Latest

ಸುಮಲತಾ ಚಿತ್ತ ಕಾಂಗ್ರೆಸ್ ನತ್ತ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ವಿರುದ್ಧ ಸೆಣಸಾಡಿ ಗೆದ್ದಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕಾಂಗ್ರೆಸ್ ಸೇರಲಿದ್ದಾರೆಯೇ?

ಇತ್ತೀಚಿನ ಬೆಳವಣಿಗೆಗಳು ಅಂತಹ ಸಂಶಯಕ್ಕೆ ಎಡೆ ಮಾಡಿಕೊಡುತ್ತಿವೆ. ಬಿಜೆಪಿ ಬೆಂಬಲದಿಂದ ಕಾಂಗ್ರೆಸ್- ಜೆಡಿಎಸ್ ವಿರುದ್ಧ ಚುನಾವಣೆಯಲ್ಲಿ ಸುಮಲತಾ ಹೋರಾಡಿದ್ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜಯ ಸಾಧಿಸಿದ್ದರು. 

ಚುನಾವಣೆಯಲ್ಲಿ ಹಲವಾರು ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಸುಮಲತಾ ಬೆಂಬಲಕ್ಕೆ ನಿಂತಿದ್ದರು. ಬಿಜೆಪಿ ಅಭ್ಯರ್ಥಿ ಕಣ್ಕಿಳಿಸದೆ ಬಹಿರಂಗವಾಗಿ ಬೆಂಬಲ ಘೋಷಿಸಿತ್ತು. ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸುವ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಬೇಕಿದೆ ಎಂದು ಸುಮಲತಾಗೆ ಟಿಕೆಟ್ ಕೊಡಲಾಗದ್ದರ ಕುರಿತು ಅಸಹಾಯಕತೆ ವ್ಯಕ್ತಪಡಿಸಿತ್ತು.

ಈಗ ಬಿಜೆಪಿಗೆ ಸುಮಲತಾ ಅನಿವಾರ್ಯವಲ್ಲ. ಹಾಗಾಗಿ ಅವರಾಗಿಯೇ ಬಿಜೆಪಿ ಸೇರಲು ಬಂದರೆ ಸ್ವಾಗತ. ನಾವಾಗಿ ಆಹ್ವಾನಿಸುವುದಿಲ್ಲಎಂದು ಬಿಜೆಪಿ ಹೇಳಿತ್ತು. ಆದರೆ ಕಾಂಗ್ರೆಸ್ ಗೆ ಸಧ್ಯದ ಪರಿಸ್ಥಿತಿಯಲ್ಲಿ ಒಂದೊಂದು ಸಂಸದರೂ ಮಹತ್ವ. 

ಸುಮಲತಾ ಪತಿ ಅಂಬರೀಶ್ ಕಾಂಗ್ರೆಸ್ ನಲ್ಲಿದ್ದರು. ಕಾಂಗ್ರೆಸ್ ನಿಂದಲೇ ಸಂಸದ, ಶಾಸಕ, ಮಂತ್ರಿ ಸಹ ಆಗಿದ್ದರು. ಹಾಗಾಗಿ ಅವರು ಮೊದಲು ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಕಾಂಗ್ರೆಸ್ ನಿರಾಕರಿಸಿದ ನಂತರ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. 

ಗೆದ್ದ ನಂತರ ಬಿಜೆಪಿ ನಾಯಕರಾದ ಎಸ್.ಎಂ.ಕೃಷ್ಣ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನೂ ಭೇಟಿಯಾಗಿದ್ದರು. 

ಕಾಂಗ್ರೆಸ್ ನ ಹಲವು ನಾಯಕರು ಹಾಕಿರುವ ಫ್ಲೆಕ್ಸ್ ಗಳಲ್ಲಿ ಸುಮಲತಾ ಫೋಟೋ ರಾರಾಜಿಸುತ್ತಿದೆ. ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಸಹ ಶುಭಾಷಯ ಕೋರಿ ಫ್ಲೆಕ್ಸ್ ಹಾಕಿದ್ದಾರೆ. ಚಲುವರಾಯಸ್ವಾಮಿ ಮೊದಲಿನಿಂದಲೂ ಸುಮಲತಾ ಬೆಂಬಲಕ್ಕೆ ನಿಂತಿದ್ದಾರೆ. ಈಚೆಗೆ ಚಲುವರಾಯಸ್ವಾಮಿ ಜನ್ಮದಿನಕ್ಕೂ ಸುಮಲತಾ ಶುಭಾಷಯ ಕೋರಿದ್ದರು.  ಹಲವಾರ ಕಾಂಗ್ರೆಸ್ ನಾಯಕರು ಸುಮಲತಾ ಭೇಟಿಯಾಗುತ್ತಿದ್ದಾರೆ. ಕಾಂಗ್ರೆಸ್ ನಾಯಕರೊಂದಿಗೆ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. 

ತಾವು ಸಧ್ಯ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ. ಹಾಗೊಮ್ಮೆ ಸೇರುವುದಾದರೂ ಕ್ಷೇತ್ರದ ಜನರಅಭಿಪ್ರಾಯ ಪಡೆಯುವುದಾಗಿ ಸುಮಲತಾ ಹೇಳಿದ್ದಾರೆ. ಆದರೂ ಈಚಿನ ಬೆಳವಣಿಗೆಗಳು ಅಂತಹ ಸಂಶಯ ಹುಟ್ಟುಹಾಕಿದೆ. 

ಒಟ್ಟಾರೆ, ರಾಷ್ಟ್ರದಲ್ಲೇ ಪಕ್ಷೇತರರಾಗಿ ಗೆದ್ದು ಬಂದಿರುವ ಏಕೈಕ ಸಂಸದೆ ಸುಮಲತಾ ಮುಂದಿನ ನಡೆ ಈಗ ಕುತೂಹಲ ಮೂಡಿಸಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button