Kannada NewsKarnataka News
ಚಪ್ಪಲಿ ಕದಿಯುವವರು, ಬೇರೆ ವಸ್ತು ಕದಿಯುವವರನ್ನು ನಾವು ನೋಡಿದ್ದೆವು, ಆದರೆ ವೋಟ್ ಕಳ್ಳತನ ಮಾಡುವುದನ್ನು ನೋಡಿರಲಿಲ್ಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: *ಸದನದಲ್ಲಿ ಭಯೋತ್ಪಾದನೆ ವಿಚಾರವಾಗಿ ಸಿ ಟಿ ರವಿ ಅವರಿಗೆ ಡಿ.ಕೆ. ಶಿವಕುಮಾರ್ ಅವರ ಖಡಕ್ ಉತ್ತರ ನೀಡಿದ್ದಾರೆ.
‘ಸಿ.ಟಿ ರವಿ ಅವರ ಆಚಾರ, ವಿಚಾರ, ಪ್ರಚಾರ, ಅವರ ಹಾವ-ಭಾವ ನನಗೂ ತಕ್ಕಮಟ್ಟಿಗೆ ಅರ್ಥವಾಗುತ್ತದೆ. ನಾನು ಅವರಷ್ಟು ದೊಡ್ಡ ಸ್ಥಾನಕ್ಕೆ ಹೋಗದಿದ್ದರೂ, ಅವರಷ್ಟು ಅನುಭವ ಇಲ್ಲದಿದ್ದರೂ ಅರ್ಥವಾಗುತ್ತದೆ. ಈ ವಿಚಾರವಾಗಿ ಮಾತನಾಡುವುದು ಅವರ ಅಜೆಂಡಾ, ಅದಕ್ಕೆ ನನ್ನ ಆಕ್ಷೇಪ ಇಲ್ಲ.
ನಾನು ಪಕ್ಷದ ಅಧ್ಯಕ್ಷನಾಗಿದ್ದು, ನಮಗೆ ನಮ್ಮದೇ ಆದ ಆಚಾರ, ವಿಚಾರಗಳಿವೆ. ಈ ರಾಜ್ಯದಲ್ಲಿ ಎಲ್ಲ ರೀತಿಯ ಕಳ್ಳತನ ನೋಡಿದ್ದೇವೆ. ಹಣ ಕದಿಯುವವರು, ಒಡವೆ ಕದಿಯುವವರು, ಚಪ್ಪಲಿ ಕದಿಯುವವರು, ಬೇರೆ ವಸ್ತು ಕದಿಯುವವರನ್ನು ನಾವು ನೋಡಿದ್ದೆವು. ಆದರೆ ವೋಟ್ ಕಳ್ಳತನ ಮಾಡುವುದನ್ನು ನೋಡಿರಲಿಲ್ಲ.’
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕರು ಗದ್ದಲ ಸೃಷ್ಟಿಸಲು ಮುಂದಾದಾಗ, ‘ಎಷ್ಟೇ ಜನ ಎದ್ದು ನಿಂತು ಗದ್ದಲ ಮಾಡಿದರೂ ಈ ಡಿ.ಕೆ. ಶಿವಕುಮಾರ್ ಹೆದರುವ ಮಗ ಅಲ್ಲ. ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 33 ವರ್ಷಗಳಿಂದ ಇಲ್ಲಿ ಕೂತಿದ್ದೇನೆ. ಎಲ್ಲವನ್ನೂ ನೋಡಿದ್ದೇನೆ. ಆಡಳಿತ ಪಕ್ಷದ ಸಿ.ಟಿ ಅವರ ಮಾತನ್ನು ನಾವು ತಾಳ್ಮೆಯಿಂದ ಕೇಳಿದ್ದೇವೆ. ಈ ವಿಚಾರವಾಗಿ ನಮ್ಮ ಪಕ್ಷದ ಪ್ರತಿನಿಧಿಯಾಗಿ ನಾನು ವಿಚಾರ ಮಂಡಿಸಬೇಕಿದೆ. ನಾನು ಭಯೋತ್ಪಾದನೆ ವಿಚಾರದಲ್ಲಿ ಯಾವ ದೃಷ್ಟಿಕೋನದಿಂದ ಮಾತನಾಡಿದ್ದೇನೆ ಎಂದು ಸ್ಪಷ್ಟನೆ ನೀಡಲು ಬಯಸುತ್ತೇನೆ. ಈ ವಿಚಾರದಲ್ಲಿ ಸ್ಪಷ್ಟನೆ ನೀಡುವುದು ನನ್ನ ಕರ್ತವ್ಯ. ಅವರು ಹೇಗೆ ಕುಕ್ಕರ್ ವಿಚಾರ ಹಿಡಿದುಕೊಂಡು ದೇಶದ ವಿಚಾರ ಮಾಡಿದರೋ ಅದೇ ರೀತಿ ನನ್ನ ಸ್ಪಷ್ಟನೆಗೆ ಅದರ ಹಿನ್ನೆಲೆಯನ್ನೂ ಹೇಳಬೇಕಲ್ಲವೇ?’ ಎಂದು ಪ್ರಶ್ನಿಸಿ ಮಾತು ಮುಂದುವರಿಸಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಕ್ರಮವಾಗಿ, ಕಾನೂನು ಬಾಹಿರವಾಗಿ 8 ಸಾವಿರಕ್ಕೂ ಹೆಚ್ಚು ಖಾಸಗಿ ವ್ಯಕ್ತಿಗಳನ್ನು ಬಿಎಲ್ಓಗಳಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡು, ಮತಗಳ ಕಳ್ಳತನ, ಮಾಹಿತಿ ಕಳವು, ದತ್ತಾಂಶಗಳ ಕಳವು ಆಗುತ್ತಿದೆ ಎಂದು ದೇಶದೆಲ್ಲೆಡೆ ಚರ್ಚೆ ಆಗುತ್ತಿದ್ದ ಸಂದರ್ಭದಲ್ಲಿ ನಾವು ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆವು. ಈ ವಿಚಾರವಾಗಿ ಅಧಿಕಾರಿಗಳು ಅಮಾನತುಗೊಂಡಿದ್ದರು. ಈ ಅಕ್ರಮ ನಡೆಸಿದ್ದ ಚಿಲುಮೆ ಸಂಸ್ಥೆ ಬಗ್ಗೆ ದೊಡ್ಡ ಮಾಹಿತಿಗಳು ಬಹಿರಂಗವಾಗುತ್ತಿದ್ದವು. ಈ ಸಂದರ್ಭದಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಭವಿಸಿತು.
ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಕೃತ್ಯಕ್ಕೆ ತನ್ನ ಪ್ರಮುಖ ನಾಯಕರುಗಳನ್ನು ಕಳೆದುಕೊಂಡಿದೆ. ನಾವು ಭಯೋತ್ಪಾದನೆ ವಿರುದ್ಧ ನಿಂತಿದ್ದೇವೆ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ನಮ್ಮ ಪಕ್ಷ ಅನೇಕ ಭಯೋತ್ಪಾದನೆ ನಿಲುವುಗಳನ್ನು ತೆಗೆದುಕೊಂಡಿದೆ. ನಾವು ಯಾವುದೇ ಭಯೋತ್ಪಾದಕರು, ಕಾನೂನು ಬಾಹಿರ ಕೃತ್ಯ ನಡೆಸುವ ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ. ಕಾನೂನು ರೀತಿಯಲ್ಲಿ ಯಾರು ಯಾರನ್ನಾದರೂ ಬಂಧಿಸಲಿ, ಯಾವುದೇ ಕ್ರಮ ಕೈಗೊಳ್ಳಲಿ, ಆ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ.
ಈ ಪ್ರಕರಣದ ಆರೋಪಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆತನ ವಿಚಾರಣೆ ಮಾಡಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹೇಳಿಕೆ ನೀಡಿರುವಾಗ, ಡಿಜಿ ಅವರು ಘಟನೆ ನಡೆದ ಮರು ದಿನವೇ, ಆರೋಪಿಯ ವಿಚಾರಣೆ ನಡೆಯುವ ಮುನ್ನವೇ ಇದನ್ನು ಭಯೋತ್ಪಾದಕ ಕೃತ್ಯ ಎಂದು ಘೋಷಿಸಿದರು. ಆ ಮೂಲಕ ಜನರು ಹಾಗೂ ಮಾಧ್ಯಮಗಳಲ್ಲಿ ಮತದಾರರ ಮಾಹಿತಿ ಕಳವು ವಿಚಾರ ಚರ್ಚೆ ಆಗುವಾಗ ಅದರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ವಿಷಯಾಂತರ ಮಾಡಲು ಈ ಕುಕ್ಕರ್ ಪ್ರಕರಣವನ್ನು ಬಳಸಿಕೊಂಡಿದ್ದಾರೆ ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿದ್ದೆ’ ಎಂದು ಸ್ಪಷ್ಟನೆ ನೀಡಿದರು.
https://pragati.taskdun.com/dk-sivakumar-who-stood-in-support-of-medical-students-congress-is-committed-to-the-welfare-of-the-students-of-the-state/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ