ಸಿದ್ದರಾಮಯ್ಯರೇ ಚುನಾವಣೆಗೆ ನಿಂತಿದ್ದಾರೆ ಅಂದುಕೊಂಡು ಮತ ಹಾಕಿ: ಸಿಎಂ ಕರೆ
*ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ. ಇಲ್ಲಿ ಭರ್ಜರಿ ಬಹುಮತದಿಂದ ಕಾಂಗ್ರೆಸ್ ಗೆಲ್ಲಿಸಿ: ಸಿ.ಎಂ.ಸಿದ್ದರಾಮಯ್ಯ ಕರೆ*
*ಹುಬ್ಬಳ್ಳಿಯಲ್ಲಿ ಸೋತ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿಯಲ್ಲೂ ಸೋಲಿಸಿ ವಾಪಾಸ್ ಕಳುಹಿಸಿ: ಸಿ.ಎಂ.ಸಿದ್ದರಾಮಯ್ಯ*
*ಮೋದಿ ಬೆಳಗಾವಿಗೆ ಬಂದು ಭಯಾನಕ ಹಸೀ ಸುಳ್ಳು ಹೇಳಿ ಹೋಗಿದ್ದಾರೆ: ಸಿ.ಎಂ ವ್ಯಂಗ್ಯ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ (ಯರಗಟ್ಟಿ) : ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ. ಇಲ್ಲಿ ಭರ್ಜರಿ ಬಹುಮತದಿಂದ ಕಾಂಗ್ರೆಸ್ ಗೆಲ್ಲಿಸಿ. ಹುಬ್ಬಳ್ಳಿಯಲ್ಲಿ ಸೋತಿದ್ದ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿಯಲ್ಲೂ ಸೋಲಿಸಿ ವಾಪಾಸ್ ಕಳುಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮೃಣಾಳ್ ಹೆಬ್ಬಾಳ್ಕರ್ ಗೆಲುವಿನ ಸಂದೇಶ ನೀಡಲು ಸಂಘಟಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯರೇ ಚುನಾವಣೆಗೆ ನಿಂತಿದ್ದಾರೆ ಅಂದುಕೊಂಡು ಮತ ಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ: ಇವರ ಪುತ್ರನನ್ನು ಲೋಕಸಭೆಯಲ್ಲಿ ಗೆಲ್ಲಿಸಿದರೆ ಜಿಲ್ಲೆಯ ಅಭಿವೃದ್ಧಿ ಹೆಚ್ಚಾಗತ್ತೆ ಎಂದರು.
*ರಾಜ್ಯಕ್ಕೆ ಬರೋದು, ಸುಳ್ಳು ಹೇಳಿ ಓಡೋಗೋದು*
ಮೋದಿ ಬೆಳಗಾವಿಗೆ ಬಂದು ಭಯಾನಕ ಹಸೀ ಸುಳ್ಳು ಹೇಳಿ ಹೋಗಿದ್ದಾರೆ. ಪ್ರತೀ ಬಾರಿ ರಾಜ್ಯಕ್ಕೆ ಬರೋದು, ಸುಳ್ಳು ಹೇಳಿ ಹೋಗೋದೇ ಆಯ್ತು. ನಾವು ಶಿವಾಜಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ಅವರಿಗೆ ಅವಮಾನಿಸಿದ್ದೀವಿ ಎಂದು ಹಸಿ ಹಸಿ ಸುಳ್ಳು ಹೇಳಿ ಹೋಗಿದ್ದಾರೆ.
ರಾಣಿ ಚನ್ನಮ್ಮ ಜಯಂತಿ ಆರಂಭಿಸಿದ್ದು ನಮ್ಮ ಸರ್ಕಾರ. ಶಿವಾಜಿ ಮಹಾರಾಜರನ್ನು ಅತ್ಯಂತ ಗೌರವದಿಂದ ಕಾಣುವವರು ನಾವು. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಮಾಡಿದವರು ನಾವು. ಹೀಗಾಗಿ ಈ ಹಸಿ ಸುಳ್ಳುಗಾರ ಮೋದಿ ಮಾತನ್ನು ನಂಬಬೇಡಿ. ನಂಬಿ ಮೋಸ ಹೋಗಬೇಡಿ. ಹತ್ತತ್ತು ವರ್ಷ ಮೋದಿ ಬರೀ ಸುಳ್ಳು ಹೇಳಿಕೊಂಡು ತಿರುಗಿದ್ದು ಬಿಟ್ಟರೆ ಒಂದೇ ಒಂದು ಭರವಸೆಯನ್ನೂ ಈಡೇರಿಸಲಿಲ್ಲ ಎಂದರು.
*ಬಿಜೆಪಿಯವರು ಫಲಾನುಭವಿಗಳನ್ನು ಅವಮಾನಿಸಿದರು: ಈಗ ನಿಂತೋಗತ್ತೆ ಎಂದು ಸುಳ್ಳು ಹೇಳುತ್ತಿದ್ದಾರೆ*
ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಅವಮಾನಿಸಿದರು. ಈಗ ಚುನಾವಣೆ ಬಳಿಕ ಗ್ಯಾರಂಟಿಗಳು ನಿಂತೋಗತ್ತವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಐದು ವರ್ಷ ಗ್ಯಾರಂಟಿಗಳು ನಿಲ್ಲುವುದಿಲ್ಲ. ಮುಂದಿನ ವರ್ಷಕ್ಕೆ ಬೇಕಾಗುವ ಹಣವನ್ನು ನಾನು ಆಗಲೇ ತೆಗೆದಿಟ್ಟಿದ್ದೀವಿ ಎಂದರು.
ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ , ಬೈರತಿ ಸುರೇಶ್, ಮಾಜಿ ಸಚಿವರಾದ ವಿನಯ್ ಕುಲಕರ್ಣಿ ಹಾಗೂ ಜಿಲ್ಲೆಯ ಶಾಸಕರು ಮತ್ತು ಮುಖಂಡರುಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ