

ಜಯಶ್ರೀ ಜೆ.ಅಬ್ಬಿಗೇರಿ
ಮೊನ್ನೆ ಮೊನ್ನೆ ತಾನೆ ನಾವು ನೀವೆಲ್ಲ ಮುಂಜಾನೆದ್ದ ತಕ್ಷಣ ರೇಡಿಯೋ ಕಿವಿ ಹಿಂಡುತ್ತಿದ್ದೆವು. ನಂತರ ಅದಕ್ಕೆ ಎರಡೂ ಕಿವಿ ಕೊಟ್ಟು ಕೆಲಸಕ್ಕೆ ಶುರು ಹಚ್ಚಿಕೊಳ್ಳುತ್ತಿದ್ದೆವು. ವಂದೇ ಮಾತರಂ ಗೀತೆಗೆ ತಲೆದೂಗುತ್ತಿದ್ದೆವು. ದಿನವೆಲ್ಲ ಕೆಲಸದ ನಡುವೆಯೂ ರೇಡಿಯೋ ತನ್ನ ಪಾಡಿಗೆ ತಾನು ಮಾತನಾಡುತ್ತಿತ್ತು ಹಾಡುತ್ತಿತ್ತು ಮನರಂಜನೆ ನೀಡುತ್ತಿತ್ತು. ಅದನ್ನೆಲ್ಲ ಕೇಳಿದ ಮನಸ್ಸು ತಂಗಾಳಿಯಲ್ಲಿ ತೇಲುತ್ತಿತ್ತು. ಮನೆಯ ಹೆಂಗಳೆಯರೆಲ್ಲ ಸಂಸಾರದ ಗೋಜಲುಗಳನ್ನೆಲ್ಲ ಕೊಡವಿ ಅಡುಗೆ ಮನೆಯಲ್ಲಿ ಇದಕ್ಕೆ ಕಿವಿ ಮೀಸಲಿಡುತ್ತಿದ್ದರು. ನಸುಕಿನಿಂದ ಒಲೆಯ ಮುಂದೆ ಕುಳಿತ ಅವರ ದಣಿವೆಲ್ಲ ಮಾಯವಾಗುತ್ತಿತ್ತು.
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ರೇಡಿಯೋ ಬದುಕಿನ ಭಾಗವೇ ಆಗಿ ಹೋಗಿತ್ತು. ವಯಸ್ಸಾದವರಿಗಂತೂ ಇದು ಒಂದು ತರಹದ ಸಂಗಾತಿಯಾಗಿತ್ತು. ಪುಟ್ಟ ಪುಟಾಣಿ ಮಕ್ಕಳಿಗೆ ಗಿಳಿವಿಂಡು ಕಾರ್ಯಕ್ರಮ ಬರುತ್ತಿತ್ತು. ಅದರಲ್ಲಿ ಮಕ್ಕಳು ಭಾಗವಹಿಸುತ್ತಿದ್ದರು. ಅದು ಮಕ್ಕಳಿಂದ ಮಕ್ಕಳಿಗಾಗಿ ಇರುವ ಕಾರ್ಯಕ್ರಮವಾದರೂ ಹಿರಿಯರಿಗೂ ಮುದನೀಡುತ್ತಿತ್ತು. ಹಿರಿಯರಿಗಾಗಿ ಬಾಳಬುತ್ತಿ ಕಾರ್ಯಕ್ರಮ ಅದರಲ್ಲಿ ಬಾಳಿನ ಸವಿನೆನಪುಗಳ ಮೆಲುಕು. ಹೆಣ್ಣುಮಕ್ಕಳಿಗೆ ವಿಶೇಷವಾಗಿ ಮಹಿಳಾ ರಂಗ ಕಾರ್ಯಕ್ರಮ ಯುವಕರಿಗಾಗಿ ಯುವರಂಗ, ನಾಟಕ ವಾದ್ಯ ಸಂಗೀತ,ಸಣ್ಣಾಟ, ದೊಡ್ಡಾಟ, ಜಾನಪದ, ಧಾರಾವಾಹಿಗಳು ಹೀಗೆ ಎಲ್ಲ ವಯೋಮಾನದವರ ಮನ ತಣಿಸುವ ಜ್ಞಾನ ವೃದ್ಧಿಸುವ ಕಾರ್ಯಕ್ರಮಗಳ ಕೇಳಿ ಮನಾನಂದ ಹೆಚ್ಚಿಸಿಕೊಳ್ಳುವ ಸುಯೋಗ ನಮ್ಮದಾಗಿತ್ತು.
ಇದೀಗ ಈ ಎಲ್ಲ ಕಾರ್ಯಕ್ರಮಗಳ ಜತೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವ ಸವಿ ಸವಿಯಾದ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಕಾಲದ ಜೊತೆ ಕಾಲು ಹಾಕುವ ಮನೋಭಾವದ ಬಾನುಲಿಯ ಎಲ್ಲ ಸ್ಟೇಶನ್‌ಗಳು ಮೊಬೈಲ್‌ನಲ್ಲಿ ಲಭ್ಯ. ಆದರೆ ಅದರ ಸದುಪಯೋಗ ಪಡೆದುಕೊಳ್ಳುವ ಒಳ್ಳೆಯ ಕೇಳುಗರಾಗುವ ಒಳ್ಳೆಯ ಮನಸ್ಸು ಮಾಡಬೇಕಿದೆ. ಹಾಗಂತ ಬಾನುಲಿ ಕೇಳುಗರ ಸಂಖ್ಯೆ ಕಡಿಮೆ ಆಗಿದೆ ಅಂತೇನೂ ಇಲ್ಲ. ಮೊದಲಿನಿಂದಲೂ ಅದರ ಮೋಹಕತೆಗೆ ಒಳಗಾದವರು ಇನ್ನೂ ನಿತ್ಯದ ಬಾನುಲಿ ಹಬ್ಬದ ಸಂಭ್ರಮವನ್ನು ಸವಿಯುತ್ತಿದ್ದಾರೆ. ಈ ಸವಿಯನ್ನು ನಾವಷ್ಟೇ ಅನುಭವಿಸದೇ ಮಕ್ಕಳ ಕಿವಿಗೂ ಹಚ್ಚುವ ಜವಾಬ್ದಾರಿ ನಮ್ಮದಾಗಿದೆ. ಮಕ್ಕಳು ಉತ್ತಮ ಶೋತೃಗಳಾದರೆ ಅವರ ಬದುಕಿನ ಅನೇಕ ಸಮಸ್ಯೆಗಳು ಮರೆಯಾಗುವವು.
ಕೆಲ ವರ್ಷಗಳ ನಂತರ ದೂರದರ್ಶನದ ಆಗಮನವಾಯಿತು. ಕಪ್ಪುಬಿಳುಪಿನಲ್ಲಿ ಕಂಡ ದೃಶ್ಯಗಳನ್ನು ಬಾಯಿಬಿಟ್ಟುಕೊಂಡು ಕಣ್ಣಿಗೊತ್ತಿಕೊಂಡು ನೋಡುವ ದಿನಗಳು ಶುರುವಿಟ್ಟುಕೊಂಡವು. ಬಣ್ಣದ ಟಿವಿ ಕಾಲಿಟ್ಟಾಗಲಂತೂ ಬಣ್ಣಬಣ್ಣದ ಚಿತ್ರ ಕಂಡು ಫುಲ್ ಫಿದಾ ಆದೆವು. ಭಾವಗೀತೆ ಮತ್ತು ಭಕ್ತಿ ಗೀತೆಗಳ ಬದಲಿಗೆ ಚಲನಚಿತ್ರಗಳ ಹಾಡುಗಳನ್ನು ಎದೆ ತುಂಬಿ ಹಾಡತೊಡಗಿದೆವು. ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಚಲನಚಿತ್ರವನ್ನು ಬಿಟ್ಟ ಕಣ್ಣನ್ನು ಬಿಟ್ಟು ತೆರೆದ ಬಾಯಿಯನ್ನು ಮುಚ್ಚಲು ಮರೆತು ನೋಡತೊಡಗಿದ್ದೆವು. ಹಾಗೆಲ್ಲ ಮಂದಿ ಮನೆಯಲ್ಲಿ ಕುಳಿತು ಟಿವಿ ವೀಕ್ಷಿಸುವವರು ತಮ್ಮ ಮನೆಯಲ್ಲೂ ಅಪ್ಪ ಟಿವಿ ತಂದರೆ ಎಷ್ಟು ಚೆನ್ನ ಅಂತ ಮನದಲ್ಲೇ ಮಂಡಿಗೆ ಮೆಲ್ಲುತ್ತಿದ್ದರು. ದಿನಕಳೆದಂತೆ ಬಡವ ಬಲ್ಲಿದನೆಂಬ ಭೇದವಿಲ್ಲದೇ ಅವರವರ ಆರ್ಥಿಕ ಶಕ್ತಿಗೆ ಅನುಸಾರವಾಗಿ ಬಣ್ಣ ಗಾತ್ರಗಳಲ್ಲಿ ಭಿನ್ನವಾಗಿದ್ದರೂ ಟಿವಿ ಎಲ್ಲರ ಮನೆ ತುಂಬಿದವು. ಮಾಳಿಗೆಗಳಲ್ಲಿ ಅಂಟೇನಾಗಳು ಜಾಗ ಪಡೆದವು.
ಆದರೀಗ ಕಾಲ ಪೂರ್ಣ ಬದಲಾಗಿದೆ.ಬದಲಾದ ಕಾಲದಲ್ಲಿ ತಂತ್ರಜ್ಞಾನದ ಸೌಲಭ್ಯಗಳು ಹೆಚ್ಚಿವೆ. ಜನರನ್ನು ತೀವ್ರಗತಿಯಲ್ಲಿ ತಲುಪುವ ನಿಟ್ಟಿನಲ್ಲಿ ರೇಡಿಯೋ ಟಿವಿ ದಿನಪತ್ರಿಕೆ ಎಲ್ಲವೂ. ಮೊಬೈಲ್ ಎಂಬ ಮಾಯಗಾತಿಗೆ ವರ್ಗಾಯಿಸಲ್ಪಟ್ಟಿದೆ. ಎಲ್ಲವೂ ಅವಳಲ್ಲಿದೆ. ಅಂತರ್ಜಾಲದ ಮಾಯೆಯಿಂದ ಅವಳ ಶಕ್ತಿ ಸೌಂದರ್ಯ ಹೆಚ್ಚಿಸಿಕೊಂಡಿದ್ದಾಳೆ. ಎಲ್ಲೆಲ್ಲೂ ಅವಳದ್ದೇ ಕಲರವ. ಮನೆ, ಮಠ, ರಸ್ತೆ, ಬಸ್ ನಿಲ್ದಾಣ, ರೇಲ್ವೆಗಳಲ್ಲಿ, ಸಿಗ್ನಲ್‌ಗಳಲ್ಲಿ ಮತ್ತು ಹೈವೇ ಬಳಿಯಲ್ಲಿ ಕಾಣಸಿಗುವ ಕೈಗಳಲ್ಲಿ ಇವಳಿಗೆ ಜಾಗವಿದೆ. ಮನೆಯ ಮಂದಿಯೆಲ್ಲ (ಮಕ್ಕಳು ಹಿರಿಯರಾದಿಯಾಗಿ) ಮಾತು ಕತೆ ನಗು ಮರೆತು ಮೂಲೆಯಲ್ಲಿ ಕುಳಿತು ಇವಳ ಮುಖದ ಮೇಲೆ ಬೆರಳಾಡಿಸುತ್ತ ಖುಷಿ ಪಡುತ್ತಿರುತ್ತಾರೆ. ಈಗಲೇ ಇದ್ದದ್ದು ಸಾಲದೆಂಬಂತೆ ಸಾಮಾಜಿಕ ಮಾಧ್ಯಮಗಳು ಇವಳಲ್ಲೇ ಅಡಕವಾಗಿವೆ. ಈಕೆಯ ಸಹಾಯದಿಂದ ಮನೆಗೆ ಬೇಕಾದ ಸಾಮಾನುಗಳನ್ನು ಅಂಗಡಿಗೆ ಹೋಗಿ ಸರದಿಯಲ್ಲಿ ನಿಂತು ತರುವ ಕಾಲ ದೂರವಾಗುತ್ತಿದೆ. ಸಿದ್ಧ ಆಹಾರ ಸಿದ್ಧ ಉಡುಪುಗಳು ಸಹ ಮನೆ ಬಾಗಿಲಿಗೆ ಬಂದು ತಲುಪುತ್ತಿವೆ. ಅವ್ವನ ಕೈತುತ್ತಿಗೆ ಸಮಯ ಇಲ್ಲದಂತಾಗಿದೆ.
ಆಗೆಲ್ಲ ಮನೆಯ ಆಳುಗಳಿಗೆ ಮನೆಯಲ್ಲಿಯೇ ಚಹಾ ಕಾಫೀ ತಿಂಡಿ ಊಟ ಆಗಬೇಕು. ಅವರನ್ನು ಆಳುಗಳೆಂದು ಕರೆಯದೇ ಆಳು ಮಕ್ಕಳೆಂದು ಅಪ್ಯಾಯಮಾನವಾಗಿ ಕರೆಯುತ್ತಿದ್ದ ರೀತಿ ಅನುಕರಣೀಯ. ಅವರೂ ಸಹ ತಾವು ಆಳುಗಳೆಂದು ತಿಳಿಯದೇ ತಮ್ಮ ಕಾಯಕದಲ್ಲಿ ತೊಡುಗುತ್ತಿದ್ದ ರೀತಿ ಕಣ್ಣು ತುಂಬಿಸಿಕೊಳ್ಳುವಂತೆ ಇರುತ್ತಿತ್ತು. ಹದವಾಗಿದ್ದ ಗದ್ದೆಗಳಿಗೆ ನಾಟಿ ಮಾಡಲು ದಿನ ನಿಗದಿ ಮಾಡಿದ ದಿನವಂತೂ ಮನೆಯಲ್ಲಿ ಸಂಭ್ರಮದ ವಾತಾವರಣ. ಈಗ ಕಣ್ಣಾಮುಚ್ಚಾಲೆ ಆಡುವ ಮಳೆಗಾಲದಲ್ಲಿ ಕೃಷಿಯ ಕೆಲಸಗಳು ಮೊದಲಿನ ರಂಗು ಕಳೆದುಕೊಂಡಿವೆ.
ಏನೇ ಅನ್ನಿ ಮಳೆ ಬೆಳೆ ಮದುವೆಗಳೆಲ್ಲ ಇತ್ತೀಚಿನ ದಿನಗಳಲ್ಲಿ ತನ್ನತನವನ್ನು ಕಳೆದುಕೊಂಡು ಹೊಸ ಹಾದಿ ಹಿಡಿದಿವೆ. ದಿವಾಳಿ ಅಂಚೆಗೆ ಬಂದು ನಿಲ್ಲುತ್ತಿವೆ. ದೀರ್ಘಕಾಲದ ಮದುವೆಗಳು ಇತಿಹಾಸದ ಪುಟವನ್ನು ಸೇರುತ್ತಿವೆ. ಕ್ಷುಲ್ಲಕ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತಿವೆ. ಜಗತ್ತಿಗೆಲ್ಲ ಮಾದರಿಯಾದ ನಮ್ಮ ಕೌಟುಂಬಿಕ ವ್ಯವಸ್ಥೆಯನ್ನೇ ಅಲ್ಲ್ಲಾಡಿಸುತ್ತಿವೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಆತ್ಮಹತ್ಯೆಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನಾಗರಿಕ ಸಮಾಜದಲ್ಲಿ ಬಾಳುತ್ತಿದ್ದೇವೆ ಎನ್ನುವುದು ಹೆಸರಿಗೆ ಮಾತ್ರ ಎನಿಸುತ್ತ್ತಿದೆ. ಎಂಥಾ ಕಾಲ ಬಂತಪ್ಪಾ? ಇನ್ನೂ ಏನೇನು ನೋಡಬೇಕೋ ಈ ಕಣ್ಣಲ್ಲಿ. ಏನೇನು ಕೇಳಬೇಕೋ ಈ ಕಿವಿಯಲ್ಲಿ ಮಾನವೀಯತೆ ಸತ್ತು ಹೋಯಿತಾ? ಎಂಬ ಹಿರಿಯರ ಮಾತುಗಳು ಕಿವಿಗೆ ಬೀಳುತ್ತಲೇ ಇರುತ್ತವೆ.
ನಿರಂತರ ಪ್ರಯೋಗಗಳಾಗುತ್ತಿರುವ ದಿನಗಳಲ್ಲಿ ಬದುಕು ಹೊಸ ರೂಪ ಪಡೆದುಕೊಂಡಿದೆ. ಬದಲಾವಣೆ ಜಗದ ನಿಯಮ ಹೀಗಿರುವಾಗ ಬದುಕು ಸಹ ಬದಲಾಗುತ್ತಲೇ ಇರುತ್ತದೆ. ಹಾಗಂತ ನಮ್ಮ ಸಂಸ್ಕೃತಿಯ ಬೇರುಗಳನ್ನು ಸಡಿಲುಗೊಳಿಸುವುದು ಬಲು ಅಪಾಯಕಾರಿ ಸಂಗತಿ. ಹಣವಿದ್ದರೆ ಸಾಕು ಎಲ್ಲವೂ ನಡೆಯುತ್ತದೆ. ಯಾರ ಹಂಗು ಬೇಕಿಲ್ಲ ಎಂಬ ಹುಚ್ಚು ಭ್ರಮೆಯಲ್ಲಿ ಒಣ ಪ್ರತಿಷ್ಟೆ ಮೆರೆಯುವ ಅಸಡ್ಡೆ ತೋರುವ ಚಾಳಿ ಹೆಚ್ಚುತ್ತಿದೆ. ಬದಲಾಗುತ್ತಿರುವ ಕಾಲಮಾನದಲ್ಲಿ ದೇಸೀ ಬೇರುಗಳ ಗುರುತಿಸುವಿಕೆ ಬೆಳೆಸುವಿಕೆ ಮಾಯವಾಗುತ್ತಿದೆ.ಸಂಬಂಧಗಳ ಬಂಧದ ಬಳ್ಳಿಗಳು ಕಮರುತ್ತಿವೆ.
ಬದುಕನ್ನು ಆಸ್ವಾದಿಸುವ ಅನುಭವದ ಪ್ರಕ್ರಿಯೆ ಮುಖ್ಯ. ತೀವ್ರಗತಿಯಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ ನಮ್ಮೆಲ್ಲ ಸಾಂಸ್ಕೃತಿಕ ಮೂಲಭೂತವಾದುದನ್ನು ಅಳಿಸಿಹಾಕುತ್ತಿದೆ ಎನ್ನುವ ನೋವು ಕಾಡುತ್ತಿದೆ. ಜತೆಗೆ ಆರೋಪವೂ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಬೆಳವಣಿಗೆ ಹಿಂದಿರುವ ಜೀವನ ವಿಜ್ಞಾನ ಗ್ರಹಿಸದಿರುವುದೇ ಆಗಿದೆ. ಮೊದಲೆಲ್ಲ ಮನೆಯವರೇ ಕನ್ಯೆ/ವರ ನೋಡಿ, ಮುಂದೆ ನಿಂತು ಮನೆಯ ಮುಂದೆ ಚಪ್ಪರ ಹಾಕಿಸಿ ಓಲಗ ಊದಿಸುತ್ತಿದ್ದರು. ಆ ಮದುವೆಗಳು ಜೀವನದ ಕೊನೆ ಕ್ಷಣದವರೆಗೂ ಬಾಳಿ ಬದುಕುತ್ತಿದ್ದವು.
ಬಾಲ್ಯದ ತುಂಟಾಟ ಮರೆಯಾಗುತ್ತಿದೆ. ಹರೆಯದ ಚೆಲ್ಲಾಟ ಬಾಳನ್ನು ನಾಶಗೊಳಿಸುತ್ತಿದೆ. ನೌಕರಿಗಾಗಿ ಅಲೆದಾಟ ಹತಾಶೆ ಖಿನ್ನತೆಗೆ ತಳ್ಳುತ್ತಿದೆ. ಇವೆಲ್ಲ ಸಾಲದೆಂಬಂತೆ ಸಂಗಾತಿಯ ಹುಡುಕಾಟ ಗೋಳಾಟವಾಗಿದೆ. ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಸಾಂಪ್ರದಾಯಿಕ ಚಿಂತನೆಗಳನ್ನು ಆಧುನೀಕರಣದ ಕಾಲಘಟ್ಟದಲ್ಲಿ ಸಕಾಲಗೊಳಿಸಬೇಕಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ನಮ್ಮತನವವನ್ನು ಕಳೆದುಕೊಳ್ಳುವುದು ಎಷ್ಟು ಸರಿ? ದೇಸಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಿದೆ. ಅಮ್ಮನ ಮಡಿಲು, ಅಪ್ಪನ ಹೆಗಲು, ವೃದ್ಧಾಶ್ರಮ ಸೇರುತ್ತಿವೆ. ದೊಡ್ಡ ದೊಡ್ಡ ಮನೆಗಳಲ್ಲಿ ಪ್ರೀತಿಪಾತ್ರರಾದ ಅಜ್ಜ ಅಜ್ಜಿಯರಿಗೆ ಜಾಗ ಇಲ್ಲವಾಗಿದೆ.ಐಶಾರಾಮಿ ಸ್ವಾರ್ಥ ಜೀವನ ಶೈಲಿಯಲ್ಲಿ ಕಿರಿಯರಿಗೆ ಮಾರ್ಗದರ್ಶನ ಮಾಡುವ, ಚಿಂತನೆಗೆ ಹಚ್ಚುವ ಕೆಲಸವಾಗಬೇಕಿದೆ. ಯಂತ್ರಗಳನ್ನು ನಾವು ಉಪಯೋಗಿಸಬೇಕೇ ಹೊರತು ಅವುಗಳು ನಮ್ಮನ್ನು ಉಪಯೋಗಿಸಿಕೊಳ್ಳಬಾರದು. ನಾವು ಅವುಗಳ ಒಡೆಯರಾಗೇ ಉಳಿಯಬೇಕು ದಾಸರಾಗಬಾರದು. ಆಧುನಿಕ ಜೀವನದ ಎಡರತೊಡರುಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಇನ್ನಾದರೂ ಎಚ್ಚೆತ್ತುಕೊಂಡು ಬದುಕನ್ನು ಮತ್ತೆ ಪ್ರೀತಿ ಎಳೆ ಮಾತ್ರದಿಂದ ಕಟ್ಟಬೇಕಿದೆ. ವಿಶಾಲವಾದ ಆಲದಮರದಂತಿರುವ ಶ್ರೀಮಂತ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ಗುಣವನ್ನು ಸಾವಿರ ಸಾವಿರ ತಲೆಮಾರುಗಳವರೆಗೆ ದಾಟಿಸಬೇಕಿದೆ. ಚಿಗುರೆಲೆಗಳ ಜೀವನವನ್ನು ಬೆಳಗಿಸಬೇಕಿದೆ ಅಲ್ಲವೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ