ಲಕ್ಷ್ಮೀ ಹೆಬ್ಬಾಳಕರ್ ಪರ ಪ್ರಚಾರಕ್ಕೆ ಸ್ವಯಂ ಪ್ರೇರಣೆಯಿಂದ ಮೆರವಣಿಗೆಯಂತೆ ಹೊರಟಿದ್ದಾರೆ ಗ್ರಾಮೀಣ ಜನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣೆಗೆ ಇನ್ನು ಎರಡೇ ದಿನ ಬಾಕಿ. ಮೇ 10ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿ ಊರಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಮೆರವಣಿಗೆ ರೀತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಪರ ಪ್ರಚಾರಕ್ಕೆ ಹೋಗುತ್ತಿದ್ದಾರೆ.
ಕ್ಷೇತ್ರದ ಯಾವುದೇ ಊರಲ್ಲಿ ನೋಡಿದರೂ ಜನ ಸಾಲು ಸಾಲಿನಲ್ಲಿ ತಾವೇ ಪ್ರಚಾರ ಕೈಗೊಂಡಿದ್ದಾರೆ. ಮಹಿಳೆಯರು ಪಾದಯಾತ್ರೆಯಲ್ಲಿ ಪ್ರಚಾರ ಮಾಡುತ್ತಿದ್ದರೆ, ಪುರುಷರು ಬೈಕ್ ಮೇಲೆ ಸಂಚರಿಸುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಅವರು ಕಳೆದ 5 ವರ್ಷದಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟು ಮತ್ತೊಮ್ಮೆ ಅವರನ್ನು ಆಯ್ಕೆ ಮಾಡೋಣ ಎಂದು ಪಕ್ಷಾತೀತವಾಗಿ ಪ್ರಚಾರ ಮಾಡುತ್ತಿದ್ದಾರೆ.
ಕಿಣಯೆ ಗ್ರಾಮದಲ್ಲಿ ಯುವಕರು ಬೈಕ್ ರ್ಯಾಲಿ ನಡೆಸಿ ಪ್ರಚಾರ ನಡೆಸಿದರು. ಚಂದೂರಲ್ಲಿ ಮಹಿಳೆಯರು ಪಾದಯಾತ್ರೆಯ ಮೂಲಕ ಮತ ಯಾಚಿಸಿದರು, ದೇಸೂರಲ್ಲಿ ವಿವಿಧ ಸಮಾಜದವರು ಹೆಬ್ಬಾಳಕರ್ ಗೆಬೆಂಬಲ ಘೋಷಿಸಿದರು. ಹಲಗಾ, ರಣಕುಂಡೆ, ಬೆಕ್ಕಿನಕೇರಿ ಗ್ರಾಮಗಳಲ್ಲಿ ಮಹಿಳೆಯರು, ಪುರುಷರು ಒಟ್ಟಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಬಾದರವಾಡಿ, ಮೋದಗಾ, ಮಾರಿಹಾಳ, ಹಿರೇಬಾಗೇವಾಡಿ ಮೊದಲಾದೆಡೆ ಗುಂಪು ಗುಂಪಾಗಿ ಪ್ರಚಾರ ನಡೆಸುತ್ತಿರುವುದು ಕಂಡು ಬರುತ್ತಿದೆ.
ಅನ್ಯ ಪಕ್ಷದ ಕಡೆ ಒಲವಿದ್ದವರನ್ನೂ ಮನವೊಲಿಸಿ, ಇಂತಹ ಅಭಿವೃದ್ಧಿಪರ ಶಾಸಕರನ್ನು ಕಳೆದುಕೊಳ್ಳುವುದು ಬೇಡ. ದಯವಿಟ್ಟು ಹೆಬ್ಬಾಳಕರ್ ಬಾಯಿಯನ್ನು ಭಾರಿ ಬಹುಮತದಿಂದ ಗೆಲ್ಲಿಸಿ ತರೋಣ. ಅವರು ಗೆದ್ದರೂ ನಮ್ಮ ಮನೆ ಮಗಳಾಗಿ ನಮ್ಮ ಜೊತೆಯಲ್ಲೇ ಇರುತ್ತಾರೆ. ಎಲ್ಲ ಸಮಯದಲ್ಲೂ ಸಂಪರ್ಕಕ್ಕೆ ಸಿಗುತ್ತಾರೆ. ನಮ್ಮ ಕಷ್ಟ, ಸುಖದಲ್ಲಿ ಸದಾ ಭಾಗಿಯಾಗುತ್ತಾರೆ. ನೀವೂ, ನಿಮ್ಮ ಕುಟುಂಬದ ಎಲ್ಲರೂ ಅವರಿಗೇ ಮತ ಹಾಕಿ ಎಂದು ಜನರು ಪ್ರಚಾರ ಮಾಡುತ್ತಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಬರುತ್ತಾರೆ. ಎಂದೂ ನಮ್ಮ ಊರಿನ ಕಡೆ ತಲೆ ಹಾಕದವರೂ ಬಂದು ಮತ ಕೇಳುತ್ತಾರೆ. ಇಲ್ಲ ಸಲ್ಲದ ಭರವಸೆ ನೀಡುತ್ತಾರೆ. ಆದರೆ ಲಕ್ಷ್ಮೀ ಹೆಬ್ಬಾಳಕರ್ ಮಾತ್ರ ಯಾವಾಗಲೂ ನಮ್ಮ ಜೊತೆಗೇ ಇರುತ್ತಾರೆ. ನೂರಾರು ದೇವಸ್ಥಾನಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಸಾವಿರಾರು ಜನರಿಗೆ ಅನಾರೋಗ್ಯ ಉಂಟಾದಾಗ ಪರಿಹಾರ ಕೊಡಿಸಿದ್ದಾರೆ. ನಮ್ಮೂರಿನ ರಸ್ತೆ, ಚರಂಡಿ ಮಾಡಿಸಿದ್ದಾರೆ. ಶಾಲೆಗಳನ್ನು ಕಟ್ಟಿಸಿದ್ದಾರೆ. ಕ್ರೀಡೆ, ವ್ಯಾಯಾಮ ಸಲಕರಣೆ ಒದಗಿಸಿದ್ದಾರೆ. ಕುಡಿಯುವ ನೀರಿನ ಸೌಲಭ್ಯ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಗಾಗಿ ಅವರಿಗೆ ಮತ ಹಾಕೋಣ ಎಂದು ಪ್ರಚಾರಮಾಡುತ್ತಿದ್ದಾರೆ.
ಈ ಮಧ್ಯೆ ವಿವಿಧ ಗ್ರಾಮಗಳ ಬೇರೆ ಬೇರೆ ಸಮಾಜದವರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ದೇಸೂರಿನ ನಾಯಿಕ ಸಮಾಜ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಪೂರ್ಣ ಬಂಬಲ ಘೋಷಿಸಿದೆ. ಬಸರಿಕಟ್ಟಿಯಲ್ಲಿ ಮುಖಂಡ ಹೊಳೆಪ್ಪ ನೇತೃತ್ವದಲ್ಲಿ ಭಾನುವಾರ ಯುವಕರು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಮ್ಮುಖ ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಸೇರ್ಪಡೆಯಾದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ