
https://youtu.be/P9IvdLN1r0U
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವ್ಯವಸ್ಥೆ ಹಲವು ಬಾರಿ ಎಷ್ಟೊಂದು ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಸರಕಾರಿ ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇ ತಪ್ಪಾಯಿತೇನೋ ಎನ್ನುವ ರೀತಿಯಲ್ಲಿದೆ ಈ ಘಟನೆ.
ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಗೆ ತೆರಳಬೇಕಿದ್ದ ಕಾರ್ಮಿಕರು ಉಚಿತ ಬಸ್ ಹತ್ತಿ ಬೆಳಗಾವಿಗೆ ಬಂದಿದ್ದಾರೆ. ಟಿಕೆಟ್ ಪಡೆಯುವ ವ್ಯವಸ್ಥೆ ಇದ್ದಿದ್ದರೆ ಕಂಡಕ್ಟರ್ ಎಲ್ಲಿಗೆ ಎಂದು ಕೇಳುತ್ತಿದ್ದರು. ಆಗ ಅವರನ್ನು ಕೆಳಗಿಳಿಸಬಹುದಿತ್ತು. ಆದರೆ ಯಾರೂ ಕೇಳಲಿಲ್ಲ, ಅವರೆಲ್ಲ ರಾತ್ರಿ ಬೆಂಗಳೂರಲ್ಲಿ ಬಸ್ ಹತ್ತಿ ಬೆಳಗ್ಗೆ ಬೆಳಗಾವಿಗೆ ಬಂದಿಳಿದಿದ್ದಾರೆ.
ಬೇರೆ ಬೇರೆ ಬಸ್ ಗಳಲ್ಲಿ ಸುಮಾರು 50ಕ್ಕಿಂತ ಹೆಚ್ಚು ಕಾರ್ಮಿಕರು, ಗಂಟು ಮೂಟೆ, ಹೆಂಡತಿ, ಮಕ್ಕಳೊಂದಿಗೆ ಬೆಳಗಾವಿಗೆ ಬಂದಿದ್ದಾರೆ. ಇಲ್ಲಿ ಬಸ್ ಇಳಿಯುತ್ತಿದ್ದಂತೆ ಅವರನ್ನೆಲ್ಲ ಕ್ವಾರಂಟೈನ್ ಮಾಡಬೇಕಿದ್ದರಿಂದ ಅಧಿಕಾರಿಗಳು ವಿಚಾರಿಸಿದ್ದಾರೆ. ಆಗ ಶಾಕ್ ಆಗಿದೆ. ಅವರೆಲ್ಲ ಎಲ್ಲೆಲ್ಲೋ ಹೋಗಬೇಕಿತ್ತು. ಈಗ ಅನಿವಾರ್ಯವಾಗಿ ಅವರು ತಲುಪಬೇಕಾದ ಸ್ಥಳಕ್ಕೆ ಮತ್ತೆ ಬೇರೆ ವ್ಯವಸ್ಥೆ ಮಾಡಿ ಕಳಿಸಬೇಕಿದೆ. ಅಲ್ಲಿಯವರೆಗೆ ಹಾಲಭಾವಿ ಮೊರಾರ್ಜಿ ದೇಸಾಯಿ ಶಾಲಾ ತಂಗುದಾಣದಲ್ಲಿ ಅವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ. ಇದಕ್ಕೆ ಯಾರ ಬೇಜವಾಬ್ದಾರಿ ಎನ್ನಬೇಕು?
ಲಕ್ಷ್ಮಿ ಹೆಬ್ಬಾಳಕರ್ ಮಾನವೀಯತೆ

ಬೆಂಗಳೂರಿಂದ ಬೆಳಗಾವಿಗೆ ದಾರಿ ತಪ್ಪಿ ಆಗಮಿಸಿದ ಪರರಾಜ್ಯಗಳ ಕಾರ್ಮಿಕರನ್ನು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭೇಟಿಯಾಗಿ ಧೈರ್ಯ ತುಂಬಿದರು.
ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ಕಾರ್ಮಿಕರು ಮತ್ತು ಅಸಹಾಯಕ ಜನರು ರಾಜ್ಯ ಸರಕಾರಿ ಬಸ್ಸ್ ಗಳ ಮೂಲಕ ಬೆಳಗಾವಿಗೆ ತಲುಪಿರುವ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಹೆಬ್ಬಾಳಕರ್ ಅವರಿಗೆಲ್ಲ ಆಹಾರ ಮತ್ತಿತರ ಸಾಮಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ ಎಸ್. ಬಿ. ದೊಡಗೌಡರ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಮಿಕರು ಬೇರೆ ಬೇರೆ ರಾಜ್ಯಗಳಿಗೆ ತೆರಳಬೇಕಿತ್ತು. ಆದರೆ ಏನೋ ಗೊಂದಲ ಮಾಡಿಕೊಂಡು ಇಲ್ಲಿಗೆ ಬಂದಿದ್ದಾರೆ. ಅವರನ್ನೆಲ್ಲ ವಾಪಸ್ ಅವರು ಹೋಗಬೇಕಾದ ಕಡೆ ಕಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
-ಜಗದೀಶ್ ಕೆ.ಎಚ್., ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ