*ಮಹಿಳೆ ಅಬಲೆಯಲ್ಲ, ಶಕ್ತಿಗೆ ಅನ್ವರ್ಥಕ: ಡಾ.ಹಿತಾ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳೆ ಅಬಲೆಯಲ್ಲ, ಶಕ್ತಿಯ ಮತ್ತೊಂದು ಹೆಸರೇ ಮಹಿಳೆ ಎಂದು ಹೆಬ್ಬಾಳಕರ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ ತಜ್ಞ ವೈದ್ಯೆ ಡಾ. ಹಿತಾ ಮೃಣಾಲ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಪ್ರಜಾವಾಣಿ ದಿನಪತ್ರಿಕೆ ಆಯೋಜಿಸಿದ್ದ ಭೂಮಿಕಾ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ನಾಲ್ಕು ಗೋಡೆಗಳಿಗೆ ಸೀಮಿತವಾಗಿರುವ ಕಾಲ ಇದಲ್ಲ, ಹೊರಗೆ ಹೋಗಿ ದುಡಿಯುವ, ಸಾಧನೆ ಮಾಡುವ ಕಾಲದಲ್ಲಿ ನಾವಿದ್ದೇವೆ. ಚಂದ್ರನ ಅಂಗಳಕ್ಕೂ ನಾವು ತಲುಪಿದ್ದೇವೆ. ಮಹಿಳೆಯರು ಸಾಧನೆ ಮಾಡದ ಕ್ಷೇತ್ರಗಳಿಲ್ಲ. ಮಹಿಳೆಯೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತಿದೆ. ನಾವು ಶಿಕ್ಷಣವಂತರಾದರೆ, ನಾವು ಜ್ಞಾನವಂತರಾದರೆ ಇಡೀ ಕುಟುಂಬ ಶಿಕ್ಷಣ ಪಡೆಯುತ್ತದೆ, ಜ್ಞಾನವನ್ನು ಪಡೆಯುತ್ತದೆ. ಹಾಗಾಗಿ ನಾವು ನಮ್ಮ ಶಿಕ್ಷಣವನ್ನಾಗಲಿ, ನಮ್ಮ ಮಕ್ಕಳ ಶಿಕ್ಷಣವನ್ನಾಗಲಿ ಯಾವುದೇ ರೀತಿಯಲ್ಲೂ ನಿರ್ಲಕ್ಷಿಸಬಾರದು ಎಂದು ಅವರು ಹೇಳಿದರು.
ನಾವು ಬೇರೆಯವರ ಬಗ್ಗೆ ತೋರುವ ಕಾಳಜಿಯನ್ನು ನಮ್ಮ ಸ್ವಂತ ಬದುಕಿಗೆ ತೋರುವುದಿಲ್ಲ, ಅದಕ್ಕೆ ನಮ್ಮಲ್ಲಿ ಸಮಯವೇ ಇರುವುದಿಲ್ಲ. ಚಿಕ್ಕವರಿರುವಾಗ ತಂದೆ, ತಾಯಿಯ ಬಗ್ಗೆ, ಸ್ವಲ್ಪ ದೊಡ್ಡವರಾದ ಮೇಲೆ ತಂಗಿ, ತಮ್ಮನ ಬಗ್ಗೆ, ಮದುವೆಯಾದ ಮೇಲೆ ಗಂಡನ ಬಗ್ಗೆ, ಅತ್ತೆ- ಮಾವನ ಬಗ್ಗೆ, ನಂತರ ಮಕ್ಕಳ ಬಗ್ಗೆ ನಾವು ಗಮನ ನೀಡುತ್ತೇವೆಯೇ ವಿನಃ ನಮ್ಮ ಆರೋಗ್ಯದ ಬಗೆಗಾಗಲಿ, ಬೇಕು, ಬೇಡಗಳ ಬಗೆಗಾಗಲಿ ಕಡಿಮೆ ಕಾಳಜಿ ವಹಿಸುತ್ತೇವೆ ಎಂದು ಹೇಳಿದರು.
ನನ್ನ ಬಳಿ ಬರುವ ಬಹಳಷ್ಟು ಮಹಿಳೆಯರು ಸ್ವಂತ ಕಾಳಜಿ ತೆಗೆದುಕೊಳ್ಳದಿರವುದರಿಂದ ವಯಸ್ಸಾದಂತೆ ಅನುಭವಿಸುವ ಸಮಸ್ಯೆಗಳನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಹಾಗಾಗಿ ನೀವೆಲ್ಲ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅವಕಾಶ ಸಿಕ್ಕಿದಾಗಲೆಲ್ಲ ಸಾಧನೆಯನ್ನು ಮಾಡಲು ಮುನ್ನುಗ್ಗಿ ಎಂದು ವಿನಂತಿಸುತ್ತೇನೆ. ಯಾರೋ ನಮಗೆ ಅವಕಾಶ ಒದಗಿಸಿಕೊಡುತ್ತಾರೆ ಎನ್ನುವ ಮನೋಭಾವ. ನಿರೀಕ್ಷೆ ಬೇಡ. ನಾವೇ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ಹಿತಾ ಹೆಬ್ಬಾಳಕರ್ ಹೇಳಿದರು.
‘ಎಲ್ಲ ದೇವರುಗಳು ಸಂಹಾರ ಮಾಡಲು ಆಗದ ಮಹಿಷಾಸುರನನ್ನು ಕೊನೆಗಾಣಿಸಲು ಶಕ್ತಿಮಾತೆಯೇ ಅವತರಿಸಬೇಕಾಯಿತು. ರಾಕ್ಷಸ ಸಂಹಾರ ಮಾಡಿ ಲೋಕ ಕಾಪಾಡಿದ್ದನ್ನು ನಾವು ಪುರಾಣದಲ್ಲಿ ಕೇಳಿದ್ದೇವೆ. ಕಲಿಯುಗದಲ್ಲೂ ನಾರಿ ಅದೇ ಪಾತ್ರ ನಿರ್ವಹಿಸುತ್ತಿದ್ದಾಳೆ. ದುಶ್ಚಶಕ್ತಿಗಳಿಂದ ಸಮಾಜವನ್ನು, ಕುಟುಂಬವನ್ನು ರಕ್ಷಣೆ ಮಾಡುತ್ತಿದ್ದಾಳೆ. ನಾವು ಅದನ್ನು ಗುರುತಿಸಬೇಕು ಅಷ್ಟೇ’ ಎಂದರು.
ಮಹಿಳೆಯನ್ನು ಅಬಲೆಯೆಂದು ತಪ್ಪಾಗಿ ಅರ್ಥೈಸಲಾಗಿದೆ. ನಾವು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಅದನ್ನು ಈ ಜಗತ್ತಿನಲ್ಲಿ ಅನೇಕ ಮಹಿಳೆಯರು ಸಾಬೀತು ಮಾಡಿದ್ದಾರೆ. ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು ಎನ್ನುವುದನ್ನು ಇಂದಿರಾ ಗಾಂಧಿಯವರು ತೋರಿಸಿಕೊಟ್ಟಿದ್ದಾರೆ. ರಾಷ್ಟ್ರದ ಪ್ರಧಾನಿಯಾಗಿ ಅವರು ಮಾಡಿದ ಸಾಧನೆ ನಮ್ಮ ಮುಂದಿದೆ. ಅರುಣಿಮಾ ಸಿನ್ಹಾ ಹೆಸರನ್ನು ನೀವೆಲ್ಲ ಕೇಳಿರುತ್ತೀರಿ. 2013 ರಲ್ಲಿ ಮೌಂಟ್ ಎವರೆಸ್ಟ್ ಏರಿದ ವಿಶ್ವದ ಮೊದಲ ಅಂಗವಿಕಲ ಮಹಿಳೆ. 2011 ರಲ್ಲಿ ಕೆಲವು ದರೋಡೆಕೋರರು ಅವರನ್ನು ರೈಲಿನಿಂದ ತಳ್ಳಿದರು. ಪರಿಣಾಮವಾಗಿ ಅವರ ಎಡಗಾಲನ್ನು ಮೊಣಕಾಲಿನ ಕೆಳಗೆ ಕತ್ತರಿಸಬೇಕಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರು ಎವರೆಸ್ಟ್ ಶಿಖರವನ್ನು ಏರಲು ನಿರ್ಧರಿಸಿದರು. ಪ್ರತಿ ಖಂಡದ ಅತ್ಯುನ್ನತ ಶಿಖರಗಳನ್ನು ಏರಿ ಭಾರತದ ರಾಷ್ಟ್ರೀಯ ಧ್ವಜವನ್ನು ಹಾರಿಸುವುದು ಅವರ ಉದ್ದೇಶವಾಗಿತ್ತು. ಕೃತಕ ಕಾಲಿನಿಂದಲೇ ಮುಂದಿನ ಎರಡೇ ವರ್ಷದಲ್ಲಿ ಅವರು ಏಳು ಶಿಖರಗಳನ್ನು ಹತ್ತಿದ್ದಾರೆ ಎಂದು ಉದಾಹರಿಸಿದರು.
ಸುಪ್ರಿಯಾ ರಾಯ್ – 13ನೇ ವಯಸ್ಸಿಗೆ ಮದುವೆಯಾಗಿ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು 10ನೇ ತರಗತಿ ಪರೀಕ್ಷೆ ಬರೆದಾಕೆ. ಕೋಲ್ಕತ್ತಾದ ಸುಪ್ರಿಯಾ ರಾಯ್ ಕಳೆದ 26 ವರ್ಷಗಳಿಂದ ಬೇಕರಿ ಉದ್ಯಮ ನಡೆಸುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ 125 ಮಳಿಗೆಗಳನ್ನು ಹೊಂದಿದ್ದಾರೆ. ಇಂದು 80 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುವ ಬೇಕರಿ ಕ್ವೀನ್. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಉದ್ಯಮಿ ಅವರು ಎಂದು ಹೇಳಿದರು.
ಸುಧಾಮೂರ್ತಿ ಇನ್ಫೋಸಿಸ್ ನಂಥ ಮಲ್ಟಿ ನ್ಯಾಷನಲ್ ಕಂಪನಿ ಕಟ್ಟಿ ಬೆಳೆಸಲು ನಾರಾಯಣ ಮೂರ್ತಿಯವರಿಗೆ ಬೆನ್ನೆಲುಬಾಗಿ ನಿಂತವರು. ಟೀಚರ್, ಸೋಷಿಯಲ್ ವರ್ಕರ್, ಬರಹಗಾರ್ತಿಯಾಗಿ, ಉತ್ತಮ ಭಾಷಣಕಾರರಾಗಿ, ಮೋಟಿವೇಟಿವ್ ಸ್ಪೀಕರ್ ಆಗಿ ಗುರುತಿಸಿಕೊಂಡಿದ್ದಾರೆ. ಸಾಲುಮರದ ತಿಮ್ಮಕ್ಕ ಮಕ್ಕಳಿಲ್ಲ ಎಂದು ಗಿಡಗಳನ್ನೇ ಮಕ್ಕಳನ್ನಾಗಿ ಪ್ರೀತಿಸಿ, ಬೆಳೆಸಿದ ಮಹಾತಾಯಿ ಸಾಲುಮರದ ತಿಮ್ಮಕ್ಕ. ಇವರು ಬೆಳೆಸಿದ ಸಾವಿರಾರು ಗಿಡಗಳು ಇಂದು ನೆರಳಿನ ಆಶ್ರಯ ನೀಡುತ್ತಿದೆ.
ಅರುಂಧತಿ ನಾಗ್ ಜೀವನ ಅನೇಕ ಹೆಣ್ಮಕ್ಕಳಿಗೆ ಸ್ಪೂರ್ತಿ. ಚಿಕ್ಕ ಪ್ರಾಯದಲ್ಲಿಯೇ ಪತಿಯನ್ನು ಕಳೆದುಕೊಂಡರು. ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟನಾಗಿ ಬೆಳಗುತ್ತಿದ್ದ ಶಂಕರ್ ನಾಗ್ ಅವರ ಪತ್ನಿಯಾಗಿ ನೆಮ್ಮದಿಯಾಗಿದ್ದ ಬದುಕಿನಲ್ಲಿ ದೊಡ್ಡ ಸುಂಟರಗಾಳಿಯೇ ಎದ್ದಿತ್ತು. ಒಂದು ಕಡೆ ಜೀವಕ್ಕೆ-ಜೀವವಾಗಿದ್ದ ಸಂಗಾತಿಯನ್ನು ಕಳೆದುಕೊಂಡ ನೋವು, ಮತ್ತೊಂದೆಡೆ ಪತಿಯ ಕನಸು ನನಸು ಮಾಡಬೇಕೆಂಬ ಹಠ.
ಅಗಾಧ ನೋವು, ಆರ್ಥಿಕ ಸಂಕಟ ಎಲ್ಲವನ್ನೂ ಎದುರಿಸಿ ತನ್ನ ಕನಸಿನ ಕೂಸು ರಂಗಶಂಕರ ಕಟ್ಟಿ ಬೆಳೆಸಿದ ಗಟ್ಟಿಗಿತ್ತಿ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡರೂ ಧೃತಿಗೆಡದೆ ಬೆಳೆದ ಸಾಧಕಿ. ಇವರ ಸಾಧನೆಗೆ ಪದ್ಮಶ್ರೀ, ರಾಷ್ಟೀಯ ಸಿನಿಮಾ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಹೀಗೆ… ಸಾವಿರಾರು ಸಾಧಕ ಮಹಿಳೆಯರು ನಮ್ಮ ಎದುರಿದ್ದಾರೆ. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಹಿತಾ ವಿವರಿಸಿದರು.
ನಿಮ್ಮ ನೆಚ್ಚಿನ ನಾಯಕಿ, ನನ್ನ ಅತ್ತೆಯವರಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬೇಕಾಗಿಲ್ಲ. ಕೆಲವೇ ದಿನಗಳಲ್ಲಿ ಅವರು ನಿಮ್ಮ ಮುಂದೆ ಬಂದು ನಿಂತು ಮತ್ತೆ ಸೇವೆ ಮಾಡಲಿದ್ದಾರೆ’ ಎಂದು ಡಾ.ಹಿತಾ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ