Karnataka NewsLatestPolitics

*ಅಂಗನವಾಡಿ ನೇಮಕಾತಿಯಲ್ಲಿ ಯಾರಿಗೂ ಅನ್ಯಾಯವಾಗಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಿಂದ ಪಾರದರ್ಶಕ ಆಯ್ಕೆ

ಪ್ರಗತಿವಾಹಿನಿ ಸುದ್ದಿ: ವಿಧಾನಸೌಧ : ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಪಾರದರ್ಶಕವಾಗಿ ಆಯ್ಕೆ ನಡೆದಿದೆ. ಆಯ್ಕೆಯಲ್ಲಿ ಯಾವುದೇ ಹಸ್ತಕ್ಷೇಪ ಆಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದರು.

ಮಳೆಗಾಲದ ಅಧಿವೇಶನದ ಮೂರನೇ ದಿನವಾದ ಬುಧವಾರ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಡುಪಿ ಜಿಲ್ಲೆಯಲ್ಲಿ 52 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಈ ಪೈಕಿ 51 ಮಂದಿಗೆ ಆದೇಶ ಪತ್ರ ನೀಡಲಾಗಿದೆ. ಓರ್ವ ಅಭ್ಯರ್ಥಿ ವಿದ್ಯಾ ಗೋವಿಂದ್ ಪೂಜಾರಿ ಅವರ ಆಯ್ಕೆಗೆ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ತಡೆಹಿಡಿಯಲಾಗಿತ್ತು. ಇದೀಗ ಅವರಿಗೂ ಆದೇಶ ಪತ್ರ ನೀಡಲಾಗಿದೆ ಎಂದು ಉತ್ತರಿಸಿದರು.

ಎಲ್ಲರಿಗೂ ನ್ಯಾಯ ಒದಗಿಸಿಕೊಡುವುದೇ ನಮ್ಮ ಸರ್ಕಾರದ ಉದ್ದೇಶ, ಶಿಕ್ಷಕರ ಆಯ್ಕೆಯಲ್ಲಿ ಯಾವುದೇ ಹಸ್ತಕ್ಷೇಪ ನಡೆದಿಲ್ಲ. ಯಾವುದೇ ಒತ್ತಡಕ್ಕೂ ಮಣಿದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Home add -Advt

ಗುಡ್ಡಗಾಡು ಪ್ರದೇಶಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು (ಮಡಿಕೇರಿ) ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಾಸಸ್ಥಳದಿಂದ ಅಂಗನವಾಡಿ ಕೇಂದ್ರಕ್ಕೆ ಇರುವ ಅಂತರವನ್ನು 3 ಕಿಲೋಮೀಟರ್‌ನಿಂದ 5 ಕಿಲೋಮೀಟರ್‌ವರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ಉತ್ತರಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವಾವಧಿಯಲ್ಲಿ 2 ಸ್ಥಾನಪಲ್ಲಟಗಳಿಗೆ ಅವಕಾಶವಿರುವುದನ್ನು ಮಾರ್ಪಾಡು ಮಾಡಿ ತುರ್ತು ಸಂದರ್ಭಗಳಲ್ಲಿ 3ನೇ ಸ್ಥಾನಪಲ್ಲಟ್ಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

Related Articles

Back to top button