ಎಲ್ಲಿ ಹೋದವು ನಮ್ಮೊಂದಿಗಿದ್ದ ಪಕ್ಷಿಗಳು ?

ಪ್ರಗತಿವಾಹಿನಿ ಸುದ್ದಿ:

ನಿದ್ದೆಯಿಂದ ಎದ್ದ ಕೂಡಲೇ ಆಹ್ಲಾದಕರವೆನಿಸುವ ಬೆಳಗಿನ ಕಲರವ ಕೇಳದಂಥ ಪರಿಸ್ಥಿತಿಯ ನಿರ್ಮಾಣವಾಗುತ್ತಿದೆ.

ಸುಮಾರು ಮೂವತ್ತು ನಲವತ್ತು ವರ್ಷಗಳ ಹಿಂದೆ ಎಲ್ಲಿ ಬೇಕೆಂದರಲ್ಲಿ ಮನೆ ಗೋಡೆಯ ಸಂದುಗಳಲ್ಲಿ, ಹಂಚಿನ ಕೆಳಗೆ, ತಗಡುಗಳಡಿಯಲ್ಲಿ, ಭತ್ತದ ಹೊದಿಕೆಯಲ್ಲಿ ತೂಬಿನಲ್ಲಿ ಮನೆ ಮಾಡಿಕೊಂಡಿರುತ್ತಿದ್ದ ಚಿಂವ್ ಚಿಂವ್ ಗುಬ್ಬಿಗಳು, ಮರದ ಮೇಲೆ ಅಡ್ಡಡ್ಡ ಕಟ್ಟಿಗೆಯ ತುಂಡುಗಳನ್ನಿಟ್ಟು ಮೊಟ್ಟೆಗಳನ್ನಿಟ್ಟು ಮರಿಗಳೊಂದಿಗೆ ಕಾ…. ಕಾ…. ಎಂದು ಹಾರಾಡಿಕೊಂಡಿದ್ದ ಕಾಗೆಗಳು, ಕೆರೆ, ಹಳ್ಳ, ನದಿ ಪಾತ್ರದಲ್ಲಿ ನೀರತ್ತ ಬಾಗಿದ ಮರಗಳಿಗೆ ಗೂಡುಗಳನ್ನು ಜೋತು ಬಿಟ್ಟು, ಸಂಸಾರ ನಡೆಸುತ್ತಿದ್ದ ಗೀಜುಗಗಳು, ಪೊಟರೆಗಳಲ್ಲಿ, ಎತ್ತರದ ಕೊಂಬೆಗಳ ಮೇಲೆ ಜೀವಿಸುತ್ತಿದ್ದ ಗಿಳಿಗಳು, ಪಾರಿವಾಳಗಳು, ಬೆಳ್ಳಕ್ಕಿಗಳು, ಮರಕುಟುಕ, ಸಾಂಬಾರ ಕಾಗೆ, ಕೋಗಿಲೆಗಳು, ಗೊರವಂಕ, ಬೆಳವ, ಸೂಜಿಬಾಲದ ಹಕ್ಕಿ, (White-rumped needletail)ಕಂದುಗತ್ತಿನ ಸೂಜಿಬಾಲದ ಹಕ್ಕಿ (Brown-backed needletail) ನವಿಲು, ಗೂಬೆ ನಾನಾ ಬಗೆಯ ಪಕ್ಷಿಗಳು ಇಂದು ಹಳ್ಳಿಗಳಿಂದ ಪಟ್ಟಣ ಪ್ರದೇಶಗಳಿಂದ ಕಣ್ಮರೆಯಾಗುತ್ತಿರುವುದು ಅಷ್ಟೇ ಅಲ್ಲ, ಅವುಗಳ ಸಂತತಿ ಉಳಿಯುತ್ತದೆಯೋ ಇಲ್ಲವೋ ? ಎಂಬ ಆತಂಕದಲ್ಲಿ ಪಕ್ಷಿ ಪ್ರಿಯರಿದ್ದಾರೆ. ನಿಮಗೂ ಕೂಡಾ ಹಾಗನ್ನಿಸಲೂಬಹುದು.

ಹಳ್ಳಿಯ ಜನರಂತೂ ಹೊಲ,ಗದ್ದೆಗಳಲ್ಲಿ ಪೈರನ್ನು ರಕ್ಷಿಸಲು ಹೆಣಗಾಡುತಿದ್ದರು. ಇಂದು ಆ ತಾಪತ್ರಯವೇ ಕಾಣುತ್ತಿಲ್ಲ. ಎಲ್ಲೋ ಕೆಲವು ಕಡೆ ಪಕ್ಷಿ ಸಮೂಹ ಉಳಿದುಕೊಂಡಿದೆ. ಹೆಚ್ಚಾಗಿ ಮಲೆನಾಡಿನ ಭಾಗದಲ್ಲಿ. ನದಿ ತೀರ, ಸಹ್ಯಾದ್ರಿ ಘಟ್ಟ ಸಾಲಲ್ಲಿ. ಈಗ ಜನ ಇದನ್ನು ಕೈ ಬಿಡುವಂತೆ ಕಾಣುತ್ತಿಲ್ಲ. ಕಾಡಿನ ನಟ್ಟ ನಡುವೆ ಆದಿವಾಸಿ, ಬುಡಕಟ್ಟು ಜನಾಂಗದವರು ಊರನ್ನು ಬಯಸದೇ ಅಲ್ಲೇ ನೆಲೆ ಕಂಡುಕೊಂಡಿರುವುದು, ಜೊತೆಗೆ ಎಸ್ಟೇಟ್ ಗಳೆಲ್ಲವೂ ಪ್ರಾಣಿ, ಪಕ್ಷಿ ಸಮೂಹಕ್ಕೆ ಕೊಡಲಿಗಳಂತಾಗಿವೆ.

ಇಂದು ಜಗತ್ತು ಎಷ್ಟು ತೀವ್ರ ಗತಿಯಲ್ಲಿ ಬದಲಾಗುತ್ತಿದೆ ಎಂದರೆ, ಒಂದು ಪುಟ ಬರೆದು ಮುಗಿಸುವಷ್ಟರಲ್ಲಿ, ಅದು ಹಳೆಯದಾಗಿ ಜಗತ್ತೆಂಬ ಪರದೆಯ ಮೇಲೆ ಹೊಸದಾದ ಮತ್ತೇನೇನೋ ಅಪ್ಪಳಿಸಿರುತ್ತದೆ. ಅದರ ಭೋರ್ಗರೆತದಲ್ಲಿ ನಮ್ಮ ಸುತ್ತಮುತ್ತಲಿದ್ದ ಎಷ್ಟೋ ಜೀವರಾಶಿ,ನಾವಿರುವ ಪರಿಸರದಿಂದ ದೂರ ಹೋಗಿವೆ. ಕೆಲವಂತೂ ವಿನಾಶದ ತುದಿ ಮುಟ್ಟುತ್ತಲಿವೆ. ನೋವು , ವಿಷಾದ… ನೆನೆದಾಗಲೆಲ್ಲ !

ಮಾನವನ ಪರಿಸರದ ಕಬಳಿಕೆಯು ಅತಿಯಾಯಿತು. ಪ್ರಾಣಿ ಪಕ್ಷಿಗಳ ನೆಲೆಯನ್ನು ಹಾಳುಗೆಡವಿದರೆ ಅವುಗಳ ಪಾಡೇನು ? ಮರ ಕಡಿಯುವುದಂತೂ ತಡೆಯಿಲ್ಲದೇ ಮುಂದುವರೆದಿದೆ. ಅಭಿವೃದ್ಧಿಯ ನಾಗಾಲೋಟದಲ್ಲಿ ರಸ್ತೆ ಅಗಲಿಕರಣ, ವಸತಿ ಸೌಕರ್ಯ ಹಲವು ಕಾರಣಕ್ಕೆ ಆಹುತಿಯಾಗುತ್ತಿವೆ. ಅದು ಒಂದರ್ಥದಲ್ಲಿ ಗರಗಸದಂತಾಗಿದೆ. ಬೇಕು ಅಂತಲೂ ಬೇಡ ಅಂತಲೂ ಅನ್ನುವಂತಿಲ್ಲ. ಇಂತಹ ವಿಚಾರಗಳು ಬಾಯಿ ಮುಚ್ಚಿಸಿಬಿಡುತ್ತವೆ. ಆದರೆ ಬಸವಳಿದ ಜೀವಿಗಳ ಗತಿಯೇನು ?

 

ಪಕ್ಷಿ ಸಮೂಹ ಸ್ವಚ್ಛಂದವಾಗಿ ಹಾರಾಡುತಿದ್ದ ನೀಲಿ ನಭ ಇಂದು ಕಾರ್ಬನ್ ಡೈಆಕ್ಸೈಡ್ ನಿಂದ ತುಂಬಿ ಹೋಗುತ್ತಿದೆ. ಬೃಹತ್‌ ನಗರಗಳ ಚಿತ್ರಣ ನಿಮಗೀಗಾಲೆ ಗೊತ್ತಿದೆ. ಎಷ್ಟೋ ಗ್ರಾಮೀಣ ಭಾಗಗಳು ಈ ನಿಟ್ಟಿನಲ್ಲಿ ಪರಿವರ್ತನೆಯಾಗುವ ಹಂತದಲ್ಲಿವೆ. ಅದು ಅಪಾಯಕಾರಿ. ಕೆರೆ,ಹಳ್ಳ ಕೊಳ್ಳ, ನದಿ ಪಾತ್ರಗಳೆಲ್ಲವೂ ಜನ ವಸತಿಯ ಕೇಂದ್ರಗಳಾಗಿವೆ. ಬೆಂಗಳೂರಿನಂತಹ ನಗರಗಳಲ್ಲಿ ಕೆರೆಗಳೆಲ್ಲ ಬಡಾವಣೆ, ವಸತಿ ಸಮುಚ್ಚಯ ಕಟ್ಟಡಗಳಾಗಿ ಬದಲಾಗಿವೆ. ಇದೇ ಮಾನವನ ಅತೀರೇಕದ ವರ್ತನೆ ಎಂದರೆ ತಪ್ಪೇನಿಲ್ಲ.

ನೀವು ಕೇಳಿದ ಹಾಗೇ ನಗರೀಕರಣ, ಕೈಗಾರಿಕೀಕರಣ, ಔದ್ಯೋಗೀಕರಣ, ಜಾಗತೀಕರಣಗಳ ಬಗೆಗೆ ಬೋಧಿಸುವಾಗ, ಮನೋವಿಕಾರೀಕರಣ ಎಂಬುದನ್ನು ಸೇರಿಸಿ ಬಿಡುವುದೊಳಿತು ! ಭೂಮಿಯ ಎಲ್ಲ ಭಾಗದ ಮೇಲೂ ಅಧಿಪತ್ಯ ಸಾಧಿಸುತ್ತಾ, ಮನೋ ಇಚ್ಚೆಯಂತೆ ತೀರ್ಮಾನ ತೆಗೆದುಕೊಂಡರೆ ಪರಿಣಾಮವೇನು ಗೊತ್ತೇ ? ಪರಿಸರದಲ್ಲಿ ಒಮ್ಮೆ ಸಮತೋಲನ ತಪ್ಪಿತೆಂದರೆ, ಮುಖ್ಯ ವಾಹಿನಿಗೆ ತರಲು ಶತಮಾನಗಳೇ ಬೇಕಾದೀತು. ತಾನೂ ಬದುಕಿ, ಇತರರೂ ಬದುಕಿ ಬಾಳಲು ಅವಕಾಶ ಕೊಡಬೇಕೆಂಬುದು ಕೇವಲ, ಸಂವಿಧಾನದಲ್ಲಿ, ಭಾಷಣಗಳಲ್ಲಿ ಉಳಿಯಬಾರದು. ಅದು ಕಾರ್ಯರೂಪಕ್ಕೆ ಬರಲೇಬೇಕು. ಇಲ್ಲವಾದರೆ ಮತ್ತೊಂದು ‘ಮೆಹಂಜೋದಾರೋ’ ಆಗಿ ಹೋದೀತು. ( ಸಿಂಧೂ ಕಣಿವೆ ನಾಗರಿಕತೆಯಲ್ಲಿದ್ದ ಒಂದು ನಗರ. ಮೆಹಂಜೋದಾರೋ ಪದದರ್ಥ ‘ಸತ್ತವರ ದಿಬ್ಬ’ ಅದು ಏಳು ಬಾರಿ ಪ್ರಕೃತಿಯ ವಿಕೋಪಕ್ಕೆ ನಾಶವಾಗಿ ಹುಟ್ಟಿಕೊಂಡಿತ್ತಂತೆ)

ಇತ್ತೀಚೆಗೆ ಮೊಬೈಲ್ ಟವರ್ ಗಳಿಂದ ಹೊರ ಹೊಮ್ಮುವ ಎಲೆಕ್ಟ್ರೋ ರೇಡಿಯೇಶನ್ ನ ಪರಿಣಾಮದಿಂದ ಗುಬ್ಬಿಯಂತಹ ಪಕ್ಷಿಗಳು ನಾಶವಾಗುತ್ತಿವೆ ಎಂಬ ವಿವರಣೆ ನಂಬಲರ್ಹವಾಗಿಲ್ಲ. ಹಾಗೆಂದು ಸಾಬೀತಾಗಿಲ್ಲ. ಇದನ್ನು ಹಲವು ಮಾಧ್ಯಮಗಳು ಬಿತ್ತರಿಸಿ, ಅಂತೆ ಕಂತೆಗಳ ವಿಶ್ಲೇಷಣೆ ಮಾಡಿ, ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸುವುದು ಸರಿಯಲ್ಲ.

ಪಕ್ಷಿಗಳು ಯಾವತ್ತೂ ನಿಶ್ಯಬ್ದ ವಾತಾವರಣದಲ್ಲಿರಲು ಇಚ್ಛೆಪಡುತ್ತವೆ. ಅವುಗಳಿಗೆ ಅತಿಯಾದ, ಕರ್ಕಶ ಶಬ್ದವನ್ನು ಸಹಿಸಲಾರವು. ಅವುಗಳ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಶಬ್ದ ಗ್ರಹಣ ಸಾಮರ್ಥ್ಯ ಇರುತ್ತದೆ. ಅದನ್ನು ಮೀರಿದ ಶಬ್ದ ಅವುಗಳನ್ನು ಕಾಲು ಕೀಳುವಂತೆ ಮಾಡುತ್ತವೆ ಎಂಬುದು ಪಕ್ಷಿ ಪ್ರೇಮಿಗಳ ವಿವರಣೆ. ಅದೆಷ್ಟರ ಮಟ್ಟಿಗೆ ಸತ್ಯವೋ ಸುಳ್ಳೋ ಬಲ್ಲವರೇ ತಿಳಿಸಬೇಕು. ಅದೊಂದು ಅರ್ಥದಲ್ಲಿ ಸರಿಯೂ ಕೂಡಾ. ನಮ್ಮಂಥವರಿಗೂ ಅತಿಯಾದ ಶಬ್ದ ಕಿರಿಕಿರಿ ಉಂಟು ಮಾಡಿ, ರೇಗಾಡುವ, ಕೂಗಾಡುವ ವಿಲಕ್ಷಣ ನಡೆವಳಿಕೆಗಳುಂಟಾಗುತ್ತವೆ.

ಕರ್ನಾಟಕದಲ್ಲಿ ಹಲವು ಪಕ್ಷಿ ಧಾಮಗಳಿದ್ದು, ಅಲ್ಲಿಗೆ ಪ್ರತಿ ವರ್ಷವೂ ಅಕ್ಟೋಬರ್ ತಿಂಗಳಿನಿಂದ ಜನೇವರಿತನಕ ಬೇರೆ ಬೇರೆ ದೇಶಗಳಿಂದ, ಆಹಾರ, ಸಂತಾನ, ಹವಾಮಾನ ಬದಲಾವಣೆ ಇತ್ಯಾದಿ ಕಾರಣಗಳಿಂದ ಬರುವ ಅವು, ಸುಂದರ ಲೋಕವನ್ನೇ ಸೃಷ್ಟಿಸಿರುತ್ತವೆ. ರಂಗನತಿಟ್ಟು, ಮಂಡಗದ್ದೆ, ಗುಡವಿ, ಅತ್ತಿವೇರಿ, ಮೌಳಂಗಿ,ಕಗ್ಗಲಡು, ಕೊಕ್ಕರೆ ಬೆಳ್ಳೂರು, ಗದಗಿನ ಮಾಗಡಿ ಅತ್ಯಂತ ಮನೋಹರವಾಗಿವೆ. ರಣಹದ್ದುಗಳಿಗಾಗಿ ರಾಮದೇವರ ಬೆಟ್ಟ, ನವಿಲುಗಳಿಗಾಗಿ ಬಂಕಾಪುರ, ಆದಿ ಚುಂಚನಗಿರಿ, ನಾಗಮಂಗಲ ಇತ್ಯಾದಿ.

ಪರಿಸರದ ರಕ್ಷಣೆ ಜಗತ್ತಿನಾದ್ಯಂತ ಇರಬಹುದಾದ ಪ್ರತಿ ವ್ಯಕ್ತಿಯ ಜವಾಬ್ದಾರಿ. ಒಟ್ಟು ಭೂ ಭಾಗದ ಶೇ 6 ರಷ್ಟು ಅರಣ್ಯ ಇರಬೇಕೆಂದು ತಜ್ಞರು ಹೇಳುತ್ತಾರೆ. ಮುಂದಿನ ಜನಾಂಗ ನೆನಪಿಡುವಂತಹ ಅಮೂಲ್ಯ ಕಾರ್ಯ ಪಕ್ಷಿ ಸಂಕುಲದ ಮೇಲೂ ಇರಲಿ. ಚೆಂದದ, ಮುದ್ದು ಮುದ್ದಾದ, ಬಣ್ಣ ಬಣ್ಣದ ಹಕ್ಕಿಗಳ ನಾನಾ ಬಗೆಯ ದನಿ ಕೇಳುವಂತಾಗಲಿ ಎಂದು ಬಯಸೋಣ.

ಲೇಖನ : ರವಿ ಕರಣಂ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button