Kannada NewsKarnataka NewsLatest

*ಕರ್ನೂಲ್ ಬಸ್ ದುರಂತದ ಬಗ್ಗೆ ಉನ್ನತ ತನಿಖೆ ನಡೆಸುವಂತೆ ಆ ರಾಜ್ಯ ಸರ್ಕಾರಕ್ಕೆ ಹೇಳಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಕರ್ನೂಲ್ ಬಸ್ ದುರಂತ, ಉನ್ನತ ಮಟ್ಟದ ತನಿಖೆ ನಡೆಸುವಂತೆ ಆ ರಾಜ್ಯ ಸರ್ಕಾರಕ್ಕೆ ಹೇಳಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಕರ್ನೂಲ್ ನಲ್ಲಿ ಸಂಭವಿಸಿರುವ ಬಸ್ ದುರಂತದ ಬಗ್ಗೆ ಕೇಳಿದಾಗ, “ಕರ್ನೂಲ್ ನಲ್ಲಿ ಸಂಭವಿಸಿರುವ ಬಸ್ ಅಪಘಾತ ದುರಾದೃಷ್ಟಕರ. ಇತ್ತೀಚೆಗೆ ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಗ್ರೀನ್ ಲೈನ್ ಬಸ್ ಕೂಡ ಇದೇ ರೀತಿ ದುರಂತಕ್ಕೆ ಒಳಗಾಗಿತ್ತು. ಆಗ ನಮ್ಮ ಪಕ್ಷದ ರಾಯಚೂರು ಅಧ್ಯಕ್ಷೆ ಚಾಲಕನನ್ನು ಎಚ್ಚರಿಸಿದ ಪರಿಣಾಮ, ಬಸ್ ನಲ್ಲಿದ್ದ 20 ಮೆಡಿಕಲ್ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದರು. ಕೆಲವು ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ ಆ ರಾಜ್ಯದ ಪೊಲೀಸರು ಅಗತ್ಯ ಕ್ರಮ ಕೈಗೊಂಡಿರಲಿಲ್ಲ. ನಾನು ರಾಯಚೂರಿಗೆ ಹೋದಾಗ ಅಲ್ಲಿ ಕೆಲವರು ನನಗೆ ಅದರ ವಿಡಿಯೋ ತೋರಿಸಿದರು. ಈ ದುರಂತ ಬೇರೆ ರಾಜ್ಯದಲ್ಲಿ ಆಗಿದ್ದರೂ ಈ ಬಗ್ಗೆ ಗಮನಹರಿಸುವಂತೆ ಸಾರಿಗೆ ಸಚಿವರು ಹಾಗೂ ಗೃಹ ಸಚಿವರಿಗೆ ಸೂಚಿಸುತ್ತೇವೆ. ಯಾವುದೇ ರಾಜ್ಯದ ಸರ್ಕಾರವಾಗಲಿ, ಈ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು” ಎಂದು ತಿಳಿಸಿದರು.

“ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹೀಗಾಗಿ ಅಪಘಾತಕ್ಕೆ ಕಾರಣ ತಿಳಿಯಲು ತನಿಖೆ ನಡೆಸಬೇಕಿದೆ. ಇದು ಸಣ್ಣ ಘಟನೆಯಲ್ಲ. ಇಂತಹ ದುರ್ಘಟನೆ ಮತ್ತೆ ಸಂಭವಿಸದಂತೆ ನೋಡಿಕೊಳ್ಳಬೇಕು” ಎಂದು ತಿಳಿಸಿದರು.

Home add -Advt

ಇನ್ನು ಪಕ್ಷದಲ್ಲಿ ನಾಯಕತ್ವ ವಿಚಾರವಾಗಿ ನೀಡುತ್ತಿರುವ ಹೇಳಿಕೆ ಬಗ್ಗೆ ಕೇಳಿದಾಗ, “ಶಿಸ್ತು ನಮ್ಮ ಪಕ್ಷದ ಆದ್ಯತೆ. ಈ ವಿಚಾರವಾಗಿ ನಾನು ಈಗ ಮಾತನಾಡುವುದಿಲ್ಲ. ಯಾರ ಬಳಿ ಚರ್ಚೆ ಮಾಡಬೇಕೋ ಮಾತನಾಡುತ್ತೇನೆ” ಎಂದು ತಿಳಿಸಿದರು.

Related Articles

Back to top button