ಬಿಜೆಪಿ ಆ ಮೂವರನ್ನು ಉಸ್ತುವಾರಿ ಮಾಡಿದ್ದೇಕೆ?; ಬೆಳಗಾವಿಗೆ ಸಂಭವನೀಯ ಅಭ್ಯರ್ಥಿ ಯಾರು?

ಸಂಭವನೀಯ ಅಭ್ಯರ್ಥಿ ಯಾರು? – ನಾಳೆ ಪ್ರಗತಿವಾಹಿನಿ ನೋಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಇನ್ನೇನು ಘೋಷಣೆಯಾಗಲಿದೆ. ರಾಜಕೀಯ ಪಕ್ಷಗಳ ಸಿದ್ಧತೆಯೂ ಜೋರಾಗಿದೆ. ಆಕಾಂಕ್ಷಿಗಳು ಹೈಕಮಾಂಡ್ ಕದತಟ್ಟುವ ಕೆಲಸವನ್ನು ಜೋರಾಗಿಸಿದ್ದಾರೆ. ಬಿಜೆಪಿ ಆಕಾಂಕ್ಷಿಗಳು ಸಂಘ ಪರಿವಾರದ ನಾಯಕರ ಬೆನ್ನಿಗೆ ಬಿದ್ದಿದ್ದಾರೆ. ಅನೇಕರು ಮಾಧ್ಯಮಗಳ ಮೂಲಕ ತಮ್ಮನ್ನು ಪ್ರೊಜೆಕ್ಟ್ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.
ಈ ಮಧ್ಯೆ ಭಾರತೀಯ ಜನತಾ ಪಾರ್ಟಿ ಒಂದು ಹೆಜ್ಜೆ ಮುಂದೆ ಹೋಗಿ ಕ್ಷೇತ್ರದ ಉಸ್ತುವಾರಿಗಳನ್ನು ನೇಮಕ ಮಾಡಿದೆ. ವಿಶೇಷವೆಂದರೆ 7 ಉಸ್ತುವಾರಿಗಳ ಪೈಕಿ ಮೂವರು ತಮ್ಮ ಸಂಬಂಧಿಕರಿಗೆ ಟಿಕೆಟ್ ಕೇಳಿದವರು. ಅದಕ್ಕಾಗಿ ಲಾಬಿ ನಡೆಸಿದವರು. ಹಾಗಾಗಿ ಅವರನ್ನು ಆ ಪ್ರಯತ್ನದಿಂದ ಹಿಂದೆ ಸರಿಸಿ, ಪಕ್ಷ ನಿಲ್ಲಿಸಿದ ಅಭ್ಯರ್ಥಿಪರ ಕೆಲಸ ಮಾಡಿ ಎನ್ನುವ ಸಂದೇಶ ಮತ್ತು ಸೂಚನೆಯನ್ನು ಪಕ್ಷ ನೀಡಿದೆ.
ಮಾಜಿ ಮುಖ್ಯಮಂತ್ರಿ, ಹಾಲಿ ಸಚಿವ ಜಗದೀಶ್ ಶೆಟ್ಟರ್ ತಮ್ಮ ಸೊಸೆ, ಹಿಂದಿನ ಸಂಸದ ಸುರೇಶ ಅಂಗಡಿಯವರ ಪುತ್ರಿ ಶೃದ್ಧಾಳಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು. ರಮೇಶ ಜಾರಕಿಹೊಳಿ ಸುರೇಶ ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡದಿದ್ದರೆ ತಮ್ಮ ಮಗ ಅಮರನಾಥ್ ಗೆ ಟಿಕೆಟ್ ಕೊಡಿ ಎಂದು ಕಳಿದ್ದರು. ಉಮೇಶ ಕತ್ತಿ ತಮ್ಮ ಸಹೋದರ, ಮಾಜಿ ಸಂಸದ ರಮೇಶ ಕತ್ತಿಗೆ ಟಿಕೆಟ್ ನೀಡುವಂತೆ ಅಹವಾಲು ಮಂಡಿಸಿದ್ದರು.
ಈ ಮೂವರನ್ನೂ ಕ್ಷೇತ್ರದ ಉಸ್ತುವಾರಿಗಳನ್ನಾಗಿಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಪಕ್ಷ ನೀಡಿದೆ. ತನ್ಮೂಲಕ ನೀವು ಕೇಳಿರುವ ಯಾರಿಗೂ ಟಿಕೆಟ್ ನೀಡುವುದಿಲ್ಲ ಎನ್ನುವ ಸಂದೇಶವನ್ನು ಪರೋಕ್ಷವಾಗಿ ನೀಡಿದಂತಿದೆ.
ಹಾಗಾದರೆ ಬೆಳಗಾವಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ? ಸುಮಾರು 25ಕ್ಕೂ ಹೆಚ್ಚು ಜನರು ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದು, ಎಲ್ಲರೂ ತಮಗೇ ಟಿಕೆಟ್ ಸಿಗಲಿದೆ ಎನ್ನುವನಿರೀಕ್ಷೆಯಲ್ಲಿದ್ದಾರೆ.
ಮೂವರು ಮಾಜಿ ಸಂಸದರು, ಡಾ.ಪ್ರಭಾಕರ ಕೋರೆ, ರಮೇಶ ಕತ್ತಿ ಮತ್ತು ಅಮರಸಿಂಹ ಪಾಟೀಲ ಪ್ರಯತ್ನ ನಡೆಸಿದ್ದಾರೆ,
ಮೂವರು ಮಾಜಿ ಶಾಸಕರು, ಸಂಜಯ ಪಾಟೀಲ, ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ ಟಿಕೆಟ್ ಕೇಳಿದ್ದಾರೆ.
ನಾಲ್ವರು ವೈದ್ಯರುಗಳಾದ ಡಾ.ಗಿರೀಶ್ ಸೋನವಾಲ್ಕರ್, ಡಾ.ರವಿ ಪಾಟೀಲ, ಡಾ.ಸೋನಾಲಿ ಸರ್ನೋಬತ್ ಮತ್ತು ಮಾಜಿ ಶಾಸಕರೂ ಆಗಿರುವ ಡಾ.ವಿಶ್ವನಾಥ ಪಾಟೀಲ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಇವರಲ್ಲದೆ, ಕರ್ನಾಟಕದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ, ನ್ಯಾಯವಾದಿ ಎಂ.ಬಿ.ಜಿರಲಿ, ಮಾಜಿ ಜಿಲ್ಲಾಧ್ಯಕ್ಷೆ ಉಜ್ವಲಾ ಬಡವಣಾಚೆ, ಸುರೇಶ ಅಂಗಡಿ ಪುತ್ರಿ ಶೃದ್ಧಾ, ಮಾಜಿ ಮಹಾನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ವೀರೇಶ ಕಿವಡಸಣ್ಣವರ್, ಕಿರಣ ಜಾಧವ, ದೀಪಾ ಕುಡಚಿ, ಮಹಾಂತೇಶ ವಕ್ಕುಂದ, ಭಾರತಿ ಮಗ್ದುಮ್, ರಾಜೀವ ಟೋಪಣ್ಣವರ್, ಪಾಂಡುರಂಗ ರಡ್ಡಿ, ರಮೇಶ ದೇಶಪಾಂಡೆ, ರುದ್ರಣ ಚಂದರಗಿ, ನಿಖಿಲ್ ಓಸ್ವಾಲ್ ಮೊದಲಾದವರು ಪ್ರಯತ್ನ ನಡೆಸಿದ್ದಾರೆ.
ಪ್ರಗತಿವಾಹಿನಿಗೆ ದೊರಕಿರುವ ಮೂಲಗಳ ಪ್ರಕಾರ ಭಾರತೀಯ ಜನತಾಪಾರ್ಟಿ ರಾಷ್ಟ್ರೀಯ ನಾಯಕರು ಸಧ್ಯಕ್ಕೆ ಒಬ್ಬರ ಹೆಸರನ್ನು ಅಂತಿಮಗೊಳಿಸಿದ್ದಾರೆ. ರಾಜಕೀಯದಲ್ಲಿ ಏನೂ ನಡೆಯಬಹುದು ಎನ್ನುವ ಅಂಶವನ್ನು ಹೊರತುಪಡಿಸಿದರೆ ಅವರನ್ನೇ ಅಭ್ಯರ್ಥಿ ಮಾಡುವ ಸಾಧ್ಯತೆ ಹೆಚ್ಚಿದೆ.
ಯಾರು ಆ ಅಭ್ಯರ್ಥಿ?– ಭಾನುವಾರ https://pragati.taskdun.com ನೋಡಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ