ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕರ್ನಾಟಕದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಜನಪರ ಸರ್ಕಾರವನ್ನು ಮತ್ತೊಮ್ಮೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಹಕಾರ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ವಿವಿದ ಯೋಜನೆಗಳ ಫಲಾನುಭವಿಗಳ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರಿ ಸಚಿವರಾದ ಅಮಿತ್ ಶಾ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.
*ರೈತರಿಗೆ ಅನುಕೂಲ*
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುವ ಸಾಲವನ್ನು ಮೂರು ಲಕ್ಷದಿಂದ 5 ಲಕ್ಷ ರೂ.ಗಳವರೆಗೆ ಏರಿಸಲಾಗಿದೆ. ರೈತರಿಗೆ ಇರರಿಂದ ಬಹಳ ದೊಡ್ಡ ಅನುಕೂಲವಾಗಲಿದೆ. ಯಶಸ್ವಿನಿ ಯೋಜನೆಯನ್ನು ಪುನರಾರಂಭಿಸಿ 300 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ರೈತರಿಗೆ ಜೀವನಜ್ಯೋತಿ ಜೀವ ವಿಮಾ ಪ್ರಾರಂಭ ಮಾಡಿ ಸಹಜ ಸಾವಿಗೂ 2 ಲಕ್ಷ ರೂ.ಗಳನ್ನು ಕುಟುಂಬದವರಿಗೆ ನೀಡಲಾಗುವುದು. ಇದಕ್ಕಾಗಿ 180 ಕೋಟಿ ರೂ.ಗಳನ್ನು ರೈತರ ಪರವಾಗಿ ತುಂಬಲಾಗುತ್ತಿದೆ. ಬೀಜಗೊಬ್ಬರಕ್ಕೆ 10 ಸಾವಿರ ರೂ. ನೀಡುವ ಭೂ ಸಿರಿ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಲು ಉತ್ಪಾದಕರಿಗೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರೋತ್ಸಾಹ ಧನ ಪ್ರಾರಂಭಿಸಿದರು. ಈ ವರ್ಷ 1200.ಕೋಟಿ ರೂ.ಗಳನ್ನು ಹಾಲು ಉತ್ಪಾದಕರಿಗೆ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕೆ.ಎಂ.ಎಫ್ ಸಂಸ್ಥೆ ಬಾಲಚಂದ್ರ ಜಾರಕಿಹೊಳಿಯವರ ಅಧ್ಯಕ್ಷತೆಯಲ್ಲಿ ಲಾಭದಾಯಕವಾಗಿದೆ. ಸಹಕಾರಿ ರಂಗ ಬೆಳೆಯಲು ಪ್ರಧಾನಿಗಳು ಸಹಕಾರಿ ಇಲಾಖೆಯನ್ನು ಪ್ರತ್ಯೇಕ ಗೊಳಿಸಿದ್ದಾರೆ. PACS ಗಳಿಗೆ ಹೆಚ್ಚಿನ ಬಲ ತುಂಬಲಾಗುತ್ತಿದೆ ಎಂದರು.
*ಅಭಿವೃದ್ಧಿಯ ನಕ್ಷೆಯನ್ನೇ ಬದಲಾಗಿದೆ*
ಮೂಲಸೌಕರ್ಯ ಅಭಿವೃದ್ಧಿಯನ್ನು ಸಚಿವ ಸೋಮಶೇಖರ್ ಅತ್ಯುತ್ತಮವಾಗಿ ಮಾಡಿದ್ದು, ಅಭಿವೃದ್ಧಿಯ ನಕ್ಷೆಯನ್ನೇ ಬದಲಾಯಿಸಿದ್ದಾರೆ. ಜಾತಿ ಮತ ಧರ್ಮದ ಮೇಲೆ ಗೆಲ್ಲುವುದಲ್ಲದೆ ಪ್ರಾಮಾಣಿಕವಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ