
ಪ್ರಗತಿವಾಹಿನಿ ಸುದ್ದಿ, ಭದ್ರಾವತಿ: ಬಹಳಷ್ಟು ನಿರೀಕ್ಷೆ ಇಟ್ಟು ಜನರು ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಜನರ ಮನಸ್ಸಿನಲ್ಲಿ ಮಂದಹಾಸ ತರುವಂತೆ ಕೆಲಸ ಮಾಡಿ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಭದ್ರಾವತಿಯಲ್ಲಿ ಭಾನುವಾರ ಶಿವಮೊಗ್ಗ ಜಿಲ್ಲೆಯಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಇಲಾಖೆಗೆ, ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಕ್ಕೆ ಹೆಸರು ಬರುವ ರೀತಿಯಲ್ಲಿ ನಾವು, ನೀವೆಲ್ಲ ಸೇರಿ ಕೆಲಸ ಮಾಡಬೇಕಿದೆ. ಇಡೀ ರಾಜ್ಯದ ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ಕೆಲಸ ಮಾಡಬೇಕಾಗಿದೆ. ಇಲಾಖೆಯಲ್ಲಿ ಎಲ್ಲೆಲ್ಲಿ ನ್ಯೂನತೆಗಳಿವೆ ಅದನ್ನು ಸರಿ ಮಾಡಬೇಕಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ಪೂರೈಸಬೇಕಿದೆ. ಹಾಗಾಗಿ ಎಲ್ಲರೂ ಅತ್ಯಂತ ದಕ್ಷತೆಯಿಂದ, ಸರಕಾರದ ಉದ್ದೇಶದಂತೆ, ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಸರಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಸಮರ್ಪಕ ಜಾರಿಯಾಗಬೇಕು. ಇದರಲ್ಲಿ ಸ್ವಲ್ಪವೂ ಲೋಪವಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಸರಕಾರಕ್ಕೆ ಕೆಟ್ಟ ಹೆಸರು ಬಾರದ ರೀತಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದೂ ಅವರು ಹೇಳಿದರು.
ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ
ಇದಕ್ಕೂ ಮೊದಲು, ಸಚಿವೆಯಾಗಿ ಮೊದಲ ಬಾರಿಗೆ ಭದ್ರಾವತಿಗೆ ಆಗಮಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ಕೋರಲಾಯಿತು. ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ರಾಜ್ಯದ ಜನರ ಆಶೀರ್ವಾದ ಹಾಗೂ ಸಿಎಂ, ಡಿಸಿಎಂ ಅವರ ಆಶೀರ್ವಾದದಿಂದ ಸಚಿವೆಯಾಗಿದ್ದೇನೆ. ಪಕ್ಷದ ಕಟ್ಟ ಕಡೆಯ ಕಾರ್ಯಕರ್ತನಿಗೂ ನ್ಯಾಯ ಸಿಗುವ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಭ್ರಷ್ಟಾಚಾರ, ಬೆಲೆ ಏರಿಕೆ ತಡೆಯುವ ಕೆಲಸವನ್ನು ಆದ್ಯತೆಯ ಮೇಲೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
https://pragati.taskdun.com/drinking-water-supply-meeting-on-june-7-under-the-chairmanship-of-minister/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ