
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಜಯಪುರ ಮಹಾನಗರ ಪಾಲಿಕೆಯ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ 35 ಸದಸ್ಯರ ಸದಸ್ಯತ್ವವನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದಾರೆ.
ಕಲಬುರಗಿ ಹೈಕೋರ್ಟ್ ಪೀಠ ಆದೇಶದಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಆಸ್ತಿ ಘೋಷಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಸದಸ್ಯರ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್, ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು. ಈ ಕಾರಣಕ್ಕೆ ಎಲ್ಲಾ ಸದಸ್ಯರನ್ನು ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಆದೇಶ ಹೊರಡಿಸಿದ್ದಾರೆ. ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆ ಮತ್ತೆ ನಡೆಯುವ ಸಾಧ್ಯತೆಯೂ ಇದೆ.
ಬಿಜೆಪಿ 17, ಕಾಂಗ್ರಸ್-10, ಜೆಡಿಎಸ್-1, ಎಂಐಎಂ-2,ಪಕ್ಷೇತರ 5 ಸದಸ್ಯರನ್ನು ಅನರ್ಹಗೊಳಿಸಲಾಗಿದೆ. 2022ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಈ ಸದಸ್ಯರು ಆಯ್ಕೆಯಾಗಿದ್ದರು. 2024ರ ಜ.9ರಂದು ಮೇಯರ್, ಉಪ ಮೇಯರ್‌ಗೆ ಎಲೆಕ್ಷನ್ ನಡೆದಿದ್ದು, ಕಾಂಗ್ರೆಸ್‌ನ ಮೆಹೆಜಬೀನ್ ಹೊರ್ತಿ ಮೇಯರ್ ಆಗಿ, ದಿನೇಶ ಹಳ್ಳಿ ಉಪಮೇಯರ್ ಆಗಿ ಆಯ್ಕೆಯಾಗಿದ್ದರು. ಯಾವ ಸದಸ್ಯರು ಕಾನೂನು ಪ್ರಕಾರ ತಮ್ಮ ಆಸ್ತಿ ಘೋಷಣಾ ಪತ್ರ ಸಲ್ಲಿಕೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಸುಧೀರ್ಘ ವಿಚಾರಣೆ ಬಳಿಕ ಅವರನ್ನು ಅನರ್ಹಗೊಳಿಸಲಾಗಿದೆ.