ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಮಾಜಿ ಸಚಿವ ರಮೇಶ ಜಾರಕಿಹೊಳಿ ಅಸಮಾಧಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ದೂರು ಹೊತ್ತು ಇದೀಗ ನವದೆಹಲಿಗೆ ತಲುಪಿದ್ದಾರೆ.
ಇಂದು ಮಧ್ಯಾಹ್ನ ವಿಮಾನವೇರಿ ನವದೆಹಲಿಗೆ ತೆರಳಿರುವ ರಮೇಶ್, ಪಕ್ಷದೊಳಗೆ ಮೂವರು ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾಗಿ ಹೇಳಿದ್ದು, ಅವರ ವಿರುದ್ಧ ಹೈಕಮಾಂಡ್ ಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ನಿನ್ನೆ ಮಧ್ಯರಾತ್ರಿ 2 ಗಂಟೆ ನವದೆಹಲಿಯಿಂದ ಒಬ್ಬರು ಫೋನ್ ಮಾಡಿದ್ದಾರೆ. ದೆಹಲಿಗೆ ಬರುವಂತೆ ತಿಳಿಸಿದ್ದಾರೆ. ಹಾಗಾಗಿ ನಾನು ದೆಹಲಿಗೆ ಬಂದಿದ್ದೇನೆ. ನಾಯಕರನ್ನು ಭೇಟಿ ಮಾಡಿ ನನಗೆ ಬೆನ್ನಿಗೆ ಚೂರಿ ಹಾಕಿದ ಮೂವರ ಹೆಸರನ್ನು ತಿಳಿಸುತ್ತೇನೆ. ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ. ಆದರೆ ರಾತ್ರಿ 2 ಗಂಟೆಗೆ ಫೋನ್ ಮಾಡಿದವರ್ಯಾರು, ಬೆನ್ನಿಗೆ ಚೂರಿ ಹಾಕಿದ ಮೂವರು ಯಾರು ಎನ್ನುವುದನ್ನು ಬಹಿರಂಗಪಡಿಸಿಲ್ಲ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಅನ್ಯಾಯ ಮಾಡಿಲ್ಲ. ಅವರಿಂದ ನನಗೆ ಕೆಟ್ಟದಾಗಿಲ್ಲ. ಆದರೆ ಯಾರಿಂದ ಅನ್ಯಾಯವಾಗಿದೆ ಎನ್ನುವುದನ್ನು ಈಗ ಹೇಳುವುದಿಲ್ಲ. ನಾಯಕರನ್ನು ಭೇಟಿ ಮಾಡಿದ ನಂತರ ಫೋಟೋ, ವಿಡೀಯೋ ಬಹಿರಂಗಪಡಿಸುವುದಾಗಿಯೂ ಹೇಳಿದ್ದಾರೆ.
ರಾಜ್ಯದ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರ ಕೆಡವಿ ಬಿಜೆಪಿ ಸರಕಾರವನ್ನು ತಂದ ರಮೇಶ ಜಾರಕಿಹೊಳಿಗೆ ಇಲ್ಲೂ ಸಮಾಧಾನ ಸಿಕ್ಕಿಲ್ಲ. ಮಂತ್ರಿಸ್ಥಾನ ಕಳೆದುಕೊಂಡಿರುವ ರಮೇಶ ಜಾರಕಿಹೊಳಿ ಈಗ ಪಕ್ಷದೊಳಗಿನ ಆ ಮೂವರ ವಿರುದ್ಧ ಕೊತಕೊತ ಕುದಿಯುತ್ತಿದ್ದಾರೆ. ಗಾಯಗೊಂಡ ಹುಲಿಯಂತಾಗಿದ್ದು, ಮುಂದಿನ ನಿರ್ಧಾರ ಯಾವ ರೀತಿಯ ಇರುತ್ತದೆ ಕಾದು ನೋಡಬೇಕಿದೆ.
ಊಟ ಮಾಡಿಸುವಾಗ ಮಗುವಿನ ದುರಂತ ಸಾವು
ರಾಜ್ಯದಲ್ಲಿ ಇಂದು 3222 ಜನರಿಗೆ ಕೊರೋನಾ ಸೋಂಕು: ಜಿಲ್ಲಾವಾರು ಸಮಗ್ರ ಮಾಹಿತಿ ಇಲ್ಲಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ