ಯಾರ ಹೆಗಲಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇನ್ನು ಒಂದೆರಡು ದಿನದಲ್ಲೇ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಪುನರ್ ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿರುವುದರಿಂದ ರಾಜ್ಯ ರಾಜಕೀಯ ಮತ್ತೆ ಕುತೂಹಲ ಮೂಡಿಸಿದೆ.

ಕೊರೋನಾ ಗದ್ದಲದಿಂದಾಗಿ ಕಳೆದ ಕೆಲವು ದಿನಗಳಿಂದ ರಾಜಕೀಯ ಸ್ಥಬ್ದವಾಗಿತ್ತು. ಎಲ್ಲರ ಗಮನ ಕೊರೋನಾದತ್ತ ಸರಿದಿತ್ತು. ಇದೀಗ ಮುಖ್ಯಮಂತ್ರಿಗಳು ಕೆಲವು ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇಂದು ಅಥವಾ ನಾಳೆಯೇ ಬದಲಾವಣೆ ಮಾಡುತ್ತೇನೆ ಎಂದಿದ್ದಾರೆ.

ರಾಜ್ಯದಲ್ಲಿ ಆರಂಭದಲ್ಲಿ ಕೇವಲ 16 ಜನ ಮಾತ್ರ ಮಂತ್ರಿಗಳಿದ್ದರು. ಆ ಸಂದರ್ಭದಲ್ಲಿ 16 ಜನರಿಗೆ ಎಲ್ಲ ಜಿಲ್ಲೆಗಳನ್ನೂ ಹಂಚುವ ಅನಿವಾರ್ಯತೆ ಇತ್ತು. ಒಬ್ಬೊಬ್ಬರಿಗೆ ಎರಡೆರಡು ಜಿಲ್ಲೆಯ ಜವಾಬ್ದಾರಿ ನೀಡಲಾಗಿತ್ತು.

ಆದರೆ ನಂತರದಲ್ಲಿ ಇನ್ನಷ್ಟು ಸಚಿವರು ಸೇರ್ಪಡೆಗೊಂಡರು. ಈಗ ಪೂರ್ಣಪ್ರಮಾಣದ ಮಂತ್ರಿಮಂಡಳವಿದೆ. ಬಹುತೇಕ ಎಲ್ಲ ಜಿಲ್ಲೆಗಳಿಂದಲೂ ಸಚಿವರಿದ್ದಾರೆ. ಹಾಗಾಗಿ ಈಗ ಉಸ್ತುವಾರಿ ಹಂಚಿಕೆ ಸುಲಭವಾಗಲಿದೆ. ಎಲ್ಲರಿಗೂ ಒಂದೊಂದೇ ಜಿಲ್ಲೆಯ ಜವಾಬ್ದಾರಿ ಕೊಡಬಹುದಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಈ ಹಿಂದೆಯೇ ಇಬ್ಬರು ಸಚಿವರಿದ್ದರೂ ಉಸ್ತುವಾರಿಯನ್ನು ಇಬ್ಬರನ್ನೂ ಬಿಟ್ಟು ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಹೆಗಲಿಗೆ ಹಾಕಲಾಗಿತ್ತು. ಅವರು ಬೆಳಗಾವಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸ್ವಂತ ಬಿಜೆಪಿ ಕಾರ್ಯಕರ್ತರೇ ಹೇಳುತ್ತಾರೆ. ಜಿಲ್ಲೆಗೆ ಸಚಿವರು ಬಂದಿದ್ದೇ ಅಪರೂಪ.

ಇದೀಗ ಬೆಳಗಾವಿಯ ಜವಾಬ್ದಾರಿಯನ್ನು ರಮೇಶ ಜಾರಕಿಹೊಳಿ ಅವರಿಗೆ ಕೊಡಬಹುದು ಎನ್ನುವ ಸುದ್ದಿ ದಟ್ಟವಾಗಿದೆ. ಉಮೇಶ ಕತ್ತಿ ಸಚಿವಸಂಪುಟ ಸೇರ್ಪಡೆಯಾಗಿದ್ದರೆ ಅವರು ಹಿರಿಯರಾಗಿರುವುದರಿಂದ ಅವರಿಗೆ ಕೊಡಬಹುದು ಎನ್ನಲಾಗುತ್ತಿತ್ತು. ಆದರೆ ಅವರನ್ನು ಈವರೆಗೂ ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಹಾಗಾಗಿ ರಮೇಶ ಜಾರಕಿಹೊಳಿ ಹೆಗಲಿಗೆ ಉಸ್ತುವಾರಿ ಹೋಗಬಹುದು. ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನವಿದೆ. ಶಶಿಕಲಾ ಜೊಲ್ಲೆ ಮೊದಲ ಬಾರಿಗೆ ಮಂತ್ರಿಗಳಾಗಿದ್ದಾರೆ, ಜೊತೆಗೆ ಸಧ್ಯ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹೊಣೆ ಇದೆ.

ಈ ಕುರಿತು ಪ್ರಗತಿವಾಹಿನಿ ರಮೇಶ ಜಾರಕಿಹೊಳಿ ಅವರನ್ನು ಸಂಪರ್ಕಿಸಿದಾಗ, ಉಸ್ತುವಾರಿ ಸಚಿವರ ಬದಲಾವಣೆ ವಿಷಯ ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಯಾವುದೇ ಮಾತನಾಡಿಲ್ಲ. ನನ್ನ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ ಎಂದರು.

ಒಂದೆರಡು ದಿನದಲ್ಲೇ ಸಚಿವರ ಉಸ್ತುವಾರಿ ಬದಲಾವಣೆ -ಯಡಿಯೂರಪ್ಪ

ರಮೇಶ ಜಾರಕಿಹೊಳಿ

ಜಿಲ್ಲಾ ಉಸ್ತುವಾರಿ ಬಗ್ಗೆ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ, ಒಂದೆರಡು ದಿನದಲ್ಲಿ ಬದಲಾಯಿಸುವ ಕುರಿತು ಮುಖ್ಯಮಂತ್ರಿಗಳು ಹೇಳಿರುವ ಬಗ್ಗೆ ನನಗೆ ಮಾಹಿತಿಯೂ ಇಲ್ಲ. ನನ್ನ ಕರ್ತವ್ಯವನ್ನು ನಾನು ಮಾಡುತ್ತಿದ್ದೇನೆ

-ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button