ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಪ್ರತಿಧ್ವನಿಸಿದ್ದು, ಮಾಜಿ ಸಚಿವರ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ 6 ಸಚಿವರು ಕೋರ್ಟ್ ಮೊರೆ ಹೋಗಿದ್ದೇಕೇ? ಇದು ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಂಡಂತಾಯಿತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಈ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ಹೆಸರನ್ನು ಕೆಡಿಸಬೇಡಿ. ಇಡೀ ದೇಶದಲ್ಲೇ ನಮ್ಮ ಪೊಲೀಸರಿಗೆ ಒಳ್ಳೆಯ ಹೆಸರಿದೆ. ಒನ್ ಸೈಡ್ ತನಿಖೆ ಮೂಲಕ ದಿಕ್ಕು ತಪ್ಪಿಸಬೇಡಿ. ಸರಿಯಾಗಿ ನಿರ್ವಹಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಸಿವಕುಮಾರ ಆಗ್ರಹಿಸಿದರು.
ಸಿಡಿ ಪ್ರಕರಣ ಪ್ರಸ್ತಾಪಿಸಿ ಮಾತನಾಡಿದ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣದ ಬೆನ್ನಲ್ಲೇ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ 6 ಸಚಿವರಿಗೆ ಸ್ವತ: ಭಯವಿರುವಾಗ ಅವರು ಜನರನ್ನು ಹೇಗೆ ರಕ್ಷಿಸುತ್ತಾರೆ. ಅಷ್ಟೇ ಅಲ್ಲ ಬಾಂಬೆಗೆ ಹೋದ ಸಚಿವರು ಮಾತ್ರ ಕೋರ್ಟ್ ಮೊರೆ ಹೋಗಿದ್ದೇಕೆ? ಮೊದಲು ಈ ಸಚಿವರುಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಇತಿಹಾಸದಲ್ಲಿ ಮಾತ್ರವಲ್ಲ ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಹೀಗೆ 6 ಸಚಿವರು ತಮ್ಮ ವಿರುದ್ಧ ಸುದ್ದಿ ಪ್ರಸಾರಕ್ಕೆ ತಡೆ ನಿಡುವಂತೆ ಕೋರ್ಟ್ ಮೊರೆ ಹೋದ ಪ್ರಸಂಗವೇ ಇಲ್ಲ. ರಮೇಶ್ ವಿರುದ್ಧ ಷಡ್ಯಂತ್ರ ನಡೆದಿದೆ. ನಮ್ಮ ವಿರುದ್ಧವೂ ಷಡ್ಯಂತ್ರ ನಡೆಯಬಹುದು. ಮಾನ ಮರ್ಯಾದೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾಗಿ ಹೇಳಿದ್ದಾರೆ. ಬಾಂಬೆ ಟೀಂ ಗೆ ಮಾತ್ರ ಹೀಗೆ ಅನಿಸಿದೆ. ಉಳಿದವರಿಗೆ ಯಾಕೆ ಹೀಗೆ ಅನಿಸಿಲ್ಲ ಎಂಬುದು ಪ್ರಶ್ನೆ ಎಂದರು.
ಹಣ ವರ್ಗಾವಣೆ ಸಂಬಂಧ ಬಂದಿರುವ ಹೇಳಿಕೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಬೇಕು. ಸರಕಾರದಿಂದ ಅಧಿಕೃತ ಆದೇಶವಾಗಬೇಕು ಎಂದು ಶಿವಕುಮಾರ ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ