*ಹುಕ್ಕೇರಿ ಕ್ಷೇತ್ರದಲ್ಲಿ 94 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಅನುಮೋದನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ಮತಕ್ಷೇತ್ರದಲ್ಲಿ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 94 ಕೋಟಿ ರೂ. ವೆಚ್ಚದಲ್ಲಿ ಘಟಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಕಾಮಗಾರಿಗೆ ಇಂದು ನೀರಾವರಿ ಇಲಾಖೆಯಿಂದ ಅನುಮೋದಿಸಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಪದನಿಮಿತ್ತ ಸರ್ಕಾರದ ಅಧಿನ ಕಾರ್ಯದರ್ಶಿ ವೀಣಾ ವೈ.ಎನ್. ಆದೇಶಿಸಿದ್ದಾರೆ.
ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಸಚಿವ ಸತೀಶ್ ಜಾರಕಿಹೊಳಿ, ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹಾಗೂ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ 94 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅನುಮೋದನೆ ನೀಡಲಾಗಿದೆ.
ಈ ಯೋಜಯಿಂದ ಹುಕ್ಕೇರಿ ಮತಕ್ಷೇತ್ರದ ಯರನಾಳ, ಬಡಕುಂದ್ರಿ ಹಾಗೂ ಯಮಕಮರಡಿ ಮತಕ್ಷೇತ್ರದ ಕೋಚರಿ, ಚಿಕ್ಕಲಗುಡ್ಡ, ಗೋಟೂರು ಗ್ರಾಮಗಳ ರೈತರಿಗೆ ಈ ನೀರು ತುಂಬಿಸುವ ಕಾಮಗಾರಿ ಸಾಕಷ್ಟು ಅನಕೂಲವಾಗಲಿದೆ. ಘಟಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಮೊದಲ ಹಂತದಲ್ಲಿ 60 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲು ಅನುಮೋದಿಸಲಾಗಿದೆ.
ಈ ಕಾಮಗಾರಿಯಿಂದ ರೈತರಿಗೆ ಅನುಕೂಲ: ಈ ಯೋಜನೆಯಿಂದ ಮುಂಗಾರೇತರ ಋತುವಿನಲ್ಲಿ 144 ಎಂಸಿಎಫ್ ನೀರು ಲಭ್ಯವಾಗಲಿದೆ. ಹಾಗೂ ಮುಂಗಾರು ಋತುವಿನಲ್ಲಿ 178 ಎಂಸಿಎಫ್ ನೀರು ಲಭ್ಯವಿರಲಿದ್ದು, 1039.28 ಹೇಕ್ಟರ್ ರೈತರ ಜಮೀನುಗಳಿಗೆ ನೀರಾವರಿ ಒದಗಿಸಲಾಗುವುದು.
ಇದರಿಂದ ಸುತ್ತಮುತ್ತಲಿನ ಭಾವಿ ಮತ್ತು ಕೊಳವೆ ಭಾವಿಗಳ ಅಂತರ್ಜಲ ಮಟ್ಟವನ್ನು ಅಭಿವೃದ್ಧಿ ಪಡಸಲು ಸಹಕಾರಿಯಾಗಲಿದೆ. ಅಲ್ಲದೇ ರೈತರ ಆರ್ತಿಕ ಪರಿಸ್ಥಿತಿಯೂ ಸುಧಾರಿಸಲಿದೆ. ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯರನಾಳ, ಬಡಕುಂದ್ರಿ, ಕೋಚರಿ, ಚಿಕ್ಕಾಲಗುಡ್ಡ, ಗೋಟೂರು ಬ್ಯಾರೇಜಗಳಿಗೆ ಸಮರ್ಪಕವಾಗಿ ನೀರು ಹರಿದು ಬರದಿರುವದರಿಂದ ಬ್ಯಾರೇಜ್ ಅಡಿಯಲ್ಲಿರುವ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.
ಆದ್ದರಿಂದ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ಮತ್ತು ಘಟಪ್ರಭಾ ನದಿಗಳ ಸಂಗಮನದ ಕೆಳ ಭಾಗದಲ್ಲಿ ಜಾಕ್‌ವೆಲ್ ಕಂ ಪಂಪಹೌಸ್ ನಿರ್ಮಿಸಿ ಘಟಪ್ರಭಾ ನದಿಯಿಂದ 0.58 ಕ್ಯೈಮಾಕ್ಸ್ ನೀರನ್ನು ಎತ್ತಿ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯರನಾಳ, ಬಡಕುಂದ್ರಿ, ಕೋಚರಿ, ಚಿಕ್ಕಾಲಗುಡ್ಡ, ಗೋಟೂರು ಬ್ಯಾರೇಜಗಳನ್ನು ಮುಂಗಾರೇತರ ಋತುವಿನಲ್ಲಿ ತುಂಬಿಸಲು ಉದ್ದೇಶಸಲಾಗಿದೆ. ಸದರಿ ಬ್ರಿಡ್ಜ್ ಕಂ ಬ್ಯಾರೇಜಗಳ ಸಾಮರ್ಥ್ಯದ ಶೇ. 60ರಷ್ಟು ಅಂದರೆ 144.00 ಎಂಸಿಎಫ್‌ಟಿ ನೀರನ್ನು ಪಂಪ್ ಮಾಡಿ ತುಂಬಿಸಲು ಉದ್ದೇಶಿಸಲಾಗಿದೆ.
ಅದರಂತೆ ಸದರಿ ಏತ ನೀರಾವರಿ ಯೋಜನೆಯ ಮೊದಲನೇ ಹಂತದ ಕಾಮಗಾರಿಯಲ್ಲಿ ಜಾಕ್ ವೆಲ್ ಕಂ ಪಂಪಹೌಸ್ ನಿರ್ಮಾಣ ಮತ್ತು ಯೋಜನೆ ನಿರ್ಮಾಣಕ್ಕೆ ಮಾಡಲು ವೆಚ್ಚವನ್ನು ಫಲಪ್ರದವಾಗಿಸಲು 3 ಬ್ಯಾರೇಜ್ ಗಳನ್ನು ತುಂಬಿಸಲು 60 ಕೋಟಿ ಅಂದಾಜು ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಪದನಿಮಿತ್ತ ಸರ್ಕಾರದ ಅಧಿನ ಕಾರ್ಯದರ್ಶಿ ವೀಣಾ ವೈ.ಎನ್ ಆದೇಶಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ