
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೂ ಬಿಜೆಪಿ ಅಭ್ಯರ್ಥಿ ಪ್ರಕಟಿಸಿದೆ.
ಮಾಜಿ ಡಿಸಿಎಂ, ಹಾಲಿ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರಿಗೆ ಮತ್ತೊಮ್ಮೆ ಬಿಜೆಪಿ ಪರಿಷತ್ ಟಿಕೆಟ್ ನೀಡಿದೆ. ಪರಿಷತ್ ಅಭ್ಯರ್ಥಿಗಳಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಹಿಳಾ ಕೋಟಾದಡಿ ಹೇಮಲತಾ ನಾಯಕ್, ದಲಿತ ಕೋಟಾದಲ್ಲಿ ಎಸ್ ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹಾಗೂ ಒಬಿಸಿ ಕೋಟಾದಡಿ ಕೇಶವ ಪ್ರಸಾದ್ ಅವರಿಗೆ ಪರಿಷತ್ ಟಿಕೆಟ್ ನೀಡಲಾಗಿದೆ. ಪರಿಷತ್ ಗೆ ಹೊಸ ಮುಖಗಳಿಗೂ ಆದ್ಯತೆ ನೀಡಲಾಗಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಪಶ್ಚಿಮ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.
ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಬಸವರಾಜ್ ಹೊರಟ್ಟಿ, ಪರಿಷತ್ ಸಭಾಪತಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಜೂನ್ 13ರಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದೆ.
ಬಿ.ವೈ.ವಿಜಯೇಂದ್ರಗಿಲ್ಲ ಪರಿಷತ್ ಟಿಕೆಟ್