ರಮೇಶ ದಿಟ್ಟ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ನಾವು ನೋಡುತ್ತಿರಲಿಲ್ಲ
ಪ್ರಗತಿವಾಹಿನಿ ಸುದ್ದಿ, ಗೋಕಾಕ – ಕಾಂಗ್ರೇಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹಳೆಯ ವೈಷಮ್ಯ ಮರೆತು ಯಾವುದೇ ಬೇಧ-ಭಾವ ಮಾಡಿಕೊಳ್ಳದೆ ಒಗ್ಗಟ್ಟಾಗಿ ಈ ಉಪಚುನಾವಣೆಯಲ್ಲಿ ದುಡಿಯಬೇಕು. ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಮುಂದುವರೆಯಲು ರಮೇಶ ಜಾರಕಿಹೊಳಿ ಅವರ ಪರವಾಗಿ ಪ್ರತಿ ಮನೆ-ಮನೆಗೆ ತೆರಳಿ ಮತಯಾಚಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಗೋಕಾಕ ಮತಕ್ಷೇತ್ರದ ಕಾಂಗ್ರೇಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಿಲನ ಕಾರ್ಯಕ್ರಮವನ್ನು ಉದ್ಧೇಶಿಸಿ ಅವರು ಮಾತನಾಡಿದರು.
೫ ರಂದು ನಡೆಯಲಿರುವ ಈ ಚುನಾವಣೆಯನ್ನು ಕಾರ್ಯಕರ್ತರು ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳಬೇಕು. ಹಳೆಯ ವ್ಯತ್ಯಾಸಗಳನ್ನು ಮರೆಯಬೇಕು. ಧೈರ್ಯದಿಂದ ಚುನಾವಣೆಯನ್ನು ಎದುರಿಸಬೇಕು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕೈ ಬಲಪಡಿಸಲು ಬಿಜೆಪಿಗೆ ಹೆಚ್ಚಿನ ಮತಗಳನ್ನು ಹಾಕಿಸಲು ಶ್ರಮಿಸುವಂತೆ ತಿಳಿಸಿದರು.
ರಮೇಶ ಜಾರಕಿಹೊಳಿ ಅವರು ಗಟ್ಟಿಯಾಗಿ ನಿಂತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣೀಕರ್ತರಾಗಿದ್ದಾರೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಯೇ ತೀರುತ್ತೇನೆಂದು ಹಠ ಹಿಡಿದು ಕಾಂಗ್ರೇಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಒಂದು ವೇಳೆ ರಮೇಶ ಅವರು ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ನಾವು ನೋಡುತ್ತಿರಲಿಲ್ಲ ಎಂದು ಹೇಳಿದರು.
ರಮೇಶ ಜಾರಕಿಹೊಳಿ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಲೇಬೇಕು. ಇದರಲ್ಲಿ ನಮ್ಮ ಸ್ವಾರ್ಥವೇನೂ ಇಲ್ಲ. ಕ್ಷೇತ್ರದ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಇವರ ಗೆಲುವು ಅವಶ್ಯಕವಾಗಿದೆ. ಶಾಸಕ ಸ್ಥಾನದ ಜೊತೆಗೆ ಮಹತ್ವದ ಸಚಿವ ಸ್ಥಾನವೂ ದೊರೆಯಲಿದೆ. ರಮೇಶ ಜಾರಕಿಹೊಳಿ ಅವರು ಆಯ್ಕೆಯಾದರೆ ಕಾರ್ಯಕರ್ತರನ್ನು ಎಂದಿಗೂ ಕೈಬಿಡುವುದಿಲ್ಲ. ಕಾರ್ಯಕರ್ತರ ಕೆಲಸಗಳು ಆಗದಿದ್ದರೆ ನಮ್ಮ ಎನ್‌ಎಸ್‌ಎಫ್ ಕಛೇರಿ ಸದಾ ತೆರೆದಿರುತ್ತದೆ. ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಡುವ ಜವಾಬ್ದಾರಿ ನಾನೇ ಹೊತ್ತುಕೊಳ್ಳುತ್ತೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು ಮತ್ತು ರಮೇಶ ಜಾರಕಿಹೊಳಿ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ನ.೨೨ ರಿಂದ ಗೋಕಾಕ ಮತಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಯಲಿದೆ. ಗೋಕಾಕ ನಗರದ ಪ್ರಮುಖರ ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡುತ್ತೇವೆ. ನನ್ನೊಂದಿಗೆ ಕೇಂದ್ರ ಸಚಿವ ಸುರೇಶ ಅಂಗಡಿ ಹಾಗೂ ಇನ್ನುಳಿದ ಬಿಜೆಪಿ ಮುಖಂಡರುಗಳು ಇರಲಿದ್ದಾರೆ. ಯಾರದೇ ಪ್ರಭಾವಕ್ಕೆ ಒಳಗಾಗದೇ ಗೋಕಾಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಮಲ ಗುರ್ತಿಗೆ ಮತ ನೀಡಿ ಪ್ರಚಂಡ ಬಹುಮತದಿಂದ ರಮೇಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡುವಂತೆ ಕೋರಿದರು.
ರಮೇಶ ಜಾರಕಿಹೊಳಿ ಡಿಸಿಎಂ ಆಗುವ ಯೋಗ : ನಡಹಳ್ಳಿ
ಗೋಕಾಕ ಉಪಚುನಾವಣೆಯ ಉಸ್ತುವಾರಿ ಹಾಗೂ ಮುದ್ದೇಬಿಹಾಳ ಶಾಸಕ ಬಿ.ಎಸ್.ಪಾಟೀಲ(ನಡಹಳ್ಳಿ) ಮಾತನಾಡಿ, ೧೭ ಜನ ಶಾಸಕರನ್ನು ಕರೆದುಕೊಂಡು ಭ್ರಷ್ಠ ಮೈತ್ರಿ ಸರ್ಕಾರವನ್ನು ಕೆಡವಿದ ಸೂಪರ್ ಹೀರೋ ರಮೇಶ ಜಾರಕಿಹೊಳಿ. ಬಿ.ಎಸ್. ಯಡಿಯೂರಪ್ಪನವರು ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಲಿಕ್ಕೆ ಜಾರಕಿಹೊಳಿ ಸಹೋದರರು ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಈ ಹಿಂದೆ ೨೦೦೮ ರಲ್ಲಿ ಬಾಲಚಂದ್ರ ಜಾರಕಿಹೊಳಿ ಹಾಗೂ ೨೦೧೯ ರಲ್ಲಿ ರಮೇಶ ಜಾರಕಿಹೊಳಿ ಅವರು ಸರ್ಕಾರದ ರಚನೆಯಲ್ಲಿ ದೊಡ್ಡ ಪಾತ್ರವಿದೆ. ಇದನ್ನಾರೂ ಮರೆಯಬಾರದು ಎಂದು ಹೇಳಿದರು.
ಗೋಕಾಕಕ್ಕೆ ಅಷ್ಟೇ ಈ ಚುನಾವಣೆಯಲ್ಲ. ಇಡೀ ರಾಜ್ಯದ ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಎಲ್ಲರ ಕಣ್ಣು ನಮ್ಮ ಗೋಕಾಕ ಮೇಲಿದೆ. ರಾಜಕೀಯದಲ್ಲಿ ಹಲವಾರು ದ್ರುವಿಕರಣಗಳು ನಡೆದಿದ್ದು, ಅದರಲ್ಲಿ ಜಾರಕಿಹೊಳಿ ಸಹೋದರರು ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ಬಿ.ಎಸ್. ಯಡಿಯೂರಪ್ಪ ಮತ್ತು ಜಾರಕಿಹೊಳಿ ಸಹೋದರರ ಮಧ್ಯ ಅವಿನಾಭಾವ ಸಂಬಂಧವಿದೆ. ಈ ಸಹೋದರರು ಮನಸ್ಸು ಮಾಡಿದ್ದರಿಂದಲೇ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅದರಲ್ಲೂ ಕೆಲವರಂತು ರಮೇಶ ಜಾರಕಿಹೊಳಿ ಅವರನ್ನು ಅವಮಾನಿಸಿದ್ದಾರೆ. ಅವರಿಗೆಲ್ಲ ಉತ್ತರ ಕೊಡುವ ಕಾಲ ಕೂಡಿ ಬಂದಿದೆ. ರಮೇಶ ಜಾರಕಿಹೊಳಿ ಅವರನ್ನು ಆರಿಸಿ ಕಳುಹಿಸಿದರೆ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಘೂಳಪ್ಪ ಹೊಸಮನಿ, ಗುರುಪಾದ ಕಳ್ಳಿ, ಹಿರಿಯ ಬಿಜೆಪಿ ಮುಖಂಡ ಎಂ.ಎ. ಅಂಗಡಿ, ನ್ಯಾಯವಾದಿ ಲಕ್ಷ್ಮಣ ತಪಸಿ, ಗೋಕಾಕ ನಗರ ಘಟಕದ ಅಧ್ಯಕ್ಷ ಎಸ್.ವ್ಹಿ. ದೇಮಶೆಟ್ಟಿ, ಮಾಜಿ ನಗರಾಧ್ಯಕ್ಷ ಸಿದ್ಧಲಿಂಗ ದಳವಾಯಿ, ಗ್ರಾಮೀಣ ಅಧ್ಯಕ್ಷ ವಿರುಪಾಕ್ಷ ಯಲಿಗಾರ, ವಿನೋದ ಕರನಿಂಗ, ಸುರೇಶ ಕಾಡದವರ, ಡಿ.ಎಂ. ದಳವಾಯಿ, ಸುಭಾಸ ಹುಕ್ಕೇರಿ, ಎಸ್.ಎ. ಕೋತವಾಲ್, ಶಿವಾನಂದ ಡೋಣಿ, ಶ್ಯಾಮಾನಂದ ಪೂಜಾರಿ, ಶಕೀಲ ಧಾರವಾಡಕರ, ಪ್ರೇಮಾ ಭಂಡಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ ಸದಸ್ಯ ಗೋವಿಂದ ಕೊಪ್ಪದ ಸ್ವಾಗತಿಸಿದರು. ಅರಭಾವಿ ಮಂಡಲ ಅಧ್ಯಕ್ಷ ಸುಭಾಸ ಪಾಟೀಲ ವಂದಿಸಿದರು. ಗೋಕಾಕ ಮತಕ್ಷೇತ್ರದ ನೂರಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಮೇಶ್, ಬಾಲಚಂದ್ರ ಜಾರಕಿಹೊಳಿ ಆ ಮಾತನ್ನು ಹೇಳುತ್ತಿರುವುದೇಕೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ