ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಮತ್ತೆ ಲಾಕ್ ಡೌನ್ ಆಗುತ್ತಾ ಎನ್ನುವ ಲಕ್ಷಾಂತರ ಜನರ ಕುತೂಹಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತೆರೆ ಎಳೆದಿಲ್ಲ.
ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್ ಮಾಡಲಾಗುತ್ತದೆ ಎನ್ನುವ ದಟ್ಟ ವದಂತಿ ಹಬ್ಬಿತ್ತು. ಹಾಗಾಗಿ ಸೋಮವಾರ ರಮೇಶ ಜಾರಕಿಹೊಳಿ ನಡೆಸಲಿರುವ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ನಿರ್ಧಾರ ಹೊರಬೀಳಲಿದೆ ಎಂದು ಎಲ್ಲರೂ ಕಾದಿದ್ದರು.
ಆದರೆ ಈ ಕುರಿತು ಜಾರಕಿಹೊಳಿ ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪದೇ ಪದೆ ಪ್ರಶ್ನೆ ಕೇಳಿದರೂ ಗೋಡೆಯ ಮೇಲೆ ದೀಪವಿಟ್ಟಂತೆ ಅವರು ಮಾತನಾಡಿದರು. ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ ಎಂದು ಒಂದು ಬಾರಿ ಉತ್ತರಿಸಿದ ಅವರು, ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆಯೇ ಆಗಿಲ್ಲ ಎಂದರು ಮತ್ತೊಮ್ಮೆ.
ಲಾಕ್ ಡೌನ್ ಮಾಡಬೇಕೆ ಎಂದು ಮಾಧ್ಯಮದವರನ್ನೇ ಒಮ್ಮೆ ಪ್ರಶ್ನಿಸಿದ ಜಾರಕಿಹೊಳಿ, ಕೊರೋನಾ ದೊಡ್ಡ ರೋಗವೇ ಅಲ್ಲ. ಅದಕ್ಕೆ ಜನರು ಅಂಜಬೇಕಿಲ್ಲ ಎಂದರು. ಗೋಕಾಕದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ್ದೇಕೆ ಎನ್ನುವ ಪ್ರಶ್ನೆಗೆ, ಅದು ಜನರು ಹೇಳಿದರೆಂದು ಮಾಡಿದ್ದೇನೆ. ಆ ಬಗ್ಗೆಯೂ ಚರ್ಚಿಸುತ್ತೇನೆ ಎಂದೂ ಹೇಳಿದರು.
ಸಧ್ಯಕ್ಕಂತೂ ಲಾಕ್ ಡೌನ್ ಜಾರಿ ಸಾಧ್ಯತೆ ಇಲ್ಲ ಎನ್ನುವ ದಾಟಿಯಲ್ಲಿ ಅವರು ಮಾತನಾಡಿದರಾದರೂ ಈ ಬಗ್ಗೆ ಸ್ಪಷ್ಟ ಸಂದೇಶವನ್ನಂತೂ ನೀಡಲೇ ಇಲ್ಲ. ಹಾಗಾಗಿ ಜನರ ಕುತೂಹಲ ಹಾಗೆಯೇ ಉಳಿದುಕೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ