಯೋಗಿ ವೇಮನ ಆಧ್ಯಾತ್ಮ ಕುಟೀರದ ಪೂಜ್ಯ ಶ್ರೀ ಲಕ್ಷ್ಮಣ ದೇವರು,  ಎರೆಹೊಸಹಳ್ಳಿಯ ರಡ್ಡಿ ಗುರುಪೀಠದ ಪೂಜ್ಯ ಶ್ರೀ ವೇಮನಾನಂದ ಮಹಾಸ್ವಾಮಿಗಳು,  ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅರವಿಂದ ಕರಬಸನಗೌಡ, ಬೆಳಗಾವಿ ಲೆಕ್ ವ್ಯೂವ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗಿರೀಶ್ ಸೋನವಾಲ್ಕರ್, ಟಿ.ಆರ್.ಸೋನವಾಲ್ಕರ್, ಆರ್ ಎಲ್ ಮಿರ್ಜಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button