Latest

ಹಣಕಾಸು ಮತ್ತು ಮಹಿಳೆ

 ಅಂಜಲಿ ಅನಿಲಕುಮಾರ್ ಗರಗ್

ನಾವು ಚಿಕ್ಕವರಿದ್ದಾಗ ಊರಿನಿಂದ ಬರುವಾಗ ಅಜ್ಜಿ ತನ್ನ ಬ್ಲೌಸಿನಿಂದ ಪುಟ್ಟ ಪರ್ಸ ತೆಗೆದು ಅದರಲ್ಲಿನ ದುಡ್ಡು ಕೈಗೆ ಕೊಡುವಾಗ, ತಿಂಗಳ ಕೊನೆಗೆ ಅಪ್ಪನ ಕೈ ಖಾಲಿಯಾದಾಗ ಅಮ್ಮ ಅಕ್ಕಿ ಡಬ್ಬಿ , ಸೀರೆಯ ಮಡಿಕೆಯಿಂದ ದುಡ್ಡು ತೆಗೆಯುತ್ತಿದ್ದಳು. ಆಗಿನ ದಿನಗಳಲ್ಲಿ ಮಹಿಳೆಯರು ಹೊರಗೆ ದುಡಿಯುವುದು ವಿರಳವಾಗಿತ್ತು. ಅಂತಹ ಸಮಯದಲ್ಲಿ ಅಜ್ಜಿ ಅಮ್ಮಂದಿರ ಹತ್ತಿರ ದುಡ್ಡು ಎಲ್ಲಿಂದ ಬರುತ್ತಿತ್ತು?  ಯಾವಾಗಲಾದರೂ ಮನೆಯ ಖರ್ಚಿಗೆ ಅಪ್ಪ ಕೊಟ್ಟ ದುಡ್ಡಿನಲ್ಲಿ ಆಪತ್ಕಾಲಕ್ಕೆ ಹಣ ಉಳಿಸುತ್ತಿದ್ದರು.

ನಮ್ಮೆಲ್ಲರ ಆದರ್ಶ ಸುಧಾಮೂರ್ತಿ ಅವರು ನಾರಾಯಣ ಮೂರ್ತಿ ಅವರು ಇನ್ಫೋಸಿಸ್ ಪ್ರಾರಂಭ ಮಾಡಬೇಕಾದಾಗ ಹಣಕಾಸಿನ ಅವಶ್ಯಕತೆಯಿದ್ದು ಸುಧಾಮೂರ್ತಿಯವರು ಸಾಸಿವೆ ಡಬ್ಬದಲ್ಲಿ ತಾವು ಉಳಿಸಿಟ್ಟ ಹಣವನ್ನು ಅವರಿಗೆ ನೀಡಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು. ಈ ಎಲ್ಲಾ ಉದಾಹರಣೆಗಳನ್ನು ನೋಡಿದಾಗ ಹೆಣ್ಣುಮಕ್ಕಳ ಹಣಕಾಸಿನ ನಿರ್ವಹಣೆಯ ಕೌಶಲ್ಯದ ಅರಿವಾಗುತ್ತದೆ .

ಹಣಕಾಸು ನಿರ್ವಹಣೆ ಹೆಣ್ಣಿನ ಅಂತರ್ನಿರ್ಮಿತ ಸ್ವಭಾವಗಳಲ್ಲಿ ಒಂದು . ಹಣ ಉಳಿಸುವಿಕೆಯಲ್ಲಿ ನಿಸ್ಸೀಮರಾದರೂ ಹಣ ಹೂಡುವಿಕೆಯಲ್ಲಿ ಮಹಿಳೆಯರು ಒಂದು ಹೆಜ್ಜೆ ಹಿಂದಿದ್ದಾರೆ. ಸಂಸಾರದ ಜವಾಬ್ದಾರಿ, ಆರ್ಥಿಕ ನೀತಿ ಬದಲಾವಣೆ, ಡಿಜಿಟಲೀಕರಣ ಇದಕ್ಕೆ ಕಾರಣವಾಗಿರಬಹುದು.

ಹಣ ಹೂಡಿಕೆ ಹಾಗೂ ಉಳಿತಾಯದ ನಡುವೆ ಇರುವ ವ್ಯತ್ಯಾಸ ಹಾಗೂ ಅವುಗಳ ಆಯ್ಕೆ ಬಗ್ಗೆ ತಿಳಿದುಕೊಳ್ಳುವುದು ಇಲ್ಲಿ ಸಮಂಜಸವಾಗುತ್ತದೆ.

ಹಣ ಉಳಿತಾಯ:

ಬರುವ ಆದಾಯದಲ್ಲಿ ಅಗತ್ಯ ಖರ್ಚುಗಳನ್ನು ಪೂರೈಸಿ ಉಳಿದಿರುವ ಹಣವನ್ನು ಉಳಿತಾಯ ಖಾತೆಗೆ ಜಮಾ ಮಾಡುವುದು. ಆ ಹಣಕ್ಕೆ ನಿಶ್ಚಿತ ಬಡ್ಡಿದರ ಜಮಾ ಆಗುತ್ತದೆ . ಬ್ಯಾಂಕಿನ ಖಾತೆ ಅಥವಾ ಪೋಸ್ಟ್ ನ ಖಾತೆ ಉಳಿತಾಯ ಖಾತೆಯ ಆಯ್ಕೆಗಳು.

ಹಣ ಹೂಡುವಿಕೆ:

ಬಂದ ಆದಾಯದಲ್ಲಿ ನಾವು ನಿರ್ಧರಿಸಿರುವ ಹಣ ಹೂಡಿಕೆಯ ಆಯ್ಕೆಗಳಲ್ಲಿ ಮೊದಲು ಹಣ ಕಟ್ಟಿ ನಂತರ ಉಳಿದ ಹಣದಲ್ಲಿ ಖರ್ಚನ್ನು ನಿಭಾಯಿಸುತ್ತೇವೆ. ಮ್ಯೂಚುವಲ್ ಫಂಡ್ , ಸ್ಟಾಕ್ ಮಾರ್ಕೆಟ್, ಇನ್ಶೂರೆನ್ಸ್ ಇವು ಹಣ ಹೂಡುವಿಕೆಯ ಪ್ರಮುಖ ಆಯ್ಕೆಗಳು .

ಬ್ಯಾಂಕ್ ಖಾತೆ ಹಾಗೂ ಫಿಕ್ಸೆಡ್ ಡಿಪಾಸಿಟ್ ಇವು ಬಹುತೇಕ ಮಹಿಳೆಯರಿಗೆ ಗೊತ್ತಿರುವ ವಿಚಾರವೇ. ಉಳಿತಾಯ ಖಾತೆಗಳಲ್ಲಿ ಶೇಕಡಾವಾರು ಬಡ್ಡಿದರ ವರ್ಷಕ್ಕೆ ಇಂತಿಷ್ಟು ಸೇರಿ ನಿಮ್ಮ ಹಣದಲ್ಲಿ ಸ್ವಲ್ಪ ಮಟ್ಟಿಗೆ ವೃದ್ಧಿಯಾಗುತ್ತದೆ . ಹೂಡುವಿಕೆಯ ಆಯ್ಕೆಗಳಲ್ಲಿ ಹಣವು ನಿಮಗಾಗಿ ದುಡಿಯುತ್ತವೆ. ಹೀಗಾಗಿ ಹೂಡಿಕೆಯ ಮೇಲಿನ ಆದಾಯ ಹೆಚ್ಚಾಗಿರುತ್ತದೆ . ಹೂಡುವಿಕೆಯ ಬಗ್ಗೆ ಮಹಿಳೆಯರಲ್ಲಿ ಇನ್ನೂ ಅರಿವು ಮೂಡಬೇಕಿದೆ. ಅಂದಾಗಲೇ ಆದಾಯದ ಹೊಸ ದಾರಿಗಳನ್ನು ಮಹಿಳೆಯರು ತಿಳಿದುಕೊಳ್ಳಬಹುದು .

ಡಿಜಿಟಲೀಕರಣದ ಈ ಯುಗದಲ್ಲಿ ಅರ್ಹ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸಿ ಮನೆಯಲ್ಲಿಯೇ ಕುಳಿತು ತಮ್ಮ ಅನುಕೂಲಕರ ಸಮಯದಲ್ಲಿ ಹಣ ಹೂಡಿಕೆಯ ವಿಧಾನಗಳನ್ನು ಅರಿತುಕೊಳ್ಳಬಹುದು. ಅದಕ್ಕೆ ಬೇಕಾಗುವ ದಾಖಲೆಪತ್ರಗಳು ನಾಮಿನಿ ಪ್ರಕ್ರಿಯೆ ರಿಟರ್ನ್ಸ್ ಹಾಗೂ ರಿಸ್ಕ್ ಎಲ್ಲದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು .

ಹಣ ಹೂಡುವಿಕೆಗೆ ಸಾವಿರಾರುಗಟ್ಟಲೆ ಹಣ ಬೇಕಾಗುವುದಿಲ್ಲ. ಕೇವಲ 500 ರೂ ಗಳಿಂದ ನಿಮ್ಮ ಹೂಡುವಿಕೆಯ ಪ್ರವಾಸವನ್ನು ಆರಂಭಿಸಬಹುದು. ಮೂಲಭೂತ ಮಾಹಿತಿ ಸಿಕ್ಕರೂ ಸಾಕು ನಿಮ್ಮ ಆಸಕ್ತಿಗನುಗುಣವಾಗಿ ಹೂಡಿಕೆಯ ಹಣವನ್ನು ಹೆಚ್ಚಿಸಿಕೊಳ್ಳಬಹುದು.

ಫ್ಯಾಮಿಲಿ ಪೆನ್ಷನ್ ಇದ್ದವರು ಬಹಳ ಯೋಚಿಸಬೇಕಾಗಿಲ್ಲ . ಆದರೆ ಖಾಸಗಿ ಕೆಲಸದಲ್ಲಿ ಇರುವವರು (ಹೊರಗೆ ದುಡಿವ ಮಹಿಳೆ ಹಾಗೂ ಗೃಹಿಣಿ ಇಬ್ಬರಿಗೂ ಅನ್ವಯ) ತಮ್ಮ ರಿಟೈರ್ಡ್ ಜೀವನದಲ್ಲಿ ಹೇಗೆ ನಿಭಾಯಿಸಬಲ್ಲಿರಿ ಎಂದು ಯೋಚಿಸಬೇಕಾದ ವಿಷಯ. ಅದಕ್ಕಾಗಿ ಈಗಿನಿಂದಲೇ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಮ್ಯೂಚುವಲ್ ಫಂಡ್, ಹೆಲ್ತ್ ಇನ್ಶೂರೆನ್ಸ್ , ಲೈಫ್ ಇನ್ಶೂರೆನ್ಸ್ ನಿಮಗೆ ಸಹಾಯವಾಗಬಲ್ಲವು.

ನಮ್ಮ ದೇಶದ ಆರ್ಥಿಕತೆಯನ್ನು ಸಮರ್ಥವಾಗಿ ನಿರ್ವಹಿಸಿ ಕೊಂಡು ಹೋಗುತ್ತಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಆದರ್ಶವನ್ನಿಟ್ಟುಕೊಂಡು ಮುನ್ನುಗ್ಗೋಣ . ಮನೆ ಮನೆಯಲಿ ಆರ್ಥಿಕ ಪರಿಸ್ಥಿತಿ ನಿರ್ವಹಿಸುವ ಸಶಕ್ತ ಮಹಿಳೆಯಾಗೋಣ.

ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು

ಬ್ಯಾಂಕ್ ಗಳಿಗಿಂತ ಸಾಸಿವೆ, ಜೀರಿಗೆ ಡಬ್ಬಿಗಳೆ ಹೆಚ್ಚು ಸಧೃಢ: ಎಂದ ಸಿಎಂ

ಉಳಿತಾಯ: ತಪ್ಪು ತಿಳಿವಳಿಕೆಯಿಂದ ಮೊದಲು ಹೊರ ಬನ್ನಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button