Latest

ದಾರಿ ತಪ್ಪುತ್ತಿದೆ ಚುನಾವಣೆ ವ್ಯವಸ್ಥೆಗಳು; ವಿಶ್ವೇಶ್ವರ ಹೆಗಡೆ ಕಾಗೇರಿ ಕಳವಳ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಾತಿ ಬಲ, ಹಣ ಬಲ, ತೋಳ್ಬಲ ಹಾಗೂ ಪಕ್ಷಾಂತರ ಬಲಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿತಗೊಳ್ಳುತ್ತಿರುವುದನ್ನು ತಡೆಯಲು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳು ಅಗತ್ಯವಾಗಿವೆ ಎಂದು ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಕಾಗೇರಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನೈತಿಕ ಅಧಃಪತನ ಕುರಿತು ಕೇವಲ ರಾಜಕಾರಣಿಗಳ ವಿರುದ್ಧ ಬೊಟ್ಟು ಮಾಡುವ ಸಂಸ್ಕೃತಿ ದೂರವಾಗಬೇಕು.  ರಾಜಕೀಯದ ವಿವಿಧ ಮಜಲುಗಳಲ್ಲಿ ಅಧಿಕಾರವನ್ನು ಅನುಭವಿಸಿ ಉತ್ತುಂಗದಲ್ಲಿರುವ ಸಮಾಜದ ಹಿರಿಯರು ಮೌನ ಮುರಿಯಬೇಕು.  ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮಾತ್ರವಲ್ಲದೇ ಸಾಹಿತ್ಯ ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರೂ ಕೂಡಾ ನೈತಿಕ ಹೊಣೆಗಾರರಾಗಿ ಚುನಾವಣಾ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಮಾರ್ಗದರ್ಶನ ಹಾಗೂ ಸಲಹೆಗಳನ್ನು ದೊರಕಿಸಿಕೊಡಲು ಮುಂದಾಗಬೇಕು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಲು ಎಲ್ಲೆಡೆ ವ್ಯಾಪಕ ಸಮಾಲೋಚನಾ ಸಭೆ ಮತ್ತು ಚರ್ಚೆಗಳು ಪ್ರಾರಂಭವಾಗಬೇಕು ಎಂದು ಹೇಳಿದರು.

ಚುನಾವಣಾ ಪ್ರಕ್ರಿಯೆಗಳಲ್ಲಿನ ಲೋಪದೋಷಗಳು ಅರಾಜಕತೆಗೆ ಕಾರಣವಾಗುತ್ತವೆ. ಇದರ ವಿರುದ್ಧ ಜನಾಭಿಪ್ರಾಯ ರೂಪಿಸುವುದು ಹಾಗೂ ಪಾಲ್ಗೊಳ್ಳುವುದು ಯುವಜನರ ಕರ್ತವ್ಯ ಮತ್ತು ಜವಾಬ್ದಾರಿ.  ಇಂದಿನ ಯುವ ಪೀಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರಾಗದಿದ್ದಲ್ಲಿ ಇಡೀ ವ್ಯವಸ್ಥೆಯೇ ಕುಸಿತಕ್ಕೆ ಒಳಗಾಗುವ ಎಲ್ಲಾ ಲಕ್ಷಣಗಳು ಇವೆ ಎಂದು ಆತಂಕ ವ್ಯಕ್ತಪಡಿಸಿದ ಸಭಾಧ್ಯಕ್ಷರು ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ಸವಾಲುಗಳನ್ನು ಪಟ್ಟಿ ಮಾಡಿ, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈಗಲೇ ಕ್ರಮ ವಹಿಸಿದಲ್ಲಿ, ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಸಂಭ್ರಮದ ವೇಳೆಗೆ ದೇಶವು ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ರಾಷ್ಟ್ರವಾಗಲಿದೆ.  ಇಲ್ಲವಾದಲ್ಲಿ, ನಾವೆಲ್ಲರೂ ವಿಷವರ್ತುಲದ ಭಾಗವಾಗಿ ಸಮಸ್ಯೆಗಳ ಸುಳಿಯಲ್ಲಿ ಬದುಕುಳಿಯುವ ಪ್ರಯತ್ನ ಮಾಡಬೇಕಾದೀತು ಎಂದು ಎಚ್ಚರಿಸಿದರು.

ಕಾಲೋಚಿತವಾಗಿ ಹಾಗೂ ಯಾಂತ್ರಿಕವಾಗಿ ಚುನಾವಣೆಗಳನ್ನು ನಡೆಸುತ್ತಿರುವ ಚುನಾವಣಾ ಆಯೋಗವು ಕೂಡಾ ಮತ್ತಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿ, ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ.  ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆಗೆ ಸ್ವಯಂ ಪ್ರೇರಿತವಾಗಿ ಮತ್ತಷ್ಟು ಶ್ರಮಿಸಿ, ಮುನ್ನಡೆಯುವತ್ತ ದಾಪುಗಾಲು ಹಾಕಬೇಕಿದೆ.

ಸರ್ಕಾರದ ನೀತಿ ನಿರೂಪಣೆ ಮತ್ತು ವಿವೇಚನಾಧಿಕಾರವನ್ನು ಪ್ರಶ್ನಿಸುವ ಹಾಗೂ ಚುನಾವಣಾ ಆಯೋಗದ ಕಾರ್ಯಚಟುವಟಿಕೆ ಮತ್ತು ಕಾರ್ಯವ್ಯಾಪ್ತಿಯನ್ನು ವಿಮರ್ಶಿಸುವ ಹಕ್ಕು ಈ ದೇಶದ ಎಲ್ಲಾ ನಾಗರೀಕರಿಗೆ ಇದೆ.

ಚುನಾವಣಾ ಸಂದರ್ಭದಲ್ಲಿ ಮತ ಚಲಾಯಿಸದೆ ಅಥವಾ ಯಾವುದೇ ಒಂದು ಪಕ್ಷಕ್ಕೆ ಸ್ವಷ್ಟ ಬಹುಮತ ನೀಡದೇ ಇದ್ದರೆ, ಅದು ಮತದಾರರ ಕರ್ತವ್ಯ ಲೋಪವೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸಮೀಪಿಸುತ್ತಿದೆ.   ಸದನದ ಒಳಗೂ ಹೊರಗೂ ಎಲ್ಲಾ ಹಂತಗಳಲ್ಲೂ ಇಂತಹ ವಿಷಯಗಳ ಕುರಿತು ಸುದೀರ್ಘ ಚರ್ಚೆಗಳ ಆದಲ್ಲಿ ಮಾತ್ರ ಸಮಾಜದಲ್ಲಿ ಬದಲಾವಣೆ ಅಥವಾ ಪರಿವರ್ತನೆ ತರಲು ಸಾಧ್ಯ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿದರು.

ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಮತ್ತು ವಿಧಾನಸಭಾ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button