Kannada NewsLatest

ವಿಧಾನಸಭೆ ಚುನಾವಣೆ: ಚುರುಕಿನಿಂದ ಕೆಲಸ ಮಾಡಲು ಅಧಿಕಾರಿಗಳ ತಂಡಗಳಿಗೆ ಸೂಚನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಚಿಸಲಾಗಿರುವ ತಂಡಗಳು ಕಾರ್ಯೋನ್ಮುಖರಾಗಿ ಚುರುಕಿನಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಮಾ.13) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಈಗಾಗಲೇ ನಿಯೋಜಿಸಲಾಗಿರುವ ತಂಡಗಳು ಪ್ರತಿಯೊಂದು ವಾಹನಗಳ ಮೇಲೆ ನಿಗಾ ವಹಿಸಬೇಕು.
ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸದ್ಯಕ್ಕೆ ಒಂದು ತಂಡ ಇಪ್ಪತ್ನಾಲ್ಕು ಗಂಟೆ ಕಾರ್ಯನಿರ್ವಹಿಸಬೇಕು.

Home add -Advt

ಗೊದಾಮು, ಕಾರ್ಖಾನೆ, ಭವನಗಳು, ಮನೆಗಳಲ್ಲಿ ಅಕ್ರಮ ದಾಸ್ತಾನು ಕಂಡುಬಂದರೆ ಸಂಬಂಧಿಸಿದ ಇಲಾಖೆಯ ತಂಡಗಳು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಕೂಡ ತಮ್ಮ ವ್ಯಾಪ್ತಿಯಲ್ಲಿನ ಮತಗಟ್ಟೆಗಳು, ಮಸ್ಟರಿಂಗ್, ಡಿಮಸ್ಟರಿಂಗ್ ಕೇಂದ್ರಗಳು, ಚೆಕ್ ಪೋಸ್ಟ್ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ರೀತಿಯ ಲೋಪದೋಷ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Back to top button