Kannada NewsKarnataka NewsLatest

ಅಭಿವೃದ್ಧಿಯ ಮೂಲಕ ಜಿಲ್ಲೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇನೆ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಉಡುಪಿ: ಅಭಿವೃದ್ಧಿಯ ಮೂಲಕ ಉಡುಪಿ ಜಿಲ್ಲೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳಕರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಉಡುಪಿ ಜಿಲ್ಲೆ ಅತ್ಯಂತ ಬುದ್ದಿವಂತರ ಜಿಲ್ಲೆ ಎನ್ನುವ ಹೆಸರು ಪಡೆದಿದೆ. ಇಲ್ಲಿಯ ಉಸ್ತುವಾರಿ ಸಚಿವೆಯಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ಲಭ್ಯವಾಗಿದೆ. ಕಡಲು ಕೊರೆತ, ಕಾಲು ಸಂಕ ಸೇರಿದಂತೆ ಇಲ್ಲಿನ ಹಲವಾರು ವಿಶಿಷ್ಟ ಸಮಸ್ಯೆಗಳು, ಬೇಡಿಕೆಗಳು ನನ್ನ ಗಮನದಲ್ಲಿವೆ. ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾನು ಎಲ್ಲ ರೀತಿಯ ಕ್ರಮ ವಹಿಸುತ್ತೇನೆ ಎಂದು ಅವರು ತಿಳಿಸಿದರು.

ಅವರ ಭಾಷಣದ ಪೂರ್ಣಪಾಠ ಇಲ್ಲಿದೆ:

​ಎಲ್ಲರಿಗೂ ನಮಸ್ಕಾರ.. 

​ವೇದಿಕೆ ಮೇಲಿರುವ ಎಲ್ಲಾ ಗಣ್ಯರೆ, ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳೇ, ಅಧಿಕಾರಿಗಳೇ, ನಾಗರಿಕ ಬಂಧುಗಳೇ, ವಿದ್ಯಾರ್ಥಿ-ವಿದ್ಯಾರ್ಥಿನಿಯರೆ ಹಾಗೂ ಮಾಧ್ಯಮದ ಸ್ನೇಹಿತರೇ,

ಉಡುಪಿ ಜಿಲ್ಲೆಯ ಸಮಸ್ತ ನಾಗರಿಕರಿಗೆ, ಜನಪ್ರನಿಧಿಗಳು, ಅಧಿಕಾರಿ​ಗಳು – ಸಿಬ್ಬಂದಿ, ನನ್ನ ನೆಚ್ಚಿನ ವಿದ್ಯಾರ್ಥಿಗಳು ಹಾಗೂ ಮಾಧ್ಯಮ ಮಿತ್ರರಿಗೆ 7​7ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. 

ಇಂದು ಸುದಿನ.. ನಮೆಲ್ಲರ ಪಾಲಿಗೆ ಸಂತಸದ ದಿನ.‌ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ​ನ್ನು ಸ್ಮರಿಸುವ ದಿನ. ​ನಾವು ನಡೆದು ಬಂದ ಹಾದಿಯ​ನ್ನು ಇಂದು ನಾವು ಮೆಲುಕು ಹಾಕಿಕೊಂಡು, ಮುಂದೆ ಸಾಗಬೇಕಾದ ದಿನ. 

​ದೇಶಾದ್ಯಂತ ಇಂದು ಆಚರಿಸುತ್ತಿರುವ 77 ನೇ ಸ್ವಾತಂತ್ರ್ಯ ಹಬ್ಬದ ಈ ಶುಭ ಸಂದರ್ಭದಲ್ಲಿ, ಅತ್ಯಮೂಲ್ಯವಾದ ಈ ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ದೀಕ್ಷೆ ತೊಡುವ ದಿನ ಕೂಡ ಇದಾಗಿದೆ. 

ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ, ನಮ್ಮ ದೇಶದ ಸ್ವಾತಂತ್ರ್ಯ ಎಂದರೆ ತ್ಯಾಗ, ಬಲಿದಾನಗಳ ಫಲ. ಇಡೀ ಭಾರತವೇ ಬ್ರಿಟಿಷರ ವಿರುದ್ಧ ಹೋರಾಡಿ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ.

ನಾವೆಲ್ಲಾ ಇಂದು ದೇಶದ ಉಜ್ವಲ ಭವಿಷ್ಯಕ್ಕಾಗಿ ಕನಸು ಕಟ್ಟಿಕೊಳ್ಳಲು ಇಲ್ಲಿ ಸೇರಿದ್ದೇವೆ. ನಮ್ಮ ಕನಸುಗಳ ಜೊತೆ ಜೊತೆಗೆ ನಮ್ಮ ಮಹಾತ್ಮರ ಕನಸುಗಳು, ಆಶಯಗಳನ್ನ ನನಸಾಗಿಸಲು ನಾವೆಲ್ಲ ಇಂದು ಸಂಕಲ್ಪ ಮಾ​ಡೋಣ.  

ಮ​ಹಾತ್ಮಾ ಗಾಂಧಿಜೀ, ಬಾಲಗಂಗಾಧರ್ ತಿಲಕ್, ಗೋಪಾಲಕೃಷ್ಣ ಗೋಖಲೆ, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು, ಸರ್ದಾರ್ ವಲ್ಲ​ಬ ಬಾಯ್ ಪಟೇಲ್, ಭಗತ್ ಸಿಂಗ್, ಮೌಲಾನಾ ಅ​ಬುಲ್ ಕಲಾಂ, ಚಂದ್ರಶೇಖರ್ ಆಜಾದ್ ಸೇರಿದಂತೆ ಸ್ವಾತಂತ್ರ್ಯ ತಂದುಕೊಟ್ಟ ಎಲ್ಲರ ತ್ಯಾಗ, ದೇಶಪ್ರೇಮವನ್ನ ಪ್ರತಿಯೊಬ್ಬ ಭಾರತೀಯನು ಸ್ಮರಿಸಬೇಕು.‌

ಸ್ವಾತಂತ್ರ್ಯ ಹೋರಾಟದಲ್ಲಿ ಉಡುಪಿ ಜಿಲ್ಲೆಯ ಪಾತ್ರ ಅವಿಸ್ಮರಣೀಯ​ ಎನ್ನುವುದನ್ನು ನಾನು ತಿಳಿದಿದ್ದೇನೆ. ಅಜ್ಜರಕಾಡು ಉಡುಪಿಯ ಸ್ವಾತಂತ್ರ್ಯ​ ಹೋರಾಟದ ಸಭೆಗಳಿಗೆ ಆಸರೆಯಾಗಿದ್ದು, ಇಲ್ಲಿ ಮಹಾತ್ಮಾ ಗಾಂಧೀಜಿ ಅವರು ನಡೆಸಿದ ಸಭೆ ಪ್ರಜಾಪ್ರಭುತ್ವದ ಆಶಯವನ್ನು​ ಜಾಗೃತಗೊಳಿಸಿ​ತು. 

ಆಂಗ್ಲರ ವಿರುದ್ಧ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಹಲವು ಹೋರಾಟಗಾರರ ತ್ಯಾಗ​ ನೆನಪಿಸಿಕೊಳ್ಳುವುದು ಅಗತ್ಯವಾಗಿದ್ದು, ಅವರಲ್ಲಿ ಎಸ್.ಯು.ಪಣಿಯಾಡಿ, ಹಿರಿಯಡ್ಕ ರಾಮರಾಯ ಮಲ್ಯ, ಸಾಂತ್ಯಾರು​ ಅನಂತಪದ್ಮನಾಭ ಭಟ್, ಕುಬೇರ ಪಾಂಡುರಂಗ ರಾವ್, ತೋನ್ಸೆ ಮುಕುಂದ ಪೈ, ಆರ್.ಎಸ್.ಶೆಣೈ, ಎಂ.ವಿಠಲ ಕಾಮತ್,​ ಎ.ವಿ.ಬಾಳಿಗಾ, ಸತ್ಯಮಿತ್ರ ಬಂಗೇರಾ, ಹಾಜಿ ಅಬ್ದುಲ್ಲಾ ಸಾಹೇಬ್ ಸೇರಿದಂತೆ ಮೊದಲಾದ ಹೋರಾಟಗಾರರನ್ನು ನಾವು ಈ​ ದಿನ ಸ್ಮರಿಸಬೇಕು.


ಉಡುಪಿ ಜಿಲ್ಲೆ ಸ್ಥಾಪನೆಯಾಗಿ 25 ವರ್ಷ ಕಳೆದಿದೆ. ಈ ನಮ್ಮ ಜಿಲ್ಲೆಯ ರಮಣೀಯ ಪ್ರಕೃತಿ ಸೌಂದರ್ಯ, ನದಿಗಳು,​ ಕಡಲ ತೀರಗಳು, ಶಿಕ್ಷಣ ಸಂಸ್ಥೆ, ರಾಜ್ಯ, ದೇಶ ಹಾಗೂ ವಿದೇಶಗಳಿಂದಲೂ ಸಹ ಗುರುತಿಸಿಕೊಂಡಿದೆ. ಜಿಲ್ಲೆಯು ಕಡಿಮೆ​ ಅವಧಿಯಲ್ಲಿಯೇ ಹೆಚ್ಚಿನ ಅಭಿವೃದ್ಧಿ ಕಂಡಿದೆ. ಮತ್ತಷ್ಟು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.​ 

​ಸ್ವಾತಂತ್ರ್ಯ ಹೋರಾಟದಲ್ಲಿ ಅವಿಭಜಿತ ದ​ಕ್ಷಿಣ ಕನ್ನಡ ಜಿಲ್ಲೆ ಕೂಡುಗೆಯೂ ಸಾಕಷ್ಟಿದೆ. ಮಹಾತ್ಮಾ ಗಾಂಧಿಜೀ ಅವರು 1920, 1927, 1934 ರಲ್ಲಿ ಇಲ್ಲಿಗೆ ಭೇಟಿ ಕೊಟ್ಟಿದ್ದನ್ನ ಸ್ಮರಿಸಬಹುದು. 1934 ರಲ್ಲಿ ಗಾಂಧಿಜೀ ಅವರು ಯಾತ್ರೆಯಲ್ಲಿ ಬರುತ್ತಿದ್ದಾಗ ಇಲ್ಲಿಯ ಜನರು, ವಿಶೇಷವಾಗಿ ಮಹಿಳೆಯರು ಬಂಗಾರದ ಆಭರಣಗಳನ್ನ ಸ್ವಾತಂತ್ರ್ಯ ಹೋರಾಟಕ್ಕಾಗಿ ಗಾಂಧಿಜೀ ಅವರಿಗೆ ನೀಡಿದ್ದು, ನಮ್ಮೆಲ್ಲರನ್ನ ಪುಳಕಿತಗೊಳಿಸುವಂಥದ್ದು. ವಿಶೇಷವಾಗಿ ಉಡುಪಿಯ ಮೈದಾನದಲ್ಲಿ ಗಾಂಧಿಜೀ ಅವರಿಗೆ ನಿರುಪಮ ಎಂಬ 6 ವರ್ಷದ ಪುಟ್ಟ ಬಾಲಕಿ ತನ್ನ ಬಂಗಾರದ ಸರವನ್ನ ನೀಡಿದ್ದ ಭಾವನಾತ್ಮಕ ಪ್ರಸಂಗವನ್ನ ಯಾರೂ ಮರೆಯಲು ಸಾಧ್ಯವಿಲ್ಲ. 

ಆತ್ಮೀಯರೇ​, ಅನೇಕ ಮಹಾತ್ಮರು ತಮ್ಮ ಬದುಕನ್ನೇ ಜೈಲುವಾಸದಲ್ಲಿ ಕಳೆದು, ಜೀವ ತ್ಯಾಗ ಮಾಡಿ ಗಳಿಸಿದ ಸ್ವಾತಂತ್ರ್ಯವನ್ನು, ಉಳಿಸಿಕೊಂಡು ಹೋಗುವ ದೇಶಪ್ರೇಮವನ್ನ ನಾವು ಬೆಳೆಸಿಕೊಳ್ಳಬೇಕು.​  ಪ್ರಾರಂಭದ 6 ದಶಕಗಳನ್ನು ಮಹಾತ್ಮಾ ಗಾಂಧೀಜಿಯವರ ನಾಯಕತ್ವದಲ್ಲಿ​ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಕಾಂಗ್ರೇಸ್ ಪಕ್ಷ ಮುಂದಿನ ದಿನಗಳಲ್ಲಿ ಸದೃಢ ಭಾರತ ನಿರ್ಮಾಣದಲ್ಲಿ​ ತೊಡಗಿಸಿಕೊಂಡಿತು.​ 

ಕೋಮು ಸಂಘರ್ಷಕ್ಕೆ ಕಾರಣವಾಗುವ ಜಾತಿ ಧರ್ಮ ಇವುಗಳನ್ನು ಮೀರಿ ನಿಂತು, ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕಿದೆ. ಹಾಗಾದಾಗ ಮಾತ್ರ ಭಾರತ ಸ್ವಾತಂತ್ರ್ಯದ 76 ವರ್ಷಗಳ ಕಾಲಘಟ್ಟದಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯವಾಗುತ್ತದೆ.

ಸಮಾಜದಲ್ಲಿ ಎಲ್ಲಾ ಧರ್ಮೀಯರು ಸಹೋದರರಂತೆ ಸಾಮರಸ್ಯದ ಶಾಂತಿಯುತ ಬದುಕನ್ನು ಸಾಗಿಸಲು ನಾವು ಪ್ರಯತ್ನಿಸಬೇಕು. ಶಾಂತಿ ನೆಮ್ಮದಿಗೆ ಭಂಗ ತರುವಂತಹ ಯಾವುದೇ ಕೆಟ್ಟ ಶಕ್ತಿಗಳನ್ನು, ಪ್ರಯತ್ನಗಳನ್ನು ವಿಫಲಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.


ಇಡೀ ವಿಶ್ವವೇ ಒಂದು ಹಳ್ಳಿಯಾಗಿ ಹೊರಹೊಮ್ಮುತ್ತಿರುವ ಈ ಸಮಯದಲ್ಲಿ ನಮ್ಮ ರಾಷ್ಟ್ರವೂ ಕೂಡ ಹಿಂದೆ ಬೀಳದೆ ಅಭಿವೃದ್ಧಿ ಹೊಂದಿದ ರಾಷ್ಟಗಳೊಂದಿಗೆ ಸರಿಸಮಾನ ತಂತ್ರಜ್ಞಾನದ ಮೂಲಕ ಕೃಷಿ, ಶಿಕ್ಷಣ, ಆರೋಗ್ಯ ಸೇವೆ, ಬಾಹ್ಯಾಕಾಶ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಯಶಸ್ಸಿನ ದಾರಿಯಲ್ಲಿ ದಾಪುಗಾಲು ಹಾಕುವ ಕಡೆ ನಡೆದಿದೆ.

ರಾಜ್ಯದಲ್ಲಿ ಇಂದು ಜನಪರವಾಗಿರುವ ಸರ್ಕಾರವಿದೆ. ಸಮೃದ್ದ ಕರ್ನಾಟಕ ನಿರ್ಮಾಣದ ಆಶಯದೊಂದಿಗೆ ನಾಡಿನ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದೆ. ನಮ್ಮ ಸರ್ಕಾರ ಸಂವಿಧಾನ​ದ ಆಶಯಗಳಂತೆ ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಮೌಲ್ಯಗಳ ಹಾದಿಯಲ್ಲಿ ಕೆಲಸ ಮಾಡಲಿದೆ. 

ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ, ರೈತರ ಬೆಳೆಗೆ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ ಹಾಗೂ ಸಮಾನ ಅವಕಾಶಗಳ ಸೃಜನೆ ಮಾಡುವುದು ನಮ್ಮ ಧ್ಯೇಯವಾಗಿದೆ.


 ನಮ್ಮ ಸರ್ಕಾರ ಬಡವರ, ದುರ್ಬಲ ವರ್ಗದವರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಭೂ ರಹಿತ ಕೃಷಿ ಕಾರ್ಮಿಕರು ಹಾಗೂ ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಮೂಲಕ ಎಲ್ಲರ ಕ್ಷೇಮ ಅಭಿವೃದ್ಧಿಯನ್ನು ಖಾತರಿಪಡಿಸಲು ಬದ್ಧವಾಗಿದೆ.


· ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕೊಟ್ಟ 5 ಗ್ಯಾರಂಟಿಗಳ ಭರವಸೆಯನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

· ಮೊದಲಿಗೆ ಜಾರಿಗೆ ತಂದ, ರಾಜ್ಯದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುವ ಶಕ್ತಿ ಯೋಜನೆ ಮೂಲಕ ಮಹಿಳೆಯರು ರಾಜ್ಯಾದ್ಯಂತ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಯೋಜನೆಗೆ ಅಭೂತಪೂರ್ವ ಬೆಂಬಲ ದೊರೆತಿದ್ದು, ಇದುವರೆಗೆ ರಾಜ್ಯದ 30 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 11,14,487 ಮಹಿಳೆಯರು ಪ್ರಯಾಣ ಮಾಡಿದ್ದು 4.10 ಕೋಟಿ ವೆಚ್ಚ ಮಾಡಲಾಗಿದೆ.


· ಹಸಿವು ಮುಕ್ತ ಕರ್ನಾಟಕದ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯಡಿ ರಾಜ್ಯದ 44.80 ಲಕ್ಷ ಅಂತ್ಯೋದಯ ಹಾಗೂ 3.97 ಕೋಟಿ ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಆಹಾರ ಧಾನ್ಯ ವಿತರಿಸಲು ನಿರ್ಧರಿಸಿದ್ದು, ಇದಕ್ಕಾಗಿ ಪ್ರಸಕ್ತ ವರ್ಷದ ಬಜೆಟ್ ನಲ್ಲಿ 10 ಸಾವಿರ ಕೋಟಿ ರೂ. ನಿಗಧಿಪಡಿಸಲಾಗಿದೆ. 

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಅಂತ್ಯೋದಯ 28,434 ಹಾಗೂ 1,51,206 ಆದ್ಯತಾ ಪಡಿತರ ಚೀಟಿ ಇದ್ದು, 6,83,090 ಸದಸ್ಯರಿಗೆ ಲಾಭ ಸಿಗಲಿದೆ. ಹಾಲಿ ಅಂತ್ಯೋದಯ ಕಾರ್ಡಿಗೆ 35 ಕೆಜಿ ಅಕ್ಕಿ ಹಾಗೂ ಆದ್ಯತಾ ಪಡಿತರ ಚೀಟಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ವಿತರಿಸುತ್ತಿದ್ದು, ಇದರ ಜೊತೆಗೆ  ನೇರ ನಗದು ವರ್ಗಾವಣೆಯಡಿ ಜಿಲ್ಲೆಯ ಫಲಾನುಭವಿಗಳಿಗೆ 11.29 ಕೋಟಿ ಅನುದಾನವನ್ನು ರಾಜ್ಯ ಸರ್ಕಾರದಿಂದ ಪಾವತಿಸಲಾಗಿದೆ.

 · ಗೃಹಲಕ್ಷಿ ಯೋಜನೆ ನಮ್ಮ ರಾಜ್ಯದ ಮಹಿಳೆಯರಿಗೆ ಬದುಕಿನ ನಿರ್ವಹಣೆಯನ್ನು ಇನ್ನಷ್ಟು ಸುಗಮಗೊಳಿಸಲು ಮತ್ತು ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಮಹಿಳೆಯರ ಖಾತೆಗೆ ನೇರವಾಗಿ ಮಾಸಿಕ 2,000 ರೂಪಾಯಿಗಳನ್ನು, ವಾರ್ಷಿಕ 24 ಸಾವಿರ ರೂ.ಗಳನ್ನು ವರ್ಗಾಯಿಸಲಾಗುವುದು. ಈ ಯೋಜನೆಗಾಗಿ ವಾರ್ಷಿಕ ಸುಮಾರು 36,000 ಕೋಟಿ ರೂ. ವೆಚ್ಚವಾಗಲಿದ್ದು, ಇದು ಇಡೀ ದೇಶದಲ್ಲಿಯೇ ಅತೀ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಲಿದೆ. ಈಗಾಗಲೇ ರಾಜ್ಯದಲ್ಲಿ 1.07 ಕೋಟಿ ಮಹಿಳೆಯರು ಆನ್‌ಲೈನ್ ಮೂಲಕ ನೋಂದಾಯಿಸಿದ್ದಾರೆ. ಉಡುಪಿ ಜಿಲ್ಲೆಯ ಅರ್ಹ 2,56,850 ಕುಟುಂಬಗಳ ಪೈಕಿ​ ಇದುವರೆಗೆ 2 ಲಕ್ಷಕ್ಕಿಂತ ಹೆಚ್ಚು ನೋಂದಣಿ ಮಾಡಿಕೊಂಡಿದ್ದು ಶೇಕಡ 73 ಕ್ಕಿಂತ ಹೆಚ್ಚು ಸಾಧನೆ ಆಗಿದೆ. 


 ·   ಗೃಹಜ್ಯೋತಿ ಯೋಜನೆಯಡಿ ನೋಂದಣಿ ಪ್ರಕ್ರಿಯೆ ಈಗಾಗಲೇ ಅನುಷ್ಠಾನವಾಗಿದ್ದು, ಜುಲೈ 1 ರಿಂದ ಬಳಕೆಯಾಗುವ ವಿದ್ಯುತ್ತಿನ ಬಿಲ್ಲಿಗೆ ಇದು ಅನ್ವಯವಾಗಿದೆ. ವಿದ್ಯುಚ್ಛಕ್ತಿಯ ಸದ್ಬಳಕೆಯ ಕುರಿತು ಜನರಲ್ಲಿ ಜಾಗೃತಿ ಇರಬೇಕೆಂಬ ಜವಾಬ್ದಾರಿಯೊಂದಿಗೆ ಈ ಯೋಜನೆಯ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಉಚಿತ ವಿದ್ಯುತ್ ಸೌಲಭ್ಯದಿಂದ ಜನರ ಮನೆ -ಮನಗಳಲ್ಲಿ ನೆಮ್ಮದಿಯ ಬೆಳಕು ತುಂಬುವ ಪ್ರಯತ್ನ ನಮ್ಮ ಸರ್ಕಾರದ್ದಾಗಿದೆ.  ಗೃಹಜ್ಯೋತಿ ಯೋಜನೆಯಡಿ  ಉಡುಪಿ ಜಿಲ್ಲೆಯಲ್ಲಿನ 3,15,692 ಅರ್ಹ ವಿದ್ಯುತ್ ಬಳಕೆಯ ಗ್ರಾಹಕರಲ್ಲಿ ಇದುವರೆಗೆ 2,56,549 ಮಂದಿಗೆ ಉಚಿತ ಬಿಲ್‌ನ ದೃಢೀಕರಣ ನೀಡಲಾಗಿದ್ದು, ಯೋಜನೆಯ​ ನೊಂದಣಿ ಕೊನೆಯ ದಿನಾಂಕ ಇರುವುದಿಲ್ಲ.


· ರಾಜ್ಯದಲ್ಲಿ ಶಿಕ್ಷಣ ಪಡೆದು ಉದ್ಯೋಗ ಹಿಡಿದು ಜೀವನದಲ್ಲಿ ಉನ್ನತಿಯನ್ನು ಸಾಧಿಸುವ ಕನಸು ಹೊಂದಿರುವ ಯುವ ಜನರು, ನಿರೀಕ್ಷೆಯಂತೆ ಉದ್ಯೋಗ ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಆಶಯದೊಂದಿಗೆ ನಮ್ಮ ಪ್ರಣಾಳಿಕೆಯ ಐದನೇ ಗ್ಯಾರಂಟಿ ಯೋಜನೆಯಾದ ಪದವೀಧರರು ಮತ್ತು ಡಿಪ್ಲೋಮಾ ಹೊಂದಿರುವವರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂಪಾಯಿಗಳನ್ನು ಹಾಗೂ ಡಿಪ್ಲೋಮಾ ನಿರುದ್ಯೋಗಿಗಳಿಗೆ ಮಾಸಿಕ 1500 ರೂಪಾಯಿಗಳನ್ನು ನೀಡಲಾಗುವುದು.

​ · ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನ ಮಾನ್ಯ ಮುಖ್ಯಮಂತ್ರಿಯವರು ಈಗಾಗಲೇ ತೋರ್ಪಡಿಸಿದ್ದಾರೆ. 35​,410 ಕೋಟಿ ರೂ ಗಳನ್ನ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ 2023-24 ರ ಬಜೆಟ್ ನಲ್ಲಿ ಮೀಸಲಿಟ್ಟಿರುವುದೇ ಇದಕ್ಕೆ ಸಾಕ್ಷಿ. 

​ ·​ ಐದು ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಯೋಜನೆಗಳು ಕುಂಠಿತಗೊಳ್ಳದಂತೆ ಬಜೆಟ್ ನಲ್ಲಿ ನೋಡಿಕೊಳ್ಳಲಾಗಿದೆ. ಜನರ ಮೇಲೆ ಯಾವುದೇ ತೆರಿಗೆ ಭಾರ ಹೊರಿಸದೇ ಅಚ್ವುಕಟ್ಟಾಗಿ ಹಣ ಹೊಂದಿಸಲು ಕ್ರಮ ಕೈಗೊಂಡಿದ್ದಾರೆ. 

​ ·​ ಪ್ರತಿ ಬಾರಿಯಂತೆ ಈ ಬಾರಿಯೂ ನಮ್ಮ ಸರ್ಕಾರ ಮಹಿಳೆಯರು, ಹಿಂದುಳಿದ ವರ್ಗದವರು, ಶ್ರಮಿಕರು ಸೇರಿದಂತೆ ಎಲ್ಲ ವರ್ಗದ ಬಡವರಿಗೆ ಭದ್ರತೆಯನ್ನ ಒದಗಿಸುವತ್ತ ಹೆಚ್ವು ಗಮನ ಹರಿಸಲಾಗಿದೆ. ಸರ್ವಸಮ್ಮತವಾದ ಬಜೆಟ್ ಮಂಡಿಸಲಾಗಿದೆ. 

​ ·  ಯೋಜನೆಗಾಗಿ ಎಷ್ಟು ಅನುದಾನವನ್ನು ಖರ್ಚು ಮಾಡುತ್ತೇವೆ ಎನ್ನುವುದಕ್ಕಿಂತ ಯಾರಿಗಾಗಿ ಆ ಹಣವನ್ನು ವಿನಿಯೋಗ ಮಾಡುತ್ತಿದ್ದೇವೆ ಎನ್ನುವುದು ಮುಖ್ಯ.

​ · ನಮ್ಮ ಸರ್ಕಾರವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚಿನ ಮಹತ್ವ ನೀಡಲಿದೆ. ನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹರಡುವ, ಸೌಹಾರ್ದ ಕೆಡಿಸುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ ಸಮಾಜದಲ್ಲಿ ಹದಗೆಟ್ಟಿದ್ದ ಸಾಮರಸ್ಯದ ವಾತಾವರಣವನ್ನು ಮರುನಿರ್ಮಿಸಲು ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ.

​ · ರೈತರ ಆದಾಯವನ್ನು ಹೆಚ್ಚಿಸಲು ಮತ್ತು ತೋಟಗಾರಿಕಾ ವಲಯದಲ್ಲಿನ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸಲು ತೆಂಗು, ಅಡಿಕೆ, ದ್ರಾಕ್ಷಿ, ದಾಳಿಂಬೆ, ಮಾವು ಮತ್ತಿತರ ಹಣ್ಣು, ತರಕಾರಿ, ಹೂವುಗಳು ಸೇರಿದಂತೆ ತೋಟಗಾರಿಕಾ ಬೆಳೆಗಳ ಉತ್ಪಾದನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

​ 

 · ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿರುವ ಅಲ್ಪಾವಧಿ ಸಾಲದ ಮಿತಿಯನ್ನು ಮೂರು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಶೇಕಡ 3 ರ ಬಡ್ಡಿದರದಲ್ಲಿ ನೀಡುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷ ರೂಪಾಯಿಗಳಿಂದ 15 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

 · ​ಮೀನುಗಾರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು 50,000 ರೂಪಾಯಿಗಳಿಂದ ಮೂರು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು ಒಂದೂವರೆ ಲಕ್ಷ ಕಿಲೋ ಲೀಟರ್‌ನಿಂದ ಎರಡು ಲಕ್ಷ ಕಿಲೋ ಲೀಟರ್‌ವರೆಗೆ ಹೆಚ್ಚಿಸಲಾಗಿದೆ. ಇದರಿಂದ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂಪಾಯಿಗಳಷ್ಟು ನೆರವಾಗಲಿದೆ. ಮೀನುಗಾರಿಕಾ ದೋಣಿಗಳಲ್ಲಿನ ಸೀಮೆಎಣ್ಣೆ ಇಂಜಿನ್‌ಗಳನ್ನು ಪೆಟ್ರೋಲ್/ ಡೀಸೆಲ್ ಇಂಜಿನ್‌ಗಳಾಗಿ ಬಲಾಯಿಸಲು ತಲಾ 50,000 ರೂಪಾಯಿ ಸಹಾಯಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 4,000 ಸೀಮೆಎಣ್ಣೆ ಇಂಜಿನ್‌ಗಳ ಬದಲಾವಣೆಗೆ 20 ಕೋಟಿ ರೂಪಾಯಿ ಸಹಾಯಧನ ಒದಗಿಸಲಾಗುತ್ತಿದೆ.

​ · ಹೆಚ್ಚಿನ ಬೇಡಿಕೆ ಇರುವ ಮೀನಿನ ಮರಿಗಳನ್ನ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲು ಒಳನಾಡು ಮೀನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಪಿಕ್ ಅಪ್ ವ್ಯಾನ್ ಖರೀದಿಸಲು 7 ಲಕ್ಷ ರೂ. ವರೆಗಿನ ಸಾಲವನ್ನು ಶೇ 4 ರ ಬಡ್ಡಿ ದರದಲ್ಲಿ ನೀಡುವ ಪ್ರಸ್ತಾಪ ರೈತರಿಗೆ ನೆರವಾಗಲಿದೆ. 

​ · ರಾಜ್ಯದ ಕಿರು ಬಂದರುಗಳ ವಾಣಿಜ್ಯೀಕರಣ ಮತ್ತು ಸುಸ್ಥಿರ ಕಾರ್ಯನಿರ್ವಹಣೆಗೆ ವಿಸ್ತೃತ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು. ನೈಸರ್ಗಿಕ ಮೀನುಗಾರಿಕಾ ಬಂದರುಗಳನ್ನು ಸುಸ್ಥಿತಿಯಲ್ಲಿಡಲು ಸಮಗ್ರ ಕರಾವಳಿ ನಿರ್ವಹಣಾ ಸಮಿತಿಯ ಸಬಲೀಕರಣ ಮಾಡಲಾಗುವುದು.

​​ · ಜಲಸಂಪನ್ಮೂಲ ಇಲಾಖೆಯಡಿ ಮಂದಗತಿಯಲ್ಲಿ ಸಾಗುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ​ ವಹಿಸುವುದರೊಂದಿಗೆ ಪ್ರಸಕ್ತ ಸಾಲಿನಲ್ಲಿ 940 ಕೋಟಿ ರೂಪಾಯಿ ಬಾಕಿ ಮೊತ್ತದ 10 ನೀರಾವರಿ ಯೋಜನೆಗಳನ್ನು​ ಪೂರ್ಣಗೊಳಿಸಿ, ಸುಮಾರು 25,948 ಹೆಕ್ಟೇರ್ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗುವುದು. 

​ · ಕೆರೆಗಳ ಸುತ್ತ​ ಜೀವಪರಿಸರವನ್ನು ಉಳಿಸಿಕೊಂಡು, ಅವುಗಳ ಪುನರುಜ್ಜೀವನಗೊಳಿಸುವುದಕ್ಕಾಗಿ ಕೆರೆಗಳ ಬಳಕೆದಾರರ ಸಂಘಗಳನ್ನು​ ಬಲಿಷ್ಠಗೊಳಿಸಿ, ಕೆರೆ ಅಭಿವೃದ್ಧಿಗೆ ಪಾಲುದಾರರನ್ನಾಗಿ ಮಾಡಿ, ಜಲಬಳಕೆ ಮಾಡಲು ಅರ್ಥಪೂರ್ಣ ಕ್ರಿಯಾಯೋಜನೆ​ ಸಿದ್ಧಪಡಿಸಲಾಗುವುದು.

​ · ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲು ಶಾಲಾ ಕೊಠಡಿಗಳಿಗೆ 310 ಕೋಟಿ ರೂಪಾಯಿಗಳು ಹಾಗೂ ಪದವಿ ಪೂರ್ವ ಕಾಲೇಜು ಕೊಠಡಿಗಳಿಗೆ 240 ಕೋಟಿ ರೂಪಾಯಿ ಸೇರಿದಂತೆ ಒಟ್ಟು 550 ಕೋಟಿ ರೂಪಾಯಿಗಳ ವೆಚ್ಚದಲ್ಲಿ 8,311 ಕೊಠಡಿಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ​ ಪೂರ್ಣಗೊಳಿಸಲಾಗುವುದು.


· ವಿದ್ಯಾರ್ಥಿಗಳ ಶಿಕ್ಷಣ ಮತ್ತು ಆರೋಗ್ಯದ ದೃ​ಷ್ಟಿಯಿಂದ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ಕಡಿಮೆ​ ಶೌಚಾಲಯಗಳಿರುವ 5,775 ಶಾಲೆಗಳಲ್ಲಿ ಹಾಗೂ 150 ಕಾಲೇಜುಗಳಲ್ಲಿ ಶೌಚಾಲಯ ಘಟಕಗಳನ್ನು ನರೇಗಾ​ ಯೋಜನೆಯ ಸಂಯೋಜನೆಯೊಂದಿಗೆ 200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.

​ · ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಬಡವರಿಗೆ ಉಚಿತ ಡಯಾಲಿಸಿಸ್ ಸೌಲಭ್ಯ ಒದಗಿಸಲು ಕ್ರಮ​ ಕೈಗೊಳ್ಳಲಾಗಿತ್ತು. ಇದೀಗ ಏಕಬಳಕೆಯ ಡಯಾಲೈಸರ್‌ಗಳನ್ನು ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ​ ಅಳವಡಿಸುವ ಮೂಲಕ ಸೇವೆಯ ಗುಣಮಟ್ಟವನ್ನು ಸುಧಾರಿಸಲಾಗುವುದು.

​ · ರಾಜ್ಯದಲ್ಲಿ ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರು ಮತ್ತು ಸಂತಾನೋತ್ಪತಿ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ನಿವಾರಿಸಲು ಸಮಗ್ರವಾದ ಪರೀಕ್ಷೆ, ಚಿಕಿತ್ಸೆ, ಅರಿವು ಮೂಡಿಸುವಿಕೆ ಮತ್ತು ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ಬಲವರ್ಧನೆಗೆ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಇದಕ್ಕಾಗಿ 25 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ.

 · ನ್ಯೂನ್ಯತೆಗಳಿಂದ ಕೂಡಿದ್ದ ಪೌಷ್ಠಿಕ ಆಹಾರ ವಿತರಣೆ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ಮೂಲಕ ಯೋಜನೆ ಸಾರ್ಥಕವಾಗುವಂತೆ ಮಾಡಲು ಈಗಾಗಲೆ ನಮ್ಮ ಸರಕಾರ ಕ್ರಮ ತೆಗೆದುಕೊಂಡಿದೆ.

​  

​ · ಮಹಿಳಾ ಉದ್ಯಮಿಗಳು ಆತಿಥ್ಯ, ಆರೈಕೆ ಮತ್ತು ಪ್ರವಾಸೋದ್ಯಮದಂತಹ ಸೇವಾ ವಲಯದಲ್ಲಿ ಹೆಚ್ಚಿನ ಅವಕಾಶ ಪಡೆಯುತ್ತಿದ್ದಾರೆ. ಆದ್ದರಿಂದ, ಸೇವಾ ವಲಯದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಶೇ. 4 ರ ಬಡ್ಡಿ ದರದಲ್ಲಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಕೋಟಿ ರೂಪಾಯಿಗಳಿಂದ ಐದು ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

· ರಾಜ್ಯದಲ್ಲಿನ ಆಸಿಡ್ ದಾಳಿ ಸಂತ್ರಸ್ಥರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸ್ವಯಂ​ ಉದ್ಯೋಗಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಐದು ಲಕ್ಷ ರೂಪಾಯಿಗಳವರೆಗೆ ಬಡ್ಡಿ​ ರಹಿತ ಸಾಲ ಸೌಲಭ್ಯ ಒದಗಿಸಲು ಎರಡು ಕೋಟಿ ರೂಪಾಯಿ ಅನುದಾನ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ​ ಮೂಲಕ ವಸತಿ ಸೌಲಭ್ಯವನ್ನು ಒದಗಿಸಲಾಗುವುದು.

​ · ಸಮಾಜದಲ್ಲಿ ಹಲವು ಪೀಳಿಗೆಯಿಂದ ತುಳಿತಕ್ಕೊಳಗಾದ, ಅವಕಾಶ ವಂಚಿತರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಅಭ್ಯುದಯಕ್ಕೆ ನಮ್ಮ ಸರ್ಕಾರದ ಬದ್ಧತೆ ಪ್ರಶ್ನಾತೀತ.​ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮ, 2013 ನ್ನು ಜಾರಿಗೆ ತಂದ ಶ್ರೇಯ ನಮ್ಮ ಸರ್ಕಾರದ್ದಾಗಿದೆ.

​ · ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಹಾಗೂ ​6 ವರ್ಷದ ಒಳಗಿನ ಮಕ್ಕಳ ಆರೋಗ್ಯ,​ ಪೌಷ್ಠಿಕತೆ ಮತ್ತು ಸುರಕ್ಷತೆಗಾಗಿ ಕೂಸಿನ ಮನೆ ಎಂಬ ಹೆಸರಿನಲ್ಲಿ 4,000 ಗ್ರಾಮ ಪಂಚಾಯತಿಗಳಲ್ಲಿ ಶಿಶುಪಾಲನಾ​ ಕೇಂದ್ರಗಳನ್ನು ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ​ ಪ್ರಾರಂಭಿಸಲಾಗುವುದು.

· ರಾಜ್ಯದ ಸರಾಸರಿಗಿಂತ ಕಡಿಮೆ ಪ್ರಗತಿ ಸಾಧಿಸುತ್ತಿರುವ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ ಶಿಕ್ಷಣ, ಆರೋಗ್ಯ,​ ಪೌಷ್ಠಿಕತೆ, ಲಿಂಗ ಸಮಾನತೆ, ಬಡತನ ನಿರ್ಮೂಲನೆ ಮತ್ತಿತರ ಅಭಿವೃದ್ಧಿಯ ಬಹು ಆಯಾಮ ಸೂಚ್ಯಂಕಗಳಲ್ಲಿ​ ಸುಧಾರಣೆ ತರಲು 3,000 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು.


· ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನಗರಾಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ನೀಡಿ ಪ್ರಾರಂಭಿಸಿದ್ದ ನಗರೋತ್ಥಾನ, ಇಂದಿರಾ ಕ್ಯಾಂಟೀನ್ ನಂತಹ ಹಲವಾರು ಜನಪರ ಯೋಜನೆಗಳನ್ನು  ಪುನರಾರಂಭಿಸಲಾ​ಗಿದೆ.

​ · ಸಾರ್ವಜನಿಕರ ಸಂಚಾರ ಮತ್ತು ವಾಣಿಜ್ಯ ಚಟುವಟಿಕೆಗಳ ಉತ್ತೇಜನಕ್ಕೆ ಈಗಾಗಲೇ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಗಳಲ್ಲಿ ಒಟ್ಟು 2,000 ಕಿಲೋ ಮೀಟರ್ ಉದ್ದದ ರಾಜ್ಯ ಹೆದ್ದಾರಿಗಳನ್ನು ಮತ್ತು ರಾಜ್ಯದಲ್ಲಿನ ಅಂತರ್ ಜಿಲ್ಲಾ ಸಂಪರ್ಕಕ್ಕಾಗಿ ಒಟ್ಟು 2,400 ಕಿಲೋ ಮೀಟರ್ ಉದ್ದದ ಜಿಲ್ಲಾ ರಸ್ತೆಗಳನ್ನು 4,083 ಕೋಟಿ ರೂಪಾಯಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುವುದು.

· ರೈಲ್ವೆ ಜಾಲದ ಸಾಂದ್ರತೆಯನ್ನು ಹೆಚ್ಚಿಸಿ, ಕರ್ನಾಟಕದ ಎಲ್ಲಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ, ಪ್ರಾದೇಶಿಕ​ ಅಸಮತೋಲನ ಕಡಿಮೆ ಮಾಡುವುದು, ಜನ ಸಾಮಾನ್ಯರ ಸುಗಮ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಅನುವು​ ಮಾಡಿಕೊಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸುಮಾರು 8,766 ಕೋಟಿ ರೂಪಾಯಿಗಳ​ ರಾಜ್ಯದ ಹೂಡಿಕೆಯೊಂದಿಗೆ, 1,110 ಕಿಲೋ ಮೀಟರ್ ಉದ್ದದ ಒಂಭತ್ತು ರೈಲ್ವೆ ಯೋಜನಾ ಕಾಮಗಾರಿಗಳನ್ನು​ ಆದ್ಯತೆಯ ಮೇಲೆ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು.

​ · ಕೈಗಾರಿಕೆಗಳ ಸ್ಥಾಪನೆಗೆ ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಪರಿವರ್ತಿಸದೇ​ ಬಳಸಲು ಅವಕಾಶ ನೀಡಲಾಗುವುದು. ಇದಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ​ ತರಲಾಗಿದೆ.


· 10 ಹೆಚ್.ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ, ಮಾಸಿಕ ಗರಿಷ್ಠ​ 250 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ ನೇಕಾರರನ್ನು ಆರ್ಥಿಕ ಸ್ವಾವಲಂಭಿಗಳನ್ನಾಗಿಸಲು​ ಕ್ರಮ ವಹಿಸಲಾ​ಗಿದೆ.


· ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ​ ಬೀಚ್ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸಲಾಗು​ತ್ತಿದೆ ಹಾಗೂ ಕಡಲ ತೀರದ ಸಮಗ್ರ ಅಭಿವೃದ್ಧಿಗಾಗಿ​ ವಿಸ್ತೃತ ಯೋಜನೆಯನ್ನು ತಯಾರಿಸಲಾಗುವುದು.

·· ಜಿಲ್ಲೆಯಲ್ಲಿ  2022-23 ರಲ್ಲಿ 2063 ಕೋಟಿ ರೂ ಮೌಲ್ಯದ 2,65,528 ಮೆಟ್ರಿಕ್ ಟನ್ ಮೀನು ಉತ್ಪಾದನೆ ಆಗಿದೆ. ರಾಜ್ಯದಲ್ಲಿ ಜಿಲ್ಲೆಯು 2 ನೇ ಸ್ಥಾನದಲ್ಲಿದೆ. ಮೀನುಗಾರಿಕೆ ಜಿಲ್ಲೆಯ ಪ್ರಮುಖ ಉದ್ಯಮವಾಗಿದ್ದು ಇದರ ಸರ್ವತೋಮುಖ ಅಭಿವೃಧ್ದಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.

·· ಆಯುಷ್ಮಾನ್ ಆರೋಗ್ಯ ಕರ್ನಾಟಕದ ಅಡಿ ಉಡುಪಿಯಲ್ಲಿ 5,14,238 ಮಂದಿ ನೊಂದಾವಣಿ ಮಾಡಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ 23,902 ಪ್ರಕರಣಗಳಲ್ಲಿ 14.13 ಕೋಟಿ ವೈದ್ಯಕೀಯ ವೆಚ್ಚ ಪಾವತಿಸಲಾಗಿದೆ.

·· ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಕೆ ಇಲ್ಲದ ಮನೆಗಳಿಗೆ ಕುಡಿಯುವ ನೀರು ಸೌಲಭ್ಯ ಒದಗಿಸಲು ಮನೆ ಮನೆಗೆ ನಳ ಸಂಪರ್ಕ ಯೋಜನೆಯಡಿ ಜಿಲ್ಲೆಯಲ್ಲಿ 2,47,190 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು ಗುರಿ ಹೊಂದಿದ್ದು, ಈಗಾಗಲೇ 1,90,974  ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸೌಲಭ್ಯವನ್ನು ಕಲ್ಪಿಸಿದೆ. ಉಳಿದ ಮನೆಗಳಿಗೆ ಶೀಘ್ರವಾಗಿ ನಳ ನೀರಿನ ಸಂಪರ್ಕ ಕಲ್ಪಿಸಲಾಗುವುದು

·· ಹೆಬ್ರಿ ತಾಲೂಕಿನ ಕೆರೆಬೆಟ್ಟು ಮತ್ತು ಶಿವಪುರ ಗ್ರಾಮಗಳಲ್ಲಿ 113.59 ಎಕ್ರೆ , ಕಾರ್ಕಳ ತಾಲೂಕಿನ  ನಿಟ್ಟೆ ಗ್ರಾಮದಲ್ಲಿ 50.42 ಎಕ್ರೆ ಜಮೀನನ್ನು ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಭೂ ಸ್ವಾಧೀನಪಡಿಸಕೊಳ್ಳಲಾಗಿದ್ದು, ಬ್ರಹ್ಮಾವರ  ತಾಲೂಕಿನ ಉಪ್ಪೂರು ಗ್ರಾಮದಲ್ಲಿ 100 ಎಕ್ರೆ,  ಕಾಪು ತಾಲೂಕಿನ ಎಲ್ಲೂರು ಹಾಗೂ ಸಾಂತೂರು  ಗ್ರಾಮದಲ್ಲಿ ಒಟ್ಟು 941.98 ಎಕ್ರೆ ಜಮೀನಿನ ಸ್ಥಳ ಪರಿಶೀಲನೆ ನಡೆಸಲಾಗಿದ್ದು,  ಈ ಪ್ರದೇಶದಲ್ಲಿ ಶೀಘ್ರದಲ್ಲಿಯೇ ಹೊಸ ಕೈಗಾರಿಕ ಪ್ರದೇಶವನ್ನು ಸ್ಥಾಪಿಸಲಾಗುವುದು.

·· ಜಿಲ್ಲೆಯಲ್ಲಿ ಅರಣ್ಯೀಕರಣ ಅಂಗವಾಗಿ ಅರಣ್ಯ ಇಲಾಖೆವತಿಯಿಂದ ಪ್ರಸಕ್ತ ಸಾಲಿನಲ್ಲಿ 7,71,194 ಸಸಿಗಳನ್ನು ನೆಡಲಾಗಿದೆ.

 · ​ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ಉದ್ಯಮ ಶಕ್ತಿ ಎಂಬ​ ಯೋಜನೆಯಡಿ 100 ಸ್ಥಳಗಳಲ್ಲಿ ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪಿಸಿ, ಅವುಗಳನ್ನು ಮಹಿಳಾ ಸ್ವ-​ ಸಹಾಯ ಸಂಘಗಳ ಮೂಲಕ ಸಂಪೂರ್ಣ ನಿರ್ವಹಣೆ ಮಾಡಲು ಕ್ರಮವಹಿಸಿದೆ.

· ಹವಾಮಾನ ವೈಪರಿತ್ಯಗಳಾದ ಪ್ರವಾಹ, ಅನಾವೃಷ್ಠಿ, ನದಿ ತೀರದ ಸವೆತದಿಂದ ಉಂಟಾಗುವ ಪರಿಣಾಮಗಳನ್ನು​ ಪರಿಹರಿಸಲು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಪ್ರಸಕ್ತ ಸಾಲಿನಲ್ಲಿ 422 ಕೋಟಿ ರೂಪಾಯಿ ವೆಚ್ಚದ​ ಕಾಮಗಾರಿಗಳನ್ನು ತೆಗೆದುಕೊಳ್ಳಲು ಯೋಜಿಸಲಾಗಿದೆ.


· ರಾಜ್ಯದಲ್ಲಿ ಭಾರೀ ಮಳೆ, ಬಲವಾದ ಗಾಳಿ, ಪ್ರವಾಹದಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು​ ಡಾಪ್ಲರ್ ವೆದರ್ ರೀಡರ್ ​(Doppler​ Weather Radar​) ಕಣ್ಗಾವಲು ಯಂತ್ರವನ್ನು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಸ್ಥಾಪಿಸಲು ಕ್ರಮ​ ಕೈಗೊಳ್ಳಲಾ​ಗಿದೆ.


· ಜಿಲ್ಲೆಯಲ್ಲಿ ನೆರೆ, ಪ್ರವಾಹ, ಪ್ರಕೃತಿ ವಿಕೋಪದಂತಹ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಲು ​ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.


· ಪ್ರಸ್ತುತ ಸಾಲಿನ ಮುಂಗಾರು ಮಳೆಯ ಅವಧಿಯಲ್ಲಿ ಉಂಟಾಗಿರುವ ಹಾನಿಗಳಿಗೆ ಎನ್.ಡಿ.ಆರ್.ಎಫ್ ಹಾಗೂ​ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಒಟ್ಟು 93.72 ಲಕ್ಷ ​ರೂ. ತುರ್ತು ಪರಿಹಾರವನ್ನು ಪಾವತಿಸಲಾಗಿದೆ.​ ಹೆಚ್ಚುವರಿಯಾಗಿ ಮನೆ ಹಾನಿ ಪ್ರಕರಣಗಳಿಗೆ, ಮನೆಯನ್ನು ಹೊಸದಾಗಿ ನಿರ್ಮಿಸಲು 5 ಲಕ್ಷ ಹಾಗೂ ದುರಸ್ಥಿ​ ಮಾಡಿಕೊಳ್ಳಲು 3 ಲಕ್ಷ​ ರೂ ಪರಿಹಾರವನ್ನು ನೀಡಲು ಮಂಜೂರಾತಿ ನೀಡಲಾಗಿದೆ.


· ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ,​ ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಯೋಜನೆಯಡಿ ಒಟ್ಟು​ 1,46,897 ​ ​ಪಿಂಚಣಿದಾರರಿಗೆ ಮಾಸಿಕ ಪಿಂಚಣಿ​ ನೀಡಲಾಗುತ್ತಿದೆ. 

​  ··· ಉಡುಪಿ ಜಿಲ್ಲೆ ಅತ್ಯಂತ ಬುದ್ದಿವಂತರ ಜಿಲ್ಲೆ ಎನ್ನುವ ಹೆಸರು ಪಡೆದಿದೆ. ಇಲ್ಲಿಯ ಉಸ್ತುವಾರಿ ಸಚಿವೆಯಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ಲಭ್ಯವಾಗಿದೆ. ಕಡಲು ಕೊರೆತ, ಕಾಲು ಸಂಕ ಸೇರಿದಂತೆ ಇಲ್ಲಿನ ಹಲವಾರು ವಿಶಿಷ್ಟ ಸಮಸ್ಯೆಗಳು, ಬೇಡಿಕೆಗಳು ನನ್ನ ಗಮನದಲ್ಲಿವೆ. ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾನು ಎಲ್ಲ ರೀತಿಯ ಕ್ರಮ ವಹಿಸುತ್ತೇನೆ.

ಅಭಿವೃದ್ಧಿಯ ಮೂಲಕ ಉಡುಪಿ ಜಿಲ್ಲೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡುತ್ತೇನೆ. ಇದಕ್ಕೆ ಶ್ರೀಕೃಷ್ಣ ಪರಮಾತ್ಮನ ಆಶಿರ್ವಾದ ಮತ್ತು ತಮ್ಮೆಲ್ಲರ ಸಹಕಾರವನ್ನು ಕೋರಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತೇನೆ.

​ ಆತ್ಮೀಯರೇ, ಈ ಶುಭ ಸಂದರ್ಭದಲ್ಲಿ ದೇಶಕ್ಕೆ ನನ್ನ ಕೊಡುಗೆ ಏನು ಎಂಬುದನ್ನ ಪ್ರತಿಯೊಬ್ಬರೂ ಆಲೋಚಿಸಬೇಕು. ​ನ​ಮ್ಮನ್ನು ಬದಲಾಯಿಸಿಕೊಳ್ಳುವ ಮೂಲಕ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಸಮಾಜದ ಎಲ್ಲ ವರ್ಗದವರು ಸಹೋದರತೆ, ಸಾಮರಸ್ಯದ ಸಹಬಾಳ್ವೆ ನಡೆಸೋಣ. ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿಹಿಡಿಯೋಣ.

 7​7 ನೇ ಈ ಸ್ವಾತಂತ್ರ್ಯ ದಿನಾಚರಣೆ ನಮ್ಮಲ್ಲಿ ಇನ್ನಷ್ಟು ರಾಷ್ಟ್ರಪ್ರೇಮ ಬೆಳೆಸಲಿ ಎಂದು ಆಶಿಸುತ್ತಾ ತಮ್ಮೆಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರೋತ್ಸವ​ದ ಶುಭಾಶಯಗಳನ್ನ ಕೋರುತ್ತಾ ನನ್ನ ಮಾತುಗಳನ್ನ ಮುಗಿಸುತ್ತೇನೆ. ನಮಸ್ಕಾರ. 

ಜೈ ಹಿಂದ್. ಜೈ ಕರ್ನಾಟಕ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button