*ಪತ್ನಿ ಆತ್ಮಹತ್ಯೆ ಬೆನ್ನಲ್ಲೇ ಗೋವಾದಲ್ಲಿ ಪತಿ ಹಾಗೂ ಮನೆಯವರ ಪಾರ್ಟಿ; ಐವರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತಿ ಹಾಗೂ ಮನೆಯವರ ಕಿರುಕುಳ ಹಿಂಸೆಗೆ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರಿ ರಿಚ್ ಐಸ್ ಕ್ರೀಂ ಕಂಪನಿ ಮಾಲೀಕ ಸೇರಿದಂತೆ ಐವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.
ಅ.26ರಂದು ಬೆಂಗಳೂರಿನಲ್ಲಿ ಐಶ್ವರ್ಯ ಎಂಬ ಮಹಿಳೆ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ಗೋವಿಂದರಾಜನಗರ ಠಾಣೆಯಲ್ಲಿ ಮಹಿಳೆಯ ಪೋಷಕರು ದೂರು ದಾಖಲಿಸಿದರು.
ಐಶ್ವರ್ಯ ಹಾಗೂ ರಾಜೇಶ್ 5 ವರ್ಷಗಳ ಹಿಂದೆ ವಿವಾಹವಾಗಿದ್ದರು. ಎರಡು ಕುಟುಂಬಗಳು ಸೇರಿ ನಿಶ್ಚಯ ಮಾಡಿದ್ದ ಮದುವೆಯಾಗಿದ್ದರೂ ಐಶ್ವರ್ಯಾಗೆ ಪತಿ ಹಾಗೂ ಕುಟುಂಬದವರು ಕಿರುಕುಳ ನೀಡುತ್ತಿದ್ದರು. ಐಶ್ವರ್ಯ ಯುಎಸ್ ನಲ್ಲಿ ಎಂಬಿಎ ಮುಗಿಸಿ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸಮಾಡುತಿದ್ದ ಪ್ರತಿಭಾನ್ವಿತ ಮಹಿಳೆ. ಕಳೆದ ಮೂರು ವರ್ಷಗಳಿಂದ ಪತಿ ಹಾಗೂ ಅತ್ತೆ, ಮಾವ, ಮೈದುನ, ಆತನ ಹೆಂಡತಿ ನೀಡುತ್ತಿದ್ದ ಕಿರುಕುಳ, ಹಿಂಸೆಯಿಂದ ಬೇಸತ್ತ ಐಶ್ವರ್ಯ ಅ.26ರಂದು ನೇಣಿಗೆ ಶರಣಾಗಿದ್ದರು.
ಡೈರಿ ರಿಚ್ ಐಸ್ ಕ್ರಿಂ ಕಂಪನಿಯ ಮಾಲೀಕನೂ ಆಗಿದ್ದ ಪತಿ ರಾಜೇಶ್ ಹಾಗೂ ಕುಟುಂಬದವರು ಐಶ್ವರ್ಯ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಗೋವಾಗೆ ತೆರಳಿ ಕ್ಯಾಸಿನೋದಲ್ಲಿ ಭರ್ಜರಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಎರಡು ದಿನ ಗೋವಾದ ರೆಸಾರ್ಟ್ ನಲ್ಲಿ ಕಾಲ ಕಳೆದಿದ್ದ ಕುಟುಂಬ ಅಲ್ಲಿಂದ ಮುಂಬೈಗೆ ತೆರಳುತ್ತಿತ್ತು. ಆರೋಪಿಗಳು ಫೋನ್ ಕೂಡ ಸ್ವಿಚ್ಡ್ ಆಫ್ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದರು.
ಮೂರು ದಿನಗಳ ಸಿಡಿಆರ್ ಪರಿಶೀಲನೆ ಬಳಿಕ ಬೆಂಗಳೂರು ಪೊಲೀಸರು ಗೋವಾದಿಂದ ಮುಂಬೈಗೆ ತೆರಳುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಐಶ್ವರ್ಯ ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಯ್ ಬಂಧಿತರು. ಪ್ರಕರಣದಲ್ಲಿ ಇನ್ನೂ ಐವರು ಆರೋಪಿಗಳಿದ್ದು, ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೂ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ