ಮಹಾಪರಿನಿರ್ವಾಣ, ಮೌಢ್ಯ ವಿರೋಧಿ ದಿನಾಚರಣೆ
ಪ್ರಗತಿವಾಹಿನಿ ಸುದ್ದಿ, ಗೋಕಾಕ: ನಾವು ನಂಬಿಕೆಯ ವಿರೋಧಿಗಳಲ್ಲ ಮೂಢನಂಬಿಕೆಯ ವಿರೋಧಿಗಳು, ಅರಿವು ನೀಡಿದ ಅಂಬೇಡ್ಕರ್ ಅವರನ್ನು ದೇವರನ್ನಾಗಿ ಮಾಡುವ ಮೂಢನಂಬಿಕೆಯನ್ನೂ ನಾವು ವಿರೋಧಿಸುವುದರ ಜೊತೆಗೆ ಹೀಗೇ ಇರಬೇಕು ಹೀಗೇ ಬದುಕಬೇಕು ಎಂದು ಆದೇಶ ನೀಡುವ ಮನುಷ್ಯ ವಿರೋಧಿ ಚಿಂತನೆಗಳ ನಿಯಂತ್ರಣವನ್ನು ಕೂಡ ನಾವು ವಿರೋಧಿಸುತ್ತೇವೆ. ನಮ್ಮ ಹೋರಾಟ ನಮ್ಮನ್ನು ನಾವು ಸ್ವತಂತ್ರವಾಗಿ ಬದುಕಲು ಬಿಡಿ ಎನ್ನುವುದಾಗಿದೆ ಎಂದು ಯಮಕಮರಡಿಯ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಮಾನವ ಬಂಧುತ್ವ ವೇದಿಕೆಯಿಂದ ಗೋಕಾಕದ ಮರಾಠಾ ಸಮುದಾಯದ ಸ್ಮಶಾನದಲ್ಲಿ ಆಯೋಜಿಸಿದ ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,
ನಮ್ಮ ಸಮಾಜಕ್ಕೆ ಬುದ್ಧ ಬಸವಣ್ಣ ಅಂಬೇಡ್ಕರ್ ಆದರ್ಶವಾಗಿಲ್ಲ ಅದಕ್ಕೇ ನಮ್ಮ ಸಂಘರ್ಷ ಸುರುವಾಗಿದೆ, ಮುಚ್ಚಿಟ್ಟಿರುವ ಈ ದೇಶದ ನಿಜವಾದ ಚರಿತ್ರೆಯನ್ನು, ಶೋಷಿತ ವರ್ಗಗಳಿಗೆ ತಿಳಿಸಿ ಹೇಳಬೇಕಾಗಿದೆ. ಬುದ್ದನ ಮಾನವೀಯ ತತ್ವ ಬಸವಣ್ಣನವರ ವಚನಚಿಂತನೆಗಳು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿವೆ ಇಂತಹ ಸಂವಿಧಾನ ರೀತಿ ಹೋರಾಡುವುದು ಮತ್ತು ಅದನ್ನು ರಕ್ಷಿಸುವುದಕ್ಕಾಗಿ ನಮ್ಮ ಮಾನವ ಬಂಧುತ್ವ ವೇದಿಕೆಯ ಚಳುವಳಿ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಚಿಂತಕ ಬಿ. ಎಸ್. ನಾಡಕರ್ಣಿ ಅವರು ಮಾತನಾಡಿ ಸಾಮಾಜಿಕ ಬದಲಾವಣೆ ಎನ್ನುವುದು ಇಂದು ಓಟಿನ ಶಕ್ತಿಯಲ್ಲಿದೆ, ಓಟಿನ ಮಹತ್ವ ತಿಳಿಯದ ನಾವು ಯಾರಿಗೋ ಓಟು ಹಾಕಿ ಅಧಿಕಾರಕ್ಕೆ ತಂದು ನಮಗೆ ನ್ಯಾಯ ಬೇಕು ಎಂದು ಬೀದಿಗೆ ಬಂದು ಪ್ರತಿಭಟನೆ ಮಾಡುತ್ತೇವೆ. ಅದಕ್ಕಾಗಿ ಪವಿತ್ರವಾದ ಓಟನ್ನು ಪ್ರಗತಿಪರರಿಗೆ ಹಾಕಿ ಆಯ್ಕೆ ಮಾಡಿ ಅಂಥವರಿಂದ ಉತ್ತಮ ಸರ್ಕಾರ ಮಾಡುವುದು ನಮ್ಮ ಕೈಯಲ್ಲಿದೆ. ಅದಕ್ಕಾಗಿ ನಾವು ಬೌದ್ಧಿಕವಾಗಿ ಪರಿವರ್ತನೆ ಹೊಂದಬೇಕಾಗಿದೆ, ಈ ಪರಿವರ್ತನೆಯೇ ನಿಜವಾದ ಕ್ರಾಂತಿ ಇದನ್ನು ಬುದ್ಧ ಪಂಚಶೀಲದ ಮೂಲಕ, ಬಸವಣ್ಣ ಸಪ್ತಶೀಲದ ಮೂಲಕ ಮತ್ತು ಅಂಬೇಡ್ಕರ್ ಸಂವಿಧಾನದ ಮೂಲಕ ಮಾಡಿದ್ದು ಇದೇ ಆಗಿದೆ ಎಂದ ಅವರು ಜಾಣ ಕಾಗೆಯ ಕಥೆ ಹೇಳಿ ಕಾಗೆಯೂ ಬದಲಾಗಿದೆ ಇನ್ನು ನಾವು ವೀಚಾರಶೀಲರು ಬದಲಾಗದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.
ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಮಾತನಾಡಿ ವ್ಯವಸ್ಥೆಯನ್ನು ಪ್ರಶ್ನಿಸುವ, ವೈಚಾರಿಕ ಚಿಂತನೆಯನ್ನು ಬಿತ್ತುವ ಅಭಿವ್ಯಕ್ತಿ ಸ್ವಾತಂತ್ರ್ಯ ಇಂದು ಆತಂಕದಲ್ಲಿದೆ, ಚಿಂತಕರನ್ನು ಭಯಗೊಳಿಸಿ ಬಾಯಿ ಮುಚ್ಚಿಸಲಾಗುತ್ತಿದೆ, ಸಂವಿಧಾನವನ್ನು ಅಭದ್ರಗೊಳಿಸಲಾಗುತ್ತಿದೆ. ಬುದ್ಧ ಬಸವಣ್ಣ ಕನಕದಾಸರಂಥವರು ಧಾರ್ಮಿಕ ನೆಲೆಯಲ್ಲಿ ಬೌದ್ಧಿಕ ಬದಲಾವಣೆಯ ಮೂಲಕ ಪರಿವರ್ತನಕ್ಕೆ ಕಾರಣರಾಗಿದ್ದಾರೆ, ಆ ಚಿಂತನೆಗಳ ನೆಲೆಯಲ್ಲೇ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಭಾರತೀಯ ಸಾಮಜವನ್ನು ಪರಿವರ್ತನೆ ಮಾಡಿದ್ದಾರೆ ಎಂದು ಹೇಳಿ ಮಾನವ ಬಂಧುತ್ವ ವೇದಿಕೆಯ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಬೆಳವಿಯ ಶರಣಬಸವ ದೇವರು ಮಾತನಾಡಿ ಭಾರತೀಯ ಮಹಿಳೆಯರ ಬದುಕಿನ ಬದಲಾವಣೆಗಾಗಿ ಲೋಕಸಭೆಯಲ್ಲಿ ಮಂಡಿಸಿದ ಹಿಂದೂ ಕೋಡಬಿಲ್ ಗೆ ಬಹುಮತ ಸಿಗದಾದಾಗ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದ ಅಂಬೇಡ್ಕರ್ ಭಾರತೀಯ ಮಹಿಳೆಯರ ಭಾಗ್ಯವಿದಾತರಾಗಿದ್ದಾರೆ. ಮನುಸ್ಕೃತಿ ಮಹಿಳೆಯರ ಘನತೆಯನ್ನು ಕುಂದಿಸಿದ್ದರೆ ಅಂಬೇಡ್ಕರ್ ಎತ್ತಿ ಹಿಡಿದಿದ್ದಾರೆ, ಅಂಬೇಡ್ಕರ್ ಸಂವಿಧಾನವು ಸರ್ವ ಜನಾಂಗಗಳ ರಕ್ಷೆ ಮತ್ತು ಅಭಿವೃದ್ಧಿಯನ್ನೊಳಗೊಂಡಿದೆ, ಅದಕ್ಕಾಗಿಯೇ ನಾವು ಸಂವಿಧಾನವನ್ನು ಗೌರವಿಸಬೇಕು ಎಂದು ಹೇಳಿದರು.
ಯುವ ನಾಯಕ ರಾಹುಲ್ ಜಾರಕಿಹೊಳಿ, ಗೋಕಾಕ ನಗರಸಭೆಯ ಸದಸ್ಯರಾದ ಜ್ಯೋತಿಬಾ ಸುಬಂಜಿ, ಅಶೋಕ್ ಪೂಜಾರಿ, ಜೀವನ್ ಮಾಂಜ್ರೇಕರ ವೇದಿಕೆಯಲ್ಲಿದ್ದರು.
ಪ್ರಾರಂಭದಲ್ಲಿ ಅನಿಲ ಕಾಂಬಳೆ ಅವರ ಕಲಾತಂಡದವರು ಕ್ರಾಂತಿಗೀತೆಗಳನ್ನು ಹಾಡಿದರು. ಗಣ್ಯರಿಂದ ಅಂಬೇಡ್ಕರ್ ಭಾ ವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಸಸಿಗೆ ನೀರೆರೆದು ಉದ್ಘಾಟಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳಗಾವಿಯ ಅನಿಲ್ ಚಂದೂರಕರ ಅವರು ರೂಪಿಸಿದ ಪ್ರಬುದ್ಧ ಭಾರತ ದಿನದರ್ಶಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ಹಾವೇರಿಯ ಸುಭಾಷ್ ಗಸ್ತಿ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು ಮತ್ತು ಮುಧೋಳದ ಮಂಜುನಾಥ ಬಾವಿದಂಡಿ ಅವರು ಹೊಸ ಬೈಕ್ ಗೆ ಸತೀಶ್ ಜಾರಕಿಹೊಳಿ ಅವರಿಂದ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘಟಕರಾದ ರಿಯಾಜ್ ಚೌಗಲಾ, ಮುನ್ನಾ ಬಾಗವಾನ್ ಸಿದ್ದು ಸುಣಗಾರ, ಡಾ. ಡಿ. ಶ್ರೀಕಾಂತ್, ಮಾನವ ಬಂಧುತ್ವ ವೇದಿಕೆಯ ವಿದ್ಯಾರ್ಥಿ ಘಟಕದ ಭರಮಣ್ಣ ತೋಳಿ, ಗಜಾನನ ಸಂಗೋಟೆ, ಶಂಕರ್ ಬಾಗೇವಾಡಿ, ಅಡಿವೆಪ್ಪ ಇಟಗಿ ಮುಂತಾದವರು ಉಪಸ್ಥಿತರಿದ್ದರು. ರಾಮಕೃಷ್ಣ ಪಾನಬುಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ