*ಪ್ರಧಾನಿ ನರೇಂದ್ರ ಮೋದಿ ಅವರಿಂದ ದೇಶದ ಮಹಿಳೆಯರಿಗೆ ಗೌರಿ ಗಣೇಶ ಹಬ್ಬದ ಉಡುಗೊರೆ: ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಸಂತಸ*
ಅಣ್ಣ ಬಸವಣ್ಣನವರ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಮಹಿಳಾ ಮೀಸಲಾತಿ ಕಾರ್ಯರೂಪಕ್ಕೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ದೊರಕಿಸಿ ಕೊಡುವ ಮೂಲಕ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿಜಿ ಅವರು ಗೌರಿ ಗಣೇಶ ಹಬ್ಬದ ಉಡುಗೊರೆಯನ್ನು ನೀಡಿದ್ದಾರೆ ಎಂದು ಮಾಜಿ ಸಚಿವೆ ಶಶಿಕಲಾ ಅ ಜೊಲ್ಲೆ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜಕೀಯ ಕ್ಷೇತ್ರದಲ್ಲೂ ಕೂಡಾ ಮಹಿಳೆಯರಿಗೆ 33 ಮೀಸಲಾತಿ ಕಲ್ಪಿಸಿರುವುದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ಸಂಗತಿಯಾಗಿದೆ. ಮಹಿಳೆಯರು ರಾಜಕೀಯವಾಗಿ ಬೆಳೆಯಬೇಕು ಎನ್ನುವುದನ್ನ ಎಲ್ಲಾ ಪಕ್ಷಗಳು ಕೇವಲ ಬಹಳ ಭಾಷಣದಲ್ಲಿ ಹೇಳುತ್ತಿದ್ದವು. ಆದರೆ, ಈ ಮಾತನ್ನು ಕೃತಿಗೆ ಇಳಿಸಿದ್ದು ಮಾತ್ರ ಪ್ರಧಾನಿ ನರೇಂದ್ರ ಮೋದಿಯವರು. ವಿಶ್ವಗುರು ಬಸವಣ್ಣನವರು 12 ಶತಮಾನದಲ್ಲಿ ಮೊದಲನೇ ಬಾರಿಗೆ ಸಮಾಜದಲ್ಲಿ ಸಮಾನತೆಯನ್ನು ತರುವ ಪ್ರಯತ್ನ ಮಾಡಿದ್ದರು. ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಚರ್ಚೆ ಮಾಡುವ ಸಮಾನ ಅವಕಾಶವನ್ನು ನೀಡಿದ್ದರು. ಇಂದು ವಿಶ್ವಗುರು ಬಸವಣ್ಣನವರ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಅನುಷ್ಠಾನವನ್ನ ಸಾಕಾರಗೊಳಿಸಿದ್ದಾರೆ. ಇದು ನಿಜವಾಗಿಯೂ ಖುಷಿಯ ಸಂಗತಿ, ಮೊದಲಿನಿಂದಲೂ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ವಿಶಿಷ್ಟ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.
ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ವೈಜ್ಞಾನಿಕ ಕ್ಷೇತ್ರದಲ್ಲೂ ವಿಶೇಷ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ, ರಾಜಕೀಯ ಕ್ಷೇತ್ರದಲ್ಲಿ ಎಲ್ಲೋ ಹಿಂದೆ ಇದ್ದೀವಿ ಎನ್ನುವ ಭಾವನೆ ಇತ್ತು. ದೇಶ ಸ್ವಾತಂತ್ರ್ಯ ಪಡೆದು 77 ವರ್ಷಗಳ ನಂತರ ರಾಜಕೀಯ ಕ್ಷೇತ್ರದಲ್ಲೂ ಮೀಸಲಾತಿ ದೊರಕಿಸಿ ಕೊಡುವ ಮೂಲಕ, ದೇಶದ ಇತಿಹಾಸದಲ್ಲಿ ನಮ್ಮ ನೆಚ್ಚಿನ ಪ್ರಧಾನಿಗಳು ಅದ್ಭುತ ಒಂದು ಕೊಡುಗೆಯನ್ನು ಮಹಿಳೆಯರಿಗೆ ನೀಡಿದ್ದು, ಇದನ್ನ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿಜೀಯವರು ನೀಡಿರುವ ಗೌರಿ ಗಣೇಶ ಹಬ್ಬದ ಉಡುಗೊರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ದೇಶದ ಮಹಿಳೆಯರಿಗೆ ಅಣ್ಣ ಮತ್ತು ತಂದೆಯಾಗಿ ನ್ಯಾಯ ಒದಗಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ತುಂಬು ಹೃದಯದ ಅಭಿನಂದನೆಗಳನ್ನ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ