CrimeKannada NewsKarnataka News

*ವಿಧಾನಸೌಧ ಸ್ಫೋಟದ ಎಐ ರೀಲ್ಸ್​​​​ ಸೃಷ್ಟಿಸಿ ಹರಿಬಿಟ್ಟಿದ್ದ ಯುವಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕಿಡಿಗೇಡಿಯೊಬ್ಬ ವಿಧಾನಸೌಧವನ್ನು ಸ್ಫೋಟಿಸಿದಂತೆ ಎಐ ಬಳಸಿ ರೀಲ್ಸ್​​​ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಘಟನೆ ಎರಡು ದಿನಗಳ ಹಿಂದೆ ನಡೆದಿತ್ತು. ಸದ್ಯ ಆರೋಪಿಯನ್ನು ಪತ್ತೆ ಮಾಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಿಹಾರ ಮೂಲದ ಯುವಕ ಹಜರತ್ ಅಲಿ ಬಂಧಿತ ಆರೋಪಿ. ಬೆಂಗಳೂರು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಜೆ.ಸಿ. ರಸ್ತೆಯ ಪೈಪ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಜರತ್ ಅಲಿ, ವಿಧಾನಸೌಧದ ಮುಂದೆ ತೆಗೆದಿದ್ದ ತನ್ನ ಫೋಟೋಗಳನ್ನು ದುರುಪಯೋಗಪಡಿಸಿಕೊಂಡು, ಸ್ಫೋಟದ ದೃಶ್ಯಗಳನ್ನು ಸೇರಿಸಿ ನಕಲಿ ರೀಲ್ ತಯಾರಿಸಿದ್ದ.

ಈ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರ ಗಮನಕ್ಕೆ ಬಂದಿದೆ. ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದ ಬಗ್ಗೆ ಇಂತಹ ಗಂಭೀರ ಸ್ವರೂಪದ ವಿಡಿಯೋ ತಯಾರಿಸಿದ್ದು, ಭದ್ರತಾ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಹಜರತ್ ಅಲಿಯನ್ನ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಸದ್ಯ ಆತನನ್ನ ವಿಚಾರಣೆಗೊಳಪಡಿಸಲಾಗಿದ್ದು, ಈ ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button