ಪ್ರಗತಿವಾಹಿನಿ ಸುದ್ದಿ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಹಿಂಸಾಚಾರದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಸರ್ಕಾರ ಹೋಗಿ ಗಲಾಟೆ ಮಾಡಿ ಎಂದು ಹೇಳೋದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾದ್ಯಮಗಳ ಜೊತೆ ಮಾತನಾಡಿದ ಅವರು, ನಾಗಮಂಗಲದಲ್ಲಿ ನಡೆದ ಘಟನೆಗೆ ಕಾರಣ ಏನೆಂದು ಕೇಳಿದ್ದೇನೆ, ಸದ್ಯ ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಿದ್ದೇವೆ. ಮುಂದೆ ಈ ರೀತಿ ಆಗದಂತೆ ಕಠಿಣ ಕ್ರಮವನ್ನು ವಹಿಸಿದ್ದೇವೆ. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಬಿಡೋದಿಲ್ಲ ಎಂದರು.
ಯಾವುದೇ ಹಬ್ಬದಲ್ಲಿ ಆದರೂ ಅನಾವಶ್ಯಕ ಗೊಂದಲ ಸೃಷ್ಟಿ ಮಾಡೋರನ್ನ ಬಿಡೋದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಅದೇನು ಶಿಕ್ಷೆಯಾಗಬೇಕೋ ಅದು ಆಗುತ್ತೆ. ಅದನ್ನು ಯಾರಿಂದಲೂ ತಪ್ಪಿಸೋದಕ್ಕೆ ಆಗಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ಇನ್ನು ಗಲಭೆ ಎಬ್ಬಿಸೋದಕ್ಕೆ ಕಾಂಗ್ರೆಸ್ ನ ಕೈವಾಡವಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಸರ್ಕಾರ ಹೋಗಿ ಗಲಾಟೆ ಮಾಡಿ ಅಂತ ಹೇಳೋದಕ್ಕೆ ಆಗುತ್ತಾ..? ಬಿಜೆಪಿಯವರಿಗೆ ನಮ್ಮ ಭಾಷೆ ಅರ್ಥ ಆಗಲ್ಲ ಅನ್ಸುತ್ತೆ.. ನಾವೆಲ್ಲ ಹಳ್ಳಿಯಿಂದ ಬಂದವರು. ಪುಸ್ತಕದ ಭಾಷೆ ನಮಗೆ ಮಾತಾಡೋದಕ್ಕೆ ಬರಲ್ಲ ಎಂದು ಕಿಡಿಕಾರಿದರು.
ಆಕಸ್ಮಿಕ ಗೃಹ ಸಚಿವ ಅನ್ನೋ ವಿಚಾರದ ಬಗ್ಗೆ ಮಾತನಾಡಿದ್ದು, ಹೌದು… ನಾನು ಆಕಸ್ಮಿಕನೇ, ನನಗೆ ಬೇರೆಯವರ ತರ ಶಬ್ದವನ್ನು ಟ್ವಿಸ್ಟ್ ಮಾಡಿ ಮಾತನಾಡುವುದಕ್ಕೆ ಬರುವುದಿಲ್ಲ. ನಿಮಗೆ ಬೇಕಾದಂಗೆ ನಾನು ಹೇಳಿದ ವ್ಯಾಖ್ಯಾನವನ್ನ ತಿರುಚಿವುದಕ್ಕೆ ಆಗುವುದಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.
ನಾನು ರಾಜ್ಯದ ಗೃಹ ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ನನಗೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ನಮಗೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ. ಜವಾಬ್ದಾರಿಯಿಲ್ಲದೆ ಇಷ್ಟು ದೊಡ್ಡ ಸ್ಥಾನದಲ್ಲಿ ಕುಳಿತಿಲ್ಲ ಎಂದರು.
ಈಗಾಗಲೇ ಘಟನೆಯ ಸಂಬಂಧ 52 ಜನರನ್ನು ಬಂಧಿಸಲಾಗಿದೆ. ಅದರಲ್ಲಿ ಯಾರೂ ಮೇನ್ ಇನ್ವಾಲ್ ಆಗಿದ್ದಾರೆ ಕಾನೂನಿನ ಪ್ರಕಾರ ಅವರ ಮೇಲೆ ಕ್ರಮ ಆಗಲಿದೆ. ಅವರು ಏನು ಬೇಕಾದರೂ ಹೇಳಿಕೆಗಳನ್ನು ಕೊಡಲಿ, ನಮಗೂ ಮಾತನಾಡಲು ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾನು ನಿನ್ನೆ ವಿಪಕ್ಷದವರ ಬಳಿ ಇದನ್ನು ರಾಜಕೀಯಕ್ಕೆ ಬಳಸಬೇಡಿ ಎಂದು ಮನವಿ ಮಾಡಿದ್ದೆ. ಆದರೆ ಇದರಲ್ಲಿ ರಾಜಕೀಯ ಮಾಡುತ್ತಾರೆ ಅಂದ್ರೆ ಮಾಡಲಿ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಅಂತ ನಮಗೆ ಚೆನ್ನಾಗಿ ಗೊತ್ತು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ