ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನನಗೆ ಅತೀವ ಸಂತೋಷ ತಂದಿರುವ ವಿಚಾರವೆಂದರೆ ನಾನು ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಒಮ್ಮತದಿಂದ ಕೆಲಸ ಮಾಡುತ್ತಿರುವುದು. ಎಲ್ಲೂ ಒಂದೇ ಒಂದು ಅಪಸ್ವರ ಕೇಳಿ ಬಂದಿಲ್ಲ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಂದೆರಡು ಕಡೆ ಭಿನ್ನಾಭಿಪ್ರಾಯ ಇತ್ತು. ಅದು ನಿವಾರಣೆ ಆಗಿ ಈಗ ಎಲ್ಲೆಡೆ ಒಮ್ಮತದ ಅಭ್ಯರ್ಥಿ ಇದ್ದಾರೆ. ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಇದು ಪಕ್ಷದ ಮೊದಲ ಗೆಲುವು ಎಂದು ಕೆಪಿಸಿಸಿ ಅಧ್ಯಕ್ಷ ಡೆ.ಕಿ.ಶಿವಕುಮಾರ ಹೇಳಿದ್ದಾರೆ.
ಬೆಳಗಾವಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಆದರೆ ಬಿಜೆಪಿಯಲ್ಲಿ ಈ ಪರಿಸ್ಥಿತಿ ಇಲ್ಲ. ಅಲ್ಲಿ ಒಮ್ಮತದ ಅಭ್ಯರ್ಥಿ ಇಲ್ಲ. ಸಿಂಗಲ್ ಅಭ್ಯರ್ಥಿ ಹಾಕಿದ್ದರೂ, ಇಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ಗೊತ್ತಿದೆ. ಒಂದೇ ವೇದಿಕೆ, ಒಂದೇ ಜನ. ಆದರೆ ಎರಡು ಭಾಷಣ ಮಾಡಲಾಗುತ್ತಿದೆ. ಬಿಜೆಪಿ ಇಷ್ಟೊಂದು ದುರ್ಬಲವಾಗಿದೆ ಎಂದು ನಾನು ಭಾವಿಸಿರಲಿಲ್ಲ. ಪಕ್ಷ, ಸಿಎಂ, ಹೈಕಮಾಂಡ್ ಎಲ್ಲವೂ ಅಸಹಾಯಕ. ಇದು ಎಲ್ಲಿಗೆ ಹೋಗಿ ನಿಲ್ಲುತ್ತೊ ನೋಡೋಣ ಎಂದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಎದುರಾಳಿಯೋ ಅಥವಾ ಪಕ್ಷೇತರ ಅಭ್ಯರ್ಥಿಯೋ ಎಂಬ ಪ್ರಶ್ನೆಗೆ, ‘ನಮಗೆ ಯಾರೂ ಎದುರಾಳಿಗಳಿಲ್ಲ. ನಮ್ಮ ಮತ ನಾವು ಹಾಕಿಸಿಕೊಂಡರೆ ಸಾಕು. ನಾವು ಒಳ್ಳೆ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಇಬ್ಬರು ಅಭ್ಯರ್ಥಿ ಇಳಿಸಿ ಎದುರಾಳಿ ಮಾಡಿಕೊಳ್ಳಬೇಕಿಲ್ಲ. ನಮ್ಮಲ್ಲಿ ಪಕ್ಷಕ್ಕೆ ಮೋಸ ಮಾಡುವವರು, ಬಂಡಾಯ ಅಭ್ಯರ್ಥಿ ಇಲ್ಲ ಎಂದರು.
ಕಾಂಗ್ರೆಸ್ ಅನ್ನು ಉಸಿರುಗಟ್ಟಿಸುತ್ತೇವೆ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಯಡಿಯೂರಪ್ಪ ಅವರಿಗಾದ ನೋವು, ದುಃಖ, ದುಮ್ಮಾನ, ಮಾನಸಿಕ ಹಿಂಸೆ, ರಾಜೀನಾಮೆ – ಈ ಎಲ್ಲವನ್ನು ಅವರು ತಮ್ಮ ಪಕ್ಷದ ಮೇಲೆ ದೂರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ಕೋಪ-ತಾಪ ಹೊರಗೆ ಹಾಕಲು ನಮ್ಮ ಪಕ್ಷ ಬಳಸಿಕೊಳ್ಳುತ್ತಿದ್ದಾರೆ. ನಮ್ಮನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲೇ ಕೂರಿಸಲಿ. ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಅವರಿಗಿಂತ ಚೆನ್ನಾಗಿ ನಿಮಗೇ ಗೊತ್ತಿದೆ. ನಾನ್ಯಾಕೆ ಮಾತನಾಡಲಿ’ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರನನ್ನು, ಆ ಮೂಲಕ ಹೆಬ್ಬಾಳ್ಕರ್ ಅವರನ್ನು ಸೋಲಿಸಬೇಕು ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ‘ಅವರು ಏನಾದರೂ ಹೇಳಿಕೊಳ್ಳಲಿ. ಇಲ್ಲಿ ಕೇವಲ ಹೆಬ್ಬಾಳ್ಕರ್ ಮಾತ್ರ ಅಭ್ಯರ್ಥಿ ಅಲ್ಲ. ಕಾಂಗ್ರೆಸ್ ಪಕ್ಷವೇ ಅಭ್ಯರ್ಥಿ. ಎಲ್ಲ ಪಕ್ಷದಲ್ಲೂ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಲಾಗಿದೆ. ಯುವಕರಿಗೆ ಅವಕಾಶ ಮಾಡಿಕೊಡಲಾಗಿದೆ. ನಮ್ಮಲ್ಲಿ ಎಲ್ಲರೂ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ’ ಎಂದರು.
ನೆರೆ ಪರಿಹಾರ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಇಲ್ಲಿ ಸುಮಾರು 40 ಜನ ಹೆಣ್ಣುಮಕ್ಕಳು ಬಂದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ನಾನು ಅವರು ಕೊಟ್ಟ ದಾಖಲೆ ಇಟ್ಟುಕೊಂಡಿದ್ದು, ನೆರೆ ಬಂದ ಕಡೆ ಎಲ್ಲಿ ಮನೆ ಕಟ್ಟಿಕೊಟ್ಟಿದ್ದಾರೆ? ನಾವು ಜನರ ಕಷ್ಟಗಳಿಗೆ ಧ್ವನಿ ಆಗಬೇಕು, ಇಲ್ಲದಿದ್ದರೆ ನಮ್ಮ ಕರ್ತವ್ಯಕ್ಕೆ ಮೋಸ ಮಾಡಿದಂತೆ. ನೆರೆ ಅನಾಹುತ ಹಾಗೂ ಸರ್ಕಾರದ ಪರಿಹಾರ ವಿಚಾರವಾಗಿ ದೊಡ್ಡ ಚರ್ಚೆ ನಡೆಸುವಂತೆ ಉತ್ತರ ಕರ್ನಾಟಕ ಭಾಗದ ನಮ್ಮ ಶಾಸಕರಿಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೂಚಿಸಿದ್ದೇವೆ ಎಂದು ತಿಳಿಸಿದರು.
ಮಹದಾಯಿ ವಿಚಾರದಲ್ಲಿ ಕೆಲಸ ಮಾಡಲು ಏನು ಸಮಸ್ಯೆ? ನ್ಯಾಯಾಧಿಕರಣದ ತೀರ್ಪು ಬಂದ ನಂತರ ಗೋವಾದಿಂದ ಯಾವ ರಾಜಕಾರಣ? ನಮ್ಮ 28 ಸಂಸದರಿಗಿಂತ ಗೋವಾದ ಒಬ್ಬರು ಸಂಸದರು ಹೆಚ್ಚಾ? ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದವರು. ಅವರು ಏನಾದರೂ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರೇ ದುರ್ಬಲರಾಗಿದ್ದು, ಅವರ ಸಂಪುಟ ಸಚಿವರೇ ನಿರಾಣಿ ಅವರು ಸಿಎಂ ಆಗುತ್ತಾರೆ ಎಂದಿದ್ದಾರೆ. ಅದೇ ವೇದಿಕೆ ಮೇಲಿದ್ದವರು ಅಲ್ಲೇ ನಿಂತು ನಾನು ಬೊಮ್ಮಾಯಿ ಅವರ ಜತೆ ಕೆಲಸ ಮಾಡುತ್ತಿದ್ದೇನೆ, ಈ ರೀತಿ ಸೂಚಿಸುವುದು ಸರಿಯಲ್ಲ ಎಂದು ಹೇಳಬೇಕಿತ್ತು. ಆದರೆ ಆಗ ಮಾತನಾಡದೇ, ಆನಂತರ ಹೇಳಿಕೆ ನೀಡುತ್ತಾರೆ. ಸಿಎಂ ದುರ್ಬಲರಾಗಿದ್ದಾರೋ ಇಲ್ಲವೊ ಮಾಧ್ಯಮಗಳೇ ವಿಶ್ಲೇಷಣೆ ಮಾಡಲಿ’ ಎಂದರು.
40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಜರಿದಿದ್ದರು. ಆಗ ಯಾರಾದರೂ ದೂರು ನೀಡಿದ್ದರಾ? ಆನಂತರವಾದರೂ ವಿಚಾರಣೆ ನಡೆಸಬಹುದಾಗಿತ್ತು. ಶಿವಕುಮಾರ್, ಸಿದ್ದರಾಮಯ್ಯ ಎಷ್ಟು ಪರ್ಸೆಂಟ್ ಪಡೆಯುತ್ತಿದ್ದಾರೆ ಎಂದು ಪ್ರಧಾನಿಗಳು ತನಿಖೆ ಮಾಡಿಸಬಹುದಿತ್ತಲ್ಲವೇ? ಈಗ 40 ಪರ್ಸೆಂಟ್ ಬಗ್ಗೆ ದೂರು ದಾಖಲಾಗಿದ್ದು, ಮಂತ್ರಿಗಳಿಗೆ ಎಷ್ಟು? ಸಂಸದರಿಗೆ ಎಷ್ಟು? ಎಂದೆಲ್ಲಾ ಪಟ್ಟಿ ನೀಡಲಾಗಿದೆ. 1 ಲಕ್ಷ ಗುತ್ತಿಗೆದಾರರು ಇರುವ ನೋಂದಾಯಿತ ಗುತ್ತಿಗೆದಾರರ ಸಂಘವೇ ಈ ದೂರು ನೀಡಿದೆ. ದೇಶದ ಅತ್ಯಂತ ಭ್ರಷ್ಟ ಸರ್ಕಾರ ಈ ರಾಜ್ಯದಲ್ಲಿದೆ’ ಎಂದರು.
ಶಿವಕುಮಾರ್ ಅವರು ತಿಹಾರ್ ಜೈಲಿಗೆ ಹೋಗಿದ್ದು ಯಾಕೆ ಎಂಬ ಈಶ್ವರಪ್ಪ ಅವರ ಹೇಳಿಕೆಗೆ, ‘ತಿಹಾರ್ ಜೈಲಿಗೆ ಇವರು ಕಳುಹಿಸಿದ್ದಕ್ಕೆ ಹೋಗಿದ್ದು. ಬಿಜೆಪಿ ಜತೆ ನಾನು ಬರಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಕಳುಹಿಸಿದಿರಿ, ನಾನು ಹೋದೆ’ ಎಂದರು.
*ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳಿಲ್ಲ, ಹಾಗಾಗಿ ಹಣವಂತರನ್ನು ಕಣಕ್ಕಿಳಿಸಿ, ದುಡ್ಡಿನ ಆಟ ಆಡುತ್ತಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ, ‘ನಾವು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಬಿಜೆಪಿ ಒಬ್ಬ ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಿಲ್ಲ. ಈ ಸರ್ಕಾರ ಜನರ ಸಂಕಷ್ಟ ಪರಿಹರಿಸಲು ಒಂದು ಕಾರ್ಯಕ್ರಮ ನೀಡಲು ಆಗಲಿಲ್ಲ. ಕೆಜಿಎಫ್ ಬಾಬು ಅವರಿಗೆ ಅವರದೇ ಆದ ವೈಯಕ್ತಿಕ ವ್ಯವಹಾರಗಳಿವೆ. ಬ್ಯುಸಿನೆಸ್ ಇದೆ. ಆ ಬಗ್ಗೆ ಮಾತಾಡೋದು ಸರಿಯಲ್ಲ ಎಂದರು.
ಈ ಬಿಜೆಪಿಯವರು ಕಳೆದ ಬಾರಿ ನಮ್ಮ ಪಕ್ಷದಲ್ಲಿದ್ದವರನ್ನು ಕರೆದುಕೊಂಡು ಹೋದರಲ್ಲಾ.., ಅವರೆಲ್ಲಾ ಬಡವರಾ? ಅವರು ಶ್ರೀಮಂತರಲ್ಲವಾ? ಬಿಜೆಪಿಯವರು ಸುಮ್ಮನೆ ಮಾತನಾಡುತ್ತಾರೆ’ ಎಂದರು.
ಚನ್ನರಾಜ ಹಟ್ಟಿಹೊಳಿ ಅವರಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗೆ ನಮನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ