*ಡಿಕೆಶಿ ಅವರದ್ದು ಎಲ್ಲಾ ಬಿಚ್ಚಿಡುತ್ತೇವೆ: ವಾಗ್ದಾಳಿ ನಡೆಸಿದ ಕುಮಾರಸ್ವಾಮಿ*
ಪ್ರಗತಿವಾಹಿನಿ ಸುದ್ದಿ: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ರಾಮನಗರಕ್ಕೆ ಬಂದ ನಂತರ ಎಷ್ಟು ಆಸ್ತಿ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೇಳಿದ್ದಾರೆ. ನಾವು ಕೂಡಾ ಅವರ ಆಸ್ತಿ ಎಷ್ಟಿದೆ ಎನ್ನುವುದನ್ನು ಬಿಡುಗಡೆ ಮಾಡುತ್ತೇವೆ. ಡಿಕೆಶಿ ಅವರದ್ದು ಎಲ್ಲಾ ಬಿಚ್ಚಿಡುತ್ತೇವೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ ವಾಗ್ದಾಳಿ ನಡೆಸಿದರು.
ಬೆಂಗಳೂರಿನಿಂದ ಮೈಸೂರುವರೆಗೆ ಜೆಡಿಎಸ್-ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಇನ್ನೂ 10 ವರ್ಷ ನಮ್ಮದೇ ಅಧಿಕಾರ, ಸರ್ಕಾರ ಎಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದಾರೆ. 10 ವರ್ಷದ ಮಾತಿರಲಿ, 10 ತಿಂಗಳು ಅಧಿಕಾರದಲ್ಲಿ ಇರಲಿ ನೋಡೋಣ ಎಂದು ಸವಾಲು ಹಾಕಿದರು.
ನಿಮ್ಮ ಸರ್ಕಾರವನ್ನು ಯಾರೂ ಅಸ್ಥಿರ ಮಾಡಿಕೊಳ್ಳುತ್ತಿಲ್ಲ. ನೀವೇ ಜನರು ಕೊಟ್ಟ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ. ಹಗರಣಗಳ ಮೇಲೆ ಹಗರಣಗಳನ್ನು ನಡೆಸಿ ಅಕ್ರಮ ಎಸಗಿದ್ದೀರಿ. ಈಗ ನೋಡಿದರೆ ಜೆಡಿಎಸ್ ಬಿಜೆಪಿ ಪಕ್ಷಗಳನ್ನು ಪ್ರಶ್ನೆ ಮಾಡುತ್ತೇವೆ ಎಂದು ಹೊರಟಿದ್ದೀರಿ. ನಮ್ಮ ಪಾದಯಾತ್ರೆ ತಡೆಯಲು ಕಾಂಗ್ರೆಸ್ ನಾಯಕರು ಬಿಡದಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅದಾದ ಮೇಲೆ ಮುಂದೆಯೂ ಪ್ರಶ್ನೆ ಮಾಡುತ್ತಾರಂತೆ. ಮಾಡಲಿ.. ಅವರಿಗೆ ತಕ್ಕ ಉತ್ತರ ಕೊಡುತ್ತೇವೆ. ಅವರು ಕೇಳಿರುವ ಪ್ರಶ್ನೆಗಳಿಗೆ ಬಿಡದಿ, ರಾಮನಗರದಲ್ಲಿ ಉತ್ತರ ಕೊಡುತ್ತೇನೆ ಎಂದು ಸವಾಲು ಹಾಕಿದರು.
ಅವರೇ ಹೇಳಿಕೊಂಡಿದ್ದಾರೆ.. ಸಿಎಂ ಹಾಗೂ ಡಿಸಿಎಂ ಅವರ ಆಸ್ತಿ ಅಕ್ರಮಗಳ ದಾಖಲೆ ಪತ್ರಗಳನ್ನು ನಾನೇ ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ನಮ್ಮನ್ನು ಬಂಧಿಸಲು ದೆಹಲಿಯಿಂದ ಬರುತ್ತಾರೆ. ಬಂಧನಕ್ಕೂ ನಾವು ಸಿದ್ದವಿದ್ದೇವೆ ಅಂತ ಹೇಳಿಕೊಂಡಿದ್ದಾರೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ