ಯಾವ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯ?; ಬೆಳಗಾವಿಗೆ 3 ಪ್ಯಾರಾಮಿಲ್ಟ್ರಿ ಪಡೆ; 27 ಜನರ ಗಡಿ ಪಾರು
ಕರ್ನಾಟಕ ವಿಧಾನಸಭಾ ಚುನಾವಣೆ-2023 -ನೀತಿ ಸಂಹಿತೆ ಜಾರಿ, ಜಿಲ್ಲೆಯ ಎಲ್ಲೆಡೆ ಕಟ್ಟೆಚ್ಚರ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಚುನಾವಣಾ ದಿನಾಂಕ ನಿಗದಿಯಾಗಿದ್ದು, ಮೆ10 ಮತದಾನ ಹಾಗೂ ಮೆ 13 ರಂದು ಮತ ಎಣಿಕೆ ನಡೆಯಲಿವೆ. ಹಾಗಾಗಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಮಾ.29) ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಮತದಾನ ದಿನಾಂಕ ಘೋಷಣೆಯಾಗಿರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಮತಕ್ಷೇತ್ರಗಳಿದ್ದು, ಅದರಲ್ಲಿ 2 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಿರುತ್ತವೆ ಹಾಗೂ ಒಂದು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 4434 ಮತಗಟ್ಟೆಗಳಿದ್ದು, 19,36,887 ಪುರುಷ ಮತದಾರರು ಹಾಗೂ 18,96,150 ಮಹಿಳಾ ಮತದಾರರು ಸೇರಿದಂತೆ ಒಟ್ಟು 38,33,037 ಮತದಾರರಿದ್ದಾರೆ.
ಪ್ರತಿ ಚೆಕ್ ಪೋಸ್ಟ್ ಗಳಲ್ಲಿ, 3 SST ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು. ಅದರಂತೆ ಪ್ರತಿ ಮತಕ್ಷೇತ್ರಗಳಿಗೆ ಫ್ಲಾಯಿಂಗ್ ಸ್ಕ್ವಾಡ್ ಆ್ಯಂಡ್ ವಿಡಿಯೋ ಸರ್ವೇಲೇನ್ಸ್ ಟೀಮ್ ಕೂಡ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಅಕ್ರಮ ಸಾಗಾಣಿಕೆ ನಗದು ಜಪ್ತಿ:
ಮಾರ್ಚ್ 15 ರಿಂದ ಮಾ. 28 ರ ವರೆಗೆ ಎಲ್ಲ ಚೆಕ್ ಪೋಸ್ಟಗಳಲ್ಲಿ ನಗದು 1,07,80,120 ಹಾಗೂ 17341668.74 ರೂಪಾಯಿ ಮೌಲ್ಯದ ಮದ್ಯ 22826.327 ಲೀಟರ್, 247200 ಮೌಲ್ಯದ 33.91 ಕೆ.ಜಿ ಮಾದಕ ವಸ್ತು, 657300 ಮೌಲ್ಯದ 9.39 ಕೆ.ಜಿ ಬೆಳ್ಳಿ, ಹಾಗೂ 6405900 ಮೌಲ್ಯದ 6243 ಇತರೆ ಸಾಮಗ್ರಿಗಳು ಸೇರಿದಂತೆ ಒಟ್ಟು 3,54,32,189 ರೂಪಾಯಿ ಜಪ್ತಿ ಮಾಡಲಾಗಿದೆ.
ವಿಕಲಚೇತನರು ಹಾಗೂ 80 ವರ್ಷ ಮೇಲ್ಪಟ್ಟಿರುವ ಮತದಾರರು ತಮ್ಮ ಮನೆಯಿಂದಲೇ ಮತ ಚಲಾಯಿಸಲು ಅವಕಾಶವಿರುತ್ತದೆ.
ಜಿಲ್ಲೆಯಲ್ಲಿ ಒಟ್ಟಾರೆ 61 ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 24 ಅಂತರರಾಜ್ಯ ಚೆಕ್ ಪೋಸ್ಟ್ ಮತ್ತು 37 ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಆರಂಭಿಸಲಾಗಿದೆ ತಿಳಿಸಿದರು.
ಮದುವೆ, ಸಾಮಾಜಿಕ, ಧಾರ್ಮಿಕ ಸಮಾರಂಭಗಳಿಗೆ ಅನುಮತಿ ಅಗತ್ಯವಿಲ್ಲ:
ಮದುವೆ, ಸಾಮಾಜಿ ಹಾಗೂ ಧಾರ್ಮಿಕ ಸಮಾರಂಭಗಳಿಗೆ ಪರವಾನಿಗೆ ಅಗತ್ಯವಿರುವುದಿಲ್ಲ. ಆದರೆ ಅಂತಹ ಸಮಾರಂಭಗಳಲ್ಲಿ ಚುನಾವಣಾ ಪ್ರಚಾರ ಅಥವಾ ಪಕ್ಷದ ಚಿಹ್ನೆ, ಅಭ್ಯರ್ಥಿಗಳ ಭಾವಚಿತ್ರ ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ. ಈ ರೀತಿ ಕಂಡುಬಂದರೆ ಆಯೋಜಕರು ಮತ್ತು ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.
ಪರವಾನಿಗೆ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಜಮಾ ಮಾಡಬೇಕು. ಸದ್ಯದಲ್ಲಿಯೇ ಮೂರು ಪ್ಯಾರಾ ಮಿಲಿಟರಿ ಪಡೆ ಆಗಮಿಸಲಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಭದ್ರತಾ ತಂಡಗಳು ಆಗಮಿಸಲಿವೆ ಎಂದು ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ 27 ಜನರನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.
ಇದೇ ರೀತಿ ಮುಂಬರುವ ದಿನಗಳಲ್ಲಿ ಕೂಡ ಸಮಾಜಘಾತುಕ ವ್ಯಕ್ತಿಗಳನ್ನು ಗುರುತಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಸೂಕ್ತ ತರಬೇತಿ ನೀಡಲಾಗಿರುತ್ತದೆ ಎಂದು ಹೇಳಿದರು.
ಮತದಾರರಿಗೆ ಆಮಿಷವೊಡ್ಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಬಾರ್ ಆ್ಯಂಡ್ ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ವಸತಿಗೃಹಗಳ ಮೇಲೆ ನಿಗಾ ವಹಿಸಲಾಗಿರುತ್ತದೆ.
ಪ್ರತಿ ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಜಿಲ್ಲಾ ಕೇಂದ್ರದಲ್ಲಿ ಹಿರಿಯ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ ಎಂದು ಡಾ.ಸಂಜೀವ ಪಾಟೀಲ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ