ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಮಹೇಂದ್ರ ತಮ್ಮಣ್ಣವರ್ ಮಧ್ಯೆ ತೀವ್ರ ಆರೋಪ- ಪ್ರತ್ಯಾರೋಪ ನಡೆಯುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ್ ಸರಿಯಾಗಿ ಕೆಲಸ ಮಾಡಲಿಲ್ಲ, ಈ ಬಗ್ಗೆ ಹೈಕಮಾಂಡ್ ಗೆ ದೂರು ನೀಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು. ಆದರೆ ಇದಕ್ಕೆ ಉತ್ತರ ನೀಡಿರುವ ತಮ್ಮಣ್ಣವರ್, ನನ್ನ ವಿಧಾನಸಭ ಚುನಾವಣೆಯಲ್ಲಿ ಬಂದ ಮತಷ್ಟೇ ಮತಗಳನ್ನು ನಾನು ಕಾಂಗ್ರೆಸ್ ಅಭ್ಯರ್ಥಿಗೆ ಕೊಡಿಸಿದ್ದೇನೆ ಎಂದು ತಿಳಿಸಿದ್ದಾರೆ.
ಬುದ್ದ, ಬಸವ, ಅಂಬೇಡ್ಕರ್ ತತ್ವಗಳನ್ನು ನಾನು ಪಾಲಿಸುತ್ತೇನೆ. ನಮಗೆ ಬೆಲೆ ಇಲ್ಲದ ಜಾಗದಲ್ಲಿ ಇರಲು ನಾನು ಇಷ್ಟಪಡಲ್ಲ ಎಂದು ಪರೋಕ್ಷವಾಗಿ ಸಚಿವ ಸತೀಶ ಜಾರಕಿಹೋಳಿ ವಿರುದ್ಧ ಶಾಸಕ ಮಹೇಶ ತಮ್ಮಣ್ಣವರ ಅಸಮಾಧಾನ ಹೊರ ಹಾಕಿದ್ದಾರೆ.
ಚಿಕ್ಕೋಡಿ ಪಟ್ಟಣದ ಕಲ್ಲೋಳಕರ ಫಾರ್ಮಹೌಸನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತೀಶ ಜಾರಕಿಹೊಳಿಗೆ ಮೊದಲಿನಿಂದಲೂ ಸಹಕಾರ ನೀಡಿದ್ದೇವೆ. ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 22 ಸಾವಿರ ಮತಗಳ ಲೀಡ್ ನೀಡದ್ದೇವೆ. ನನಗೆ ವಿಧಾನಸಭೆ ಚುನಾವಣೆಯಲ್ಲಿ ಬಂದಷ್ಟು ಲೀಡ್ ಎಂಪಿ ಚುನಾವಣೆಯಲ್ಲಿ ನೀಡಲಾಗಿದೆ. ಆದ್ರೆ ನಾನು ಪಕ್ಷೇತರ ಪರಾಜಿತ ಅಭ್ಯರ್ಥಿ ನಮ್ಮ ಮಾವನವರಾದ ಶಂಭು ಕಲ್ಲೋಳಿಕರ ಪರವಾಗಿ ಕೆಲಸ ಕೆಲಸ ಮಾಡಿದ್ದೇನೆ ಎಂದು ಸತೀಶ ಜಾರಕಿಹೋಳಿ ಆರೋಪ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಸತೀಶ ಜಾರಕಿಹೋಳಿ ಆರೋಪಕ್ಕೆ ಪ್ರತ್ಯುತ್ತರ ನೀಡಿದರು.
ನಮ್ಮ ಭಾಗದ ಬಹುತೇಕ ನಾಯಕರನ್ನು ಜಾರಕಿಹೊಳಿ ಪ್ಯಾಮಿಲಿ ರಾಜಕೀಯವಾಗಿ ನಿರ್ನಾಮ ಮಾಡಿದ್ದಾರೆ. ಕಲ್ಲೋಳಿಕರ ರಾಜಕೀಯವಾಗಿ ಮುಗಿಸಲು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಪಕ್ಷಕ್ಕೆ ಮೋಸ ಮಾಡುವ ಕೆಲಸ ನಾನು ಮಾಡಲ್ಲ. ನನ್ನ ಕ್ಷೇತ್ರದಲ್ಲಿ ಶಂಭು ಕಲ್ಲೋಳಿಕರಗೆ ಕೇವಲ ಮೂರು ಸಾವಿರ ಮತಗಳು ಬಂದಿವೆ. ಸತೀಶ ಜಾರಕಿಹೊಳಿ ರಾಜ್ಯದಲ್ಲಿಯೇ ಪ್ರಭಾವಿ ನಾಯಕರಿದ್ದಾರೆ. ನಮ್ಮನ್ನು ತುಳಿಯುವ ಕೆಲಸ ಜಾರಕಿಹೊಳಿ ಪ್ಯಾಮಿಲಿ ಮಾಡುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತ್ಯುತ್ತರ ನೀಡಿರುವ ಸತೀಶ್ ಜಾರಕಿಹೊಳಿ, ತಮ್ಮಣ್ಣವರ್ ಸಾಮರ್ಥ್ಯ ಕೇವಲ 3 -4 ಸಾವಿರ ಮತ. ಅದನ್ನು ಶಂಭು ಕಲ್ಲೋಳಿಕರ್ ಗೆ ಕೊಡಿಸಿದ್ದಾರೆ. ನಮಗೆ ಬಂದಿದ್ದೆಲ್ಲ ನಮ್ಮ ಪ್ರಯತ್ನದಿಂದ ಬಂದಿದೆ. ಅವರು ಏನೇನೂ ಕೆಲಸ ಮಾಡಿಲ್ಲ ಎಂದಿದ್ದಾರೆ. ನಾನು ಯಾವುದೇ ಸಮಾಜ ತುಳಿಯುವ ಕೆಲಸ ಮಾಡಿಲ್ಲ. ಆ ಕ್ಷೇತ್ರದಲ್ಲಿ ಅವರ ಸಮಾಜದವರು ದಡ್ಡ ಪ್ರಮಾಣದಲ್ಲಿ ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಅವರು ತಿಳಿಸಿದರು. ಈ ಹಿಂದೆ ಅವರಿಗೆ ವಿಧಾನಸಭೆ ಟಿಕೆಟ್ ಕೊಡಿಸಿದ್ದೇ ನಾನು ಎಂದೂ ಸತೀಶ್ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ