*ಮಹಾರಾಷ್ಟ್ರ ರೀತಿ ಕಬ್ಬಿಗೆ ಬೆಲೆ ನಿಗದಿ ಮಾಡಲು ನಮ್ಮಲ್ಲಿ ಆಗಲ್ಲ: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ರೈತರಿಗೂ ಅನುಕೂಲ ಆಗಬೇಕು ಅದರ ಜೊತೆಗೆ, ಸಕ್ಕರೆ ಕಾರ್ಖಾನೆಗಳೂ ಉಳಿಯಬೇಕು ಎಂದು ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು ಎಂದು ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಬಾಗಲಕೋಟೆ ಮತ್ತು ನಮ್ಮ ಜಿಲ್ಲೆಯಲ್ಲಿಯೇ ಹೆಚ್ಚು ಸಕ್ಕರೆ ಕಾರ್ಖಾನೆ ಇದೆ. ಈ ವಿಚಾರವಾಗಿ ಈಗಾಗಲೇ ಕಾನೂನು ಸಚಿವರು ರೈತರ ಜೊತೆ ಮಾತನಾಡಿದ್ದಾರೆ. ಅವರಿಗೆ ರೈತರು ತಮ್ಮ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಈ ವಿಚಾರವಾಗಿ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಲಾಗುತ್ತದೆ ಎಂದರು
ರೈತರ ಪ್ರತಿಭಟನೆಯ ವಿಚಾರವಾಗಿ ಹಾಗೂ ಅವರ ಬೇಡಿಕೆಗೆ ಸಂಬಂಧಪಟ್ಟಂತೆ ಸಿಎಂ ಅವರ ನೇತೃತ್ವದಲ್ಲಿ ನಿರ್ಧಾರ ಮಾಡಲಾಗುತ್ತದೆ. ಒಂದು ಕಡೆ ರೈತರಿಗೆ ಸಹ ಅನುಕೂಲ ಆಗಬೇಕು ಹಾಗೂ ಈ ಕಡೆ ಕಾರ್ಖಾನೆಗಳು ಉಳಿಯಬೇಕು. ರಾಜ್ಯದಲ್ಲಿ ಹಿಂದಿನಿಂದಲೂ ಕೂಡ ಎಂಆರ್ಪಿ ಬೆಲೆಗಿಂತ ಹೆಚ್ಚು ಬೆಲೆಯನ್ನು ಕೊಡಲಾಗುತ್ತಿದೆ. ನಾವು ಮಹಾರಾಷ್ಟ್ರ ರೀತಿ ಬೆಲೆ ನಿಗದಿ ಮಾಡಲು ನಮ್ಮಲ್ಲಿ ಆಗಲ್ಲ ಯಾಕೆಂದರೆ ಅವರ ಇಳುವರಿ ಜಾಸ್ತಿ ಎಂದು ತಿಳಿಸಿದರು.
ಈ ಬೆಲೆಯ ವಿಚಾರವಾಗಿ ಕೇಂದ್ರ ಸರ್ಕಾರ ಪಾತ್ರ ತುಂಬಾ ದೊಡ್ಡ ಇರುತ್ತದೆ. ಸಕ್ಕರೆ ಬೆಲೆಯನ್ನು ಜಾಸ್ತಿ ಮಾಡುವುದು ಕೇಂದ್ರ ಸರ್ಕಾರದವರು. ಹಾಗೆಯೇ, ಅದರ ಬೆಲೆಯನ್ನು ಕಡಿಮೆ ಮಾಡೋದು ಸಹ ಕೇಂದ್ರ ಸರ್ಕಾರವೇ ಆಗಿದೆ. ನಾವು 3200 ರೂಪಾಯಿಗೆ ಒಪ್ಪಿಕೊಂಡಿದ್ದೆವು. ಅಲ್ಲದೇ, ಈ ಬೆಲೆಯನ್ನು ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರು ಎಲ್ಲರೂ ಒಪ್ಪಿಕೊಂಡಿದ್ದರು. ಆದರೆ ಈಗ ಸಂಘಟನೆಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ ಎಂದರು.
ಈ ಕೆಲಸವನ್ನು ಬಿಜೆಪಿ ಅವರು ಮಾಡಬೇಕು. ಆದರೆ ಅವರು ಅಲ್ಲಿ ಹೋಗಿ ಮಲಗಿದ್ದಾರೆ. ಏನೂ ಕೆಲಸ ಮಾಡುತ್ತಿಲ್ಲ. ಬಿ.ವೈ.ವಿಜಯೇಂದ್ರ ಅವರು ಕೇಂದ್ರದ ಮೇಲೆ ಈ ವಿಚಾರವಾಗಿ ಒತ್ತಡ ಹೇರಬೇಕು. ಆದರೆ ಅದನ್ನ ಮಾಡುವುದನ್ನ ಬಿಟ್ಟು ರೈತರ ಪ್ರತಿಭಟನೆಗೆ ಹೋಗಿ ಬಿಜೆಪಿ ಅವರು ನಾಟಕ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.



