ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬ್ರಿಟಿಷ್ ಕಾಲದಲ್ಲಿ ಬಡತನದಿಂದಾಗಿ ಹಳ್ಳಿಗಳಲ್ಲಿ ಪಾಟಿ, ಪೆನ್ಸಿಲ್ ಕೊಳ್ಳಲಿಕ್ಕೆ ಸಹ ಬಿಡಿಗಾಸಿಲ್ಲದೆ ಮಕ್ಕಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಧ್ಯದಲ್ಲಿ ನಿಲ್ಲಿಸುತ್ತಿದ್ದರು. ಕ್ಲಾರ್ಕ ನಿರ್ಮಾಣ ಮಾಡುವಂಥ ಸಮಾಜದಲ್ಲಿ ಮೊದಲು ಇಂಗ್ಲೀಷ ಶಿಕ್ಷಣ ಪಡೆದು ಸರಕಾರಿ ನೌಕರಿಯಲ್ಲಿ ಸೇರಿದ ವೀರಶೈವ-ಲಿಂಗಾಯತ ಸಮಾಜದ ಡೆಪ್ಯುಟಿ ಚೆನ್ನಬಸಪ್ಪನವರು, ಗಿಲಗಂಚಿ ಗುರುಸಿದ್ದಪ್ಪನವರು ಹಾಗೂ ಅರಟಾಳ ರುದ್ರಗೌಡರು ಪ್ರತಿಷ್ಟಿತ ಹುದ್ದೆಗಳನ್ನು ಅಲಂಕರಿಸಿ ಮುಂದೆ ಸಮಾಜದಲ್ಲಿ ಶಿಕ್ಷಣದ ವಾತಾವರಣವನ್ನುಂಟು ಮಾಡಿದ ಅವರು ಪ್ರಾಥಃಸ್ಮರಣೀಯರೆಂದು ರಾಜ್ಯಸಭಾ ಸದಸ್ಯ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಕೇಂದ್ರ ಘಟಕದ ಉಪಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅವರು ನುಡಿದರು.
ಅವರು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ೨೦೧೯ನೇ ಸಾಲಿನಲ್ಲಿ ಕರ್ನಾಟಕ ಆಡಳಿತ ಸೇವೆ ಮತ್ತು ನ್ಯಾಯಾಧೀಶ ಹುದ್ದೆಗಳಿಗೆ ಆಯ್ಕೆಯಾದ ಲಿಂಗಾಯತ ಪ್ರತಿಭೆಗಳನ್ನು ಸನ್ಮಾನಿಸಿ ಮಾತನಾಡಿದರು.
ನಮ್ಮ ಸಮಾಜವನ್ನು ಸುಧಾರಿಸಲಿಕ್ಕೆ ಕಾರಣ ಭೂತರಾದ ಹೆಸರಾಂತ ನಾಯಕರಲ್ಲಿ ಕೆಲವರು ಲಿಂಗಾಯತ ಒಳಪಂಗಡಕ್ಕೆ ಸೇರಿದ್ದನ್ನು ಗಮನಿಸಬಹುದು. ಲಿಂ.ಫ.ಗು.ಹಳಕಟ್ಟಿಯವರು, ಗಿಲಗಿಂಚಿ ಗುರುಸಿದ್ದಪ್ಪನವರದು, ಅರಟಾಳ ರುದ್ರಗೌಡರು, ಲಿಂ.ಪಂಡಿತಪ್ಪ ಚಿಕ್ಕೋಡಿಯವರು ಇಂಥವರಲ್ಲಿ ಸುಪ್ರಸಿದ್ಧರು. ಇವರಿಂದ ಪ್ರೇರಣೆ ಪಡೆದ ಕೆಎಲ್‌ಇ ಸಂಸ್ಥೆಯ ಏಳು ಜನ ಶಿಕ್ಷಕರು ಮುಂದೆ ಸಂಸ್ಥೆಯನ್ನು ನಿರ್ಮಾಣ ಮಾಡಿ ಈ ಭಾಗದಲ್ಲಿ ಅಕ್ಷರ ಕ್ರಾಂತಿ ಮಾಡಿ ಸಮಾಜವನ್ನು ಸುಶಿಕ್ಷಿತಗೊಳಿಸಿದರು.
ಇಂದು ನಮ್ಮ ಸಮಾಜದಲ್ಲಿ ಸಾಕಷ್ಟು ಸುಶಿಕ್ಷಿತರಾಗಿದ್ದಾರೆ. ಸರ್ಕಾರದ ಹಲವಾರು ಹುದ್ದೆಗಳಲ್ಲಿ ಶ್ರೇಷ್ಠವಾದ ಸ್ಥಾನಮಾನವನ್ನು ಪಡೆಯುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ. ನಮ್ಮ ಹಿಂದಿನ ಹಿರಿಯರು ಶಿಕ್ಷಣದ ಸಲುವಾಗಿ ಇಟ್ಟುಕೊಂಡಿದ್ದ ಸಂಕಲ್ಪಗಳನ್ನು ನಾವು ಮುಂದುವರಿಸಿಕೊಂಡು ಹೋಗಬೇಕಾಗಿದೆ. ನಮ್ಮ ವೀರಶೈವ-ಲಿಂಗಾಯತ ಸಮಾಜ ಬಲಿಷ್ಠಗೊಳ್ಳಬೇಕೆಂದರೆ ಗುಣಾತ್ಮಕವಾದ ಶಿಕ್ಷಣವನ್ನು ಪಡೆದು ಪ್ರತಿಷ್ಠಿತ ಹುದ್ದೆಗಳಲ್ಲಿ ಸೇವೆಸಲ್ಲಿಸುವುದು ಅಗತ್ಯವಾಗಬೇಕಾಗಿದೆ.
ನೀವು ಪ್ರಾಮಾಣಿಕವಾದ ಸೇವೆಯನ್ನು ಸಲ್ಲಿಸಿ ನಮ್ಮ ಸಮಾಜಕ್ಕೆ ಉತ್ತಮವಾದ ಹೆಸರನ್ನು ತಂದುಕೊಡಬೇಕು. ಅಂದಾಗ ಸಾರ್ಥಕತೆ ಮೂಡುವುದು. ಈ ನಿಟ್ಟಿನಲ್ಲಿ ನೀವು ಸಮರ್ಥವಾಗಿ ಕಾರ್ಯನಿರ್ವಹಿಸುವೀರೆಂಬ ಆಶಾಭಾವ ನನ್ನದು. ನಮ್ಮ ಸಮಾಜವನ್ನು ಉನ್ನತವಾಗಿ ಕಟ್ಟುವಲ್ಲಿಯೂ ನೀವು ಕಂಕಣಬದ್ಧವಾಗಿ ದುಡಿಯುತ್ತೀರೆಂಬ ಸಂಕಲ್ಪವು ನನ್ನದು. ಒಳ ಪಂಗಡಗಳನ್ನು ಬಿಟ್ಟು ಸಮಾಜವನ್ನು ಕಟ್ಟು ಕೆಲಸ ನಡೆಯಬೇಕಾಗಿದೆ ಎಂದು ಡಾ.ಕೋರೆಯವರು ಹೇಳಿದರು.
ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ ಇಂದು ಪ್ರತಿಭಾವಂತರು ಅತ್ಯುನ್ನತ ಹುದ್ದೆಯನ್ನು ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ಜಿಲ್ಲೆಯಲ್ಲಿ ಸುಮಾರು ೩೨ ಜನರು ಕೆಎಎಸ್ ಹುದ್ದೆ ಪಡೆದಿರುವುದು ಸಂತೋಷ ತಂದಿದೆ. ಇಂದು ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಶೈಕ್ಷಣ ಕ ಕ್ರಾಂತಿ ಉಂಟಾಗಿದೆ. ಅಂತೆಯೆ ಶೇ.೫೦ ಫಲಿತಾಂಶ ಈ ಭಾಗದಲ್ಲಿ ಆಗಿರುವುದಕ್ಕೆ ನಾವು ಅಭಿಮಾನ ಪಡಬೇಕು. ಅಧಿಕಾರವನ್ನು ಅನುಭವಿಸುದಲ್ಲ. ಜನರ ಸೇವೆ ಮಾಡುವುದಾಗಿದೆ. ಬಸವಾದಿ ಶರಣರು ಹೇಳಿರುವಂತೆ ಸಮಾಜದಲ್ಲಿ ಸಮಾನತೆಯನ್ನುಂಟು ಮಾಡಬೇಕಾಗಿದೆ. ಕಾಯಕ-ದಾಸೋಹ ಸಂಸ್ಕೃತಿಯನ್ನು ಮೂಡಿಸಬೇಕಾಗಿದೆ. ಮಹಿಳೆಯರಿಗೆ ಸ್ವಾತಂತ್ರ್ಯವನ್ನು ನೀಡಿದ್ದ ಶರಣರು ಗೌರವದಿಂದ ಕಂಡರು. ಆ ದೃಷ್ಟಿಕೋನವನ್ನು ನಾವು ಹೊಂದಬೇಕಾಗಿದೆ. ಅಣ್ಣ ಬಸವಣ್ಣನವರ ಆಶಯದಂತೆ ಅಧಿಕಾರವನ್ನು ಸಮಾಜಮುಖಿಯಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ನ್ಯಾಯವಾದಿ ಎಂ.ಬಿ.ಝಿರಲಿ ಪ್ರಾಸ್ತಾವಿಕವಾಗಿ ಮಾತನಾಡಿ ವೀರಶೈವ ಲಿಂಗಾಯತ ಸಮಾಜವು ಸಮನ್ವ ಚಿಂತನೆಗೆ ದಾರಿಮಾಡಿಕೊಟ್ಟಿದೆ. ಸರ್ವಸಮಾನತೆಯ ಸಮಾಜವನ್ನು ಕಟ್ಟಿದವರು ವಿಶ್ವಗುರು ಬಸವಣ್ಣನವರು. ಅವರ ತತ್ತ್ವಾದರ್ಶದಂತೆ ಸಮಾಜವನ್ನು ಕಟ್ಟುದುವುದು ನಮ್ಮೆಲ್ಲರ ಹೊಣೆಗಾರಿಕೆ. ಇಲ್ಲದಿದ್ದರೆ ಬಸವಣ್ಣನವರಿಗೆ ಅಪಮಾನ ಮಾಡಿದಂತೆ ಎಂದು ಹೇಳಿ ಸಭಿಕರನ್ನು ಸ್ವಾಗತಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷರಾದ ರತ್ನಪ್ರಭಾ ಬೆಲ್ಲದ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ಡಾ.ಪ್ರಭಾಕರ ಕೋರೆಯವರು ಮಾರ್ಗದರ್ಶನದಲ್ಲಿ ಮಹಾಸಭೆ ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿದೆ. ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯವನ್ನು ನಿರ್ಮಾಣ ಮಾಡುವುದು ಮಹತ್ವದ ಗುರಿಗಳಲ್ಲಿ ಒಂದಾಗಿದೆ. ಅಂತೆಯೇ ಮಹಿಳೆಯರಿಗಾಗಿ ಹಲವಾರು ವ್ಯಕ್ತಿತ್ವ ವಿಕಸ ಶಿಬಿರ, ವಚನ ಸಂಗೀತ ಶಿಬಿರಗಳನ್ನು ಆಯೋಜಿಸುತ್ತಿದೆ. ನಮ್ಮ ಸಮಾಜದ ಪ್ರತಿಭಾ ಸಂಪನ್ನರನ್ನು ಇಂದು ಗೌರವಿಸಿ ಸತ್ಕರಿಸಿದ್ದೇವೆ. ಮುಂದೆ ಸಮಾಜಕ್ಕೆ ಉತ್ತಮವಾದ ಸೇವೆಯನ್ನು ನೀಡಲೆಂದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆ ಹಾಗೂ ಗಣ್ಯರು ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾದ ಅಮಿತ ತಾರದಾಳೆ, ರವೀಂದ್ರ, ಪಾಟೀಲ, ವಿಶ್ವೇಶ್ವರ ಬಾದರವಾಡೆ, ಅನಿಲ ಬಡಿಗೇರ, ಕಲಗೌಡ ಪಾಟೀಲ, ಮಹೇಶ ಪತ್ರಿ, ಶಿವಕುಮಾರ ಬಿರಾದಾರ, ಗಿರಿಮಲ್ಲ ತಲಕಟ್ಟಿ, ವಿನಯ ದೇವ ಮಠಪತಿಯವರಿಗೆ ಲಿಂಗಧಾರಣ ಮಾಡಿ ಗೌರವಿಸಿ ಸತ್ಕರಿಸಿದರು.
ಪ್ರತಿಭಾ ಕಳ್ಳಿಮಠ ಪ್ರಾರ್ಥಿಸಿದರು. ಆಶಾ ಯಮಕನಮರಡಿ ವಚನ ವಿಶ್ಲೇಷಣೆ ಮಾಡಿದರು. ಡಾ.ಗುರುದೇವಿ ಹುಲೆಪ್ಪನವರಮಠ ಹಾಗೂ ಡಾ.ಮಹೇಶ ಗುರನಗೌಡರ ನಿರೂಪಿಸಿದರು. ನ್ಯಾಯವಾದಿ ವ್ಹಿ.ಕೆ.ಪಾಟೀಲ ವಂದಿಸಿದರು. ಡಾ.ಎಚ್.ಬಿ.ರಾಜಶೇಖರ, ಮಾಜಿ ಮೇಯರ ಡಾ.ಸಿದ್ಧನಗೌಡ ಪಾಟೀಲ, ಮಾಜಿ ಸಚಿವ ಶಶಿಕಾಂತ ನಾಯ್ಕ, ಡಾ.ಎಫ್.ವ್ಹಿ.ಮಾನ್ವಿ, ಗುರುಬಸಪ್ಪಾ ಚೊಣ್ಣದ, ನ್ಯಾಯವಾದಿ ಆರ್. ಪಿ. ಪಾಟೀಲ, ಸೋಮಲಿಂಗ ಮಾವಿನಕಟ್ಟಿ, ಜ್ಯೋತಿ ಭಾವಿಕಟ್ಟಿ, ಪ್ರೊ.ಎ.ಬಿ.ಕೊರಬು ಹಾಗೂ ಮಹಾಸಭೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ